Advertisement

9 ಮತ್ಸ್ಯಧಾಮ ಸಂರಕ್ಷ ಣಾ ವಲಯಕ್ಕೆ ಶಿಫಾರಸು

10:37 PM Nov 06, 2020 | sudhir |

ಶಿರಸಿ: ಉಭಯ ಸರ್ಕಾರಕ್ಕೆ ರಾಜ್ಯದ ಜೀವ ವೈವಿಧ್ಯ ಮಂಡಳಿ ನಾಡಿನ ಒಂಬತ್ತು ಸ್ಥಳಗಳಲ್ಲಿ ಮತ್ಸ್ಯಧಾಮ ಸಂರಕ್ಷಣಾ ವಲಯಕ್ಕೆ ಶಿಫಾರಸು ಮಾಡಿದೆ ಎಂದು ಮಂಡಳಿ ಅಧ್ಯಕ್ಷ ಅನಂತ ಅಶೀಸರ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಆದಿನಾರಾಯಣ ಸ್ವಾಮಿ ಬೆಟ್ಟವನ್ನು ರಾಜ್ಯ ಜೈವಿಕ ಪಾರಂಪರಿಕ ತಾಣ ಎಂದು ಘೋಷಿಸಲು ಕೂಡ ನಿರ್ಧಾರ ಮಾಡಲಾಗಿದೆ. ದಕ್ಷಿಣ ಜಿಲ್ಲೆ ಕಡಬ ಕುಮಾರಧಾರ ನದಿ ತೀರ ಉರುಂಬಿಗೆ ಸೂಕ್ಷ್ಮ ಜೈವಿಕ ಪ್ರದೇಶ ಎಂದು ಗುರುತಿಸಿ ಗೌರವಿಸಲಾಗುತ್ತಿದೆ. ಶಿರಸಿ ಸೋಂದಾ ಮುಂಡಿಗೆ ಕೆರೆಯನ್ನು ಪಕ್ಷಿಧಾಮ ಎಂದು ಘೋಷಿಸಲು ವನ್ಯಜೀವಿ ಇಲಾಖೆಗೆ ಶಿಫಾರಸು
ಮಾಡಲಾಗಿದೆ. ಹಾಸನದ ರಾಜಮುಡಿ ಭತ್ತ, ಕುಮಟಾ ಕಗ್ಗಭತ್ತ, ಅಂಕೋಲಾದ ಕರಿ ಈಶಾಡು ಬೆಳೆಗಳಿಗೆ ಜಿಯೋಗ್ರಫಿಕಲ್‌ ಇಂಡಿಕೇಟರ್‌ ಮಾನ್ಯತೆ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ವಿವರಿಸಿದ್ದಾರೆ.

Advertisement

ನೆಲಮಂಗಲ ತಾಲೂಕಿನ ಮಹಿಮಾರಂಗ ಬೆಟ್ಟ ಹಾಗೂ ಕೋಲಾರದ ಅಂತರಗಂಗೆ ಬೆಟ್ಟವನ್ನು ಜೀವವೈವಿಧ್ಯ ತಾಣ ಎಂದು ಮಂಡಳಿ ಗುರುತಿಸಿದೆ. ಘೋಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಚಿಕ್ಕಮಗಳೂರು ಜಿಲ್ಲೆ ಸಖರಾಯ ಪಟ್ಟಣದ ಶಕುನಗಿರಿ ಬೆಟ್ಟ ಅಪರೂಪದ ತಾಣವಾಗಿದೆ. ಪಕ್ಕದಲ್ಲೇ ಇರುವ ಹೊಗರೇ ಕಾನುಗಿರಿ ಪಾರಂಪರಿಕ ತಾಣಕ್ಕೆ ಈ ಬೆಟ್ಟ ಪ್ರದೇಶವನ್ನು ಸೇರ್ಪಡೆ ಮಾಡಲು ಶಿಫಾರಸು ಮಾಡಲಾಗಿದೆ. ಸೋಂದಾ ಗ್ರಾಮದ ಮುಂಡಿಗೆ ಕೆರೆ ಬೆಳ್ಳಕ್ಕಿಗಳ ತವರೂರಾಗಿದೆ. ಸ್ಥಳೀಯ ಗ್ರಾಪಂ
ಈಗಾಗಲೇ ಜೈವಿಕ ತಾಣ ಎಂದು ಗುರುತಿಸಿದೆ.

ಸ್ಥಳೀಯ ಜನತೆ ಪಕ್ಷಿಧಾಮ ಎಂದು ಘೋಷಿಸಲು ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆಯನ್ನು ಜೀವವೈವಿಧ್ಯ ಮಂಡಳಿ ಪುರಸ್ಕರಿಸಿದೆ. ವನ್ಯಜೀವಿ ಇಲಾಖೆಗೆ ಮುಂಡಿಗೆ ಕೆರೆ ಪಕ್ಷಿಧಾಮ ಘೋಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು
ಮಾಡಲಾಗಿದೆ. ರಾಜ್ಯದ 8 ಸ್ಥಳಗಳಲ್ಲಿ ಜೀವವೈವಿಧ್ಯ ಮಂಡಳಿ ಮತ್ಸ್ಯಧಾಮಗಳನ್ನು ಗುರುತಿಸಿ ಘೊಷಿಸಿದೆ. ಮೀನುಗಾರಿಕಾ ಇಲಾಖೆ ಮೂಲಕ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಇನ್ನೂ 7 ಸ್ಥಳಗಳಲ್ಲಿ ಅಪರೂಪದ ಮೀನು ವೈವಿಧ್ಯ ತಾಣಗಳನ್ನು ಗುರುತಿಸಿ ಘೋಷಣೆ ಮಾಡಲು ಮಂಡಳಿ ನಿರ್ಧರಿಸಿದೆ.

ಮೀನುಗಾರಿಕಾ ಇಲಾಖೆ ಜತೆ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಕುಮಟಾ ತಾಲೂಕಿನ ಗಜನಿ ಕಗ್ಗಭತ್ತ, ಹಾಸನದ ರಾಜಮುಡಿ ಅಕ್ಕಿ ಹಾಗೂ ಅಂಕೋಲಾ ತಾಲೂಕಿನ ಕರಿ ಈಶಾಡು ಮಾವಿನ ಹಣ್ಣು ಈ ಮೂರು ವಿನಾಶದ ಅಂಚಿನ ಕೃಷಿ ಮತ್ತು ತೋಟಗಾರಿಕಾ ಜೀವವೈವಿಧ್ಯ ತಳಿಗಳ ಉಳಿವಿಗೆ ರಾಜ್ಯ ಜೀವವೈವಿಧ್ಯ ಮಂಡಳಿ ವಿಶೇಷ ಗಮನ ನೀಡಿದೆ. ಈ ತಳಿಗಳಿಗೆ ಕೇಂದ್ರ ಸರ್ಕಾರ ಜಿಯಾಗ್ರಫಿಕಲ್‌ ಇಂಡಿಕೇಟರ್‌ ಸ್ಥಾನಮಾನ ನೀಡಬೇಕು ಎಂದು ಮಂಡಳಿ ಶಿಫಾರಸು ಮಾಡಿದೆ.

Advertisement

ಜೀವವೈವಿಧ್ಯ ಮಂಡಳಿ ಈ ಹಿಂದೇ ರಾಜ್ಯದಲ್ಲಿ 10 ಪಾರಂಪರಿಕ ವೃಕ್ಷಗಳನ್ನು ಗುರುತಿಸಿದೆ. ಇನ್ನಷ್ಟು ಪಾರಂಪರಿಕ ವೃಕ್ಷಗಳನ್ನು ಗುರುತಿಸಲು ಮುಂದಾಗಲಿದೆ. ರಾಜ್ಯಮಟ್ಟದ ಮಹಾನ್‌ ಪಾರಂಪರಿಕ ವೃಕ್ಷಗಳನ್ನು ಜೀವವೈವಿಧ್ಯ ಕಾಯಿದೆ ಅಡಿಯಲ್ಲಿ ಘೋಷಣೆ ಮಾಡಲು ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಿ ಸರ್ಕಾರದ ಒಪ್ಪಿಗೆ ಪಡೆಯಬೇಕು.

ಈ ಪ್ರಕ್ರಿಯೆ ನಡೆಸಲು ಮಂಡಳಿ ನಿರ್ಧಾರ ಕೈಗೊಂಡಿದೆ. ಗ್ರಾಮ ಸಾಮೂಹಿಕ ಭೂಮಿ, ಗ್ರಾಮ ನೈಸರ್ಗಿಕ ಸಂಪತ್ತಿನ ಸಂರಕ್ಷಣೆಗೆ ಜೀವವೈವಿಧ್ಯ ಮಂಡಳಿ ಸಮೀಕ್ಷೆ ನಡೆಸಿ ವರದಿ ಪಡೆಯಲು ತಜ್ಞರ ಸಮಿತಿ ರಚಿಸಲಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next