Advertisement

ಮೀನುಗಾರಿಕಾ ಚಟುವಟಿಕೆಗಳು ಸ್ಥಗಿತ ಸಾಧ್ಯತೆ

04:43 AM Jan 06, 2019 | Team Udayavani |

ಮಹಾನಗರ : ಮಲ್ಪೆ ಬಂದರಿ ನಿಂದ ಮೀನುಗಾರಿಕೆಗೆ ತೆರಳಿದ್ದ ಏಳು ಮಂದಿ ಇದ್ದ ಸುವರ್ಣ ತ್ರಿಭುಜ ದೋಣಿ ನಾಪತ್ತೆಯಾಗಿ 21 ದಿನಗಳು ಕಳೆದಿವೆ. ನಾಪತ್ತೆಯಾದ ಮೀನುಗಾರರ ಪತ್ತೆಗಾಗಿ ರಾಜ್ಯ ಹಾಗೂ ಕೇಂದ್ರ ಸರಕಾರಗಳನ್ನು ಆಗ್ರಹಿಸಿ ಮಲ್ಪೆ ಮೀನುಗಾರರ ಸಂಘ ಆಯೋಜಿಸಿರುವ ರಾಸ್ತ ರೋಕೋ ಚಳವಳಿಗೆ ಬೆಂಬಲಿಸಿ ಮಂಗಳೂರು ಬಂದರು ರವಿವಾರ ಸಂಪೂರ್ಣ ಬಂದ್‌ ಆಗಲಿದೆ.

Advertisement

ಡಿ. 13ರಿಂದ ನಾಪತ್ತೆಯಾದ ಮೀನುಗಾರರು ಮತ್ತು ಬೋಟನ್ನು ಹುಡುಕಾಟ ನಡೆಸಿದರೂ ಈವರೆಗೆ ಪತ್ತೆ ಯಾಗಿಲ್ಲ. ಗೋವಾ, ಮಹಾರಾಷ್ಟ್ರದ ಗಡಿ ವ್ಯಾಪ್ತಿಯ ಸಮುದ್ರದಲ್ಲಿ ಮೀನುಗಾರರು ಕಣ್ಮರೆಯಾಗಿರುವ ವಿಚಾರ ಕೇಂದ್ರ, ರಾಜ್ಯ ಸರಕಾರದ ಗಮನಕ್ಕೆ ಬಂದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಮೀನುಗಾರಿಕೆ ಸಂಪೂರ್ಣ ಸ್ಥಗಿತ
ಆಳ ಸಮುದ್ರ ಬೋಟು, ಪರ್ಸಿನ್‌, ಟ್ರಾಲ್‌ ಬೋಟ್ ಹಾಗೂ ಇತರ ಬೋಟುಗಳು ಸೇರಿ ಮಂಗಳೂರು ಮೀನುಗಾರಿಕಾ ಬಂದರ್‌ನಲ್ಲಿ ಒಟ್ಟು 1,200 ಬೋಟುಗಳಿದ್ದು, ರವಿವಾರ ತಮ್ಮ ಮೀನುಗಾರಿಕಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲಿವೆ. ಈಗಾಗಲೇ ಹಲವು ಬೋಟುಗಳು ಬಂದರಿನಲ್ಲಿ ಲಂಗರು ಹಾಕಿವೆ. ಮೀನುಗಾರಿಕೆಗೆ ತೆರಳಿರುವ ಬೋಟುಗಳಿಗೂ ಮಾಹಿತಿ ನೀಡಲಾಗಿದ್ದು, ಕೆಲವು ಬೋಟುಗಳು ಹಿಂತಿರುಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಂದ್‌ ಹಿನ್ನೆಲೆಯಲ್ಲಿ ರವಿವಾರ ಬಂದರ್‌ನಲ್ಲಿ ಯಾವುದೇ ಮೀನುಗಾರಿಕಾ ವ್ಯವಹಾರಗಳು ನಡೆಯುವುದಿಲ್ಲ. ಈಗಾಗಲೇ ಮೀನುಗಾರಿಕೆಗೆ ತೆರಳಿ ರವಿವಾರ ಬಂದರ್‌ಗೆ ಆಗಮಿಸುವ ಬೋಟುಗಳ ಮೀನುಗಳನ್ನು ನಾಳೆ ಮಾರಾಟ ಮಾಡಲಾಗುವುದಿಲ್ಲ ಎಂದು ಮೀನುಗಾರಿಕಾ ಸಂಘ ತಿಳಿಸಿದೆ.

ಕೋಟ್ಯಾಂತರ ರೂ. ನಷ್ಟ
ನಾಪತ್ತೆಯಾಗಿರುವ ಮೀನು ಗಾರರ ಹುಡುಕಾಟಕ್ಕಾಗಿ ಉಭಯ ಜಿಲ್ಲೆಗಳ ಮೀನುಗಾರರು ಘೋಷಿಸಿರುವ ಬಂದ್‌ ಕಾರಣದಿಂದ ಮೀನುಗಾರಿಕಾ ಕ್ಷೇತ್ರಕ್ಕೆ ಕೋಟ್ಯಾಂತರ ರೂ. ನಷ್ಟ ಉಂಟಾಗಲಿದೆ. ಬಂದ್‌ ಹಿನ್ನೆಲೆಯಲ್ಲಿ ಯಾವುದೇ ಬೋಟುಗಳು ಮೀನುಗಾರಿಕಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಿದ್ದರೆ ಈ ಕ್ಷೇತ್ರವನ್ನು ಅವಲಂಬಿಸಿರುವ ವಿವಿಧ ಕ್ಷೇತ್ರಗಳು ತೊಂದರೆ ಅನುಭವಿಸಲಿವೆ.

Advertisement

500ಕ್ಕೂ ಅಧಿಕ ಮೀನುಗಾರರು ಉಡುಪಿಗೆ
ರಾಜ್ಯ, ಕೇಂದ್ರ ಸರಕಾರ ಆಧುನಿಕ ತಂತ್ರಜ್ಞಾನ ಬಳಸಿ ದೋಣಿ, ಏಳು ಮೀನುಗಾರರನ್ನು ಪತ್ತೆ ಹಚ್ಚಲು ಒತ್ತಡ ಹೇರಲು ಕರ್ನಾಟಕ ಕರಾವಳಿ ಮೀನುಗಾರರ ಸಂಘದ ರಾಸ್ತ ರೋಕೋ ಚಳವಳಿಗೆ ಮಂಗಳೂರಿನಿಂದ 500ಕ್ಕೂ ಅಧಿಕ ಮಂದಿ ಮೀನುಗಾರರು ಮಲ್ಪೆಗೆ ತೆರಳಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಪ್ರತಿಭಟನೆ ಭಾಗವಾಗಿ ಹಮ್ಮಿಕೊಳ್ಳಲಾಗಿರುವ ಮಲ್ಪೆಯಿಂದ ಉಡುಪಿಯ ಕರಾವಳಿ ಬೈಪಾಸ್‌ ವರೆಗೆ ಪಾದಯಾತ್ರೆ ಹಾಗೂ ಹೆದ್ದಾರಿ ಬಂದ್‌ ಕಾರ್ಯಕ್ರಮದಲ್ಲಿ ಮಂಗಳೂರಿನ ಮೀನುಗಾರರು ಪಾಲ್ಗೊಳ್ಳಲಿದ್ದಾರೆ.

ಇಷ್ಟು ದಿನ ನಾಪತ್ತೆ ಇದೇ ಮೊದಲು
ಮೀನುಗಾರಿಕೆಗೆ ತೆರಳಿದ ಬೋಟು ಗಳು ತಾಂತ್ರಿಕ ತೊಂದರೆ ಹಾಗೂ ಇನ್ನಿತರ ಕಾರಣಗಳಿಂದ ಕೆಲವು ದಿನ ತಡವಾಗಿ ಬರುತ್ತವೆ. ಆ ಬಗ್ಗೆ ದಡದಲ್ಲಿರುವವರಿಗೆ ಮಾಹಿತಿ ಲಭಿಸಿ ರುತ್ತದೆ. ಆದರೆ ಇಷ್ಟು ದಿನ ಒಂದು ಬೋಟು ಸಹಿತ ಮೀನುಗಾರರು ನಾಪತ್ತೆಯಾಗಿರುವುದು ಇದೇ ಮೊದಲು. ಸರಕಾರ ಈ ಬಗ್ಗೆ ಕ್ರಮ ಕೈಗೊಂಡು ನಾಪತ್ತೆಯಾದ ಮೀನುಗಾರರನ್ನು ಪತ್ತೆಹಚ್ಚಬೇಕು.
-ಮೋಹನ್‌ ಬೆಂಗ್ರೆ,
ಕರ್ನಾಟಕ ಪರ್ಸೀನ್‌ ಮೀನುಗಾರರ ಸಂಘದ ಅಧ್ಯಕ್ಷ

ಕ್ರಮ ಜರಗಿಸಿ
ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಬೋಟು ಹಾಗೂ ಮೀನುಗಾರರ ರಕ್ಷಣೆ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು. ಮಲ್ಪೆ ಮೀನುಗಾರರ ಸಂಘದ ಹೋರಾಟಕ್ಕೆ ಮಂಗಳೂರು ಮೀನುಗಾರರು ಸಂಪೂರ್ಣ ಬೆಂಬಲ ಸೂಚಿಸಿದ್ದೇವೆ. ಮುಂದಕ್ಕೆ ಇಂತಹ ಘಟನೆಗಳಾಗದಂತೆ ಸರಕಾರ ಸೂಕ್ತ ಕ್ರಮ ಜರಗಿಸಲಿ.
ನಿತಿನ್‌ಕುಮಾರ್‌,
  ಮಂಗಳೂರು ಟ್ರಾಲ್‌ ಬೋಟು ಮೀನುಗಾರರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next