Advertisement

ಸಾಂಕ್ರಾಮಿಕ ತಡೆಗೆ ಮೀನಿಗೆ ಮೊರೆ: ಲಾರ್ವಾ ನಾಶಕ್ಕೆ ಗಪ್ಪಿ ಮೀನು

02:25 PM Jul 18, 2022 | Team Udayavani |

ಹುಬ್ಬಳ್ಳಿ: ಮಳೆಗಾಲದಲ್ಲಿ ತಲೆದೋರುವ ಸಾಂಕ್ರಾಮಿಕ ಕಾಯಿಲೆಗಳನ್ನು ತಡೆಗಟ್ಟಲು ಮಹಾನಗರ ಪಾಲಿಕೆ ವಿಶೇಷ ಪ್ರಯತ್ನಕ್ಕೆ ಮುಂದಾಗಿದೆ. ಸಾಂಕ್ರಾಮಿಕ ಕಾಯಿಲೆ ಹರಡುವ ಕೀಟಗಳ ನಾಶಕ್ಕೆ ಮೀನುಗಳ ಬಳಕೆಗೆ ಮುಂದಾಗಿದೆ. ನಿರಂತರ ನೀರು ಸಂಗ್ರಹವಾಗುವ ಸ್ಥಳಗಳಲ್ಲಿ ಮೀನುಗಳನ್ನು ಬಿಡಲಾಗುತ್ತಿದ್ದು, ಮಹಾನಗರ ಪಾಲಿಕೆಗಳ ಪೈಕಿ ರಾಜ್ಯದಲ್ಲಿಯೇ ಮೊದಲ ಪ್ರಯತ್ನವಾಗಿದೆ.

Advertisement

ನಿರಂತರವಾಗಿ ಸುರಿಯುತ್ತಿರುವ ಮಳೆ ಡೆಂಘಿ, ಮಲೇರಿಯಾ, ಚಿಕೂನ್‌ಗುನ್ಯ ಸೇರಿದಂತೆ ಕೆಲ ಸಾಂಕ್ರಾಮಿಕ ರೋಗಗಳ ಭೀತಿ ಸೃಷ್ಟಿಸಿದೆ. ತಗ್ಗು ಪ್ರದೇಶಗಳು, ನೀರು ಹರಿಯದೆ ನಿಂತಿರುವ ನಾಲಾಗಳು ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸುವಂತಿವೆ. ಇಂತಹ ಪ್ರದೇಶಗಳನ್ನು ಗುರುತಿಸಿ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಪಾಲಿಕೆಯ ಆರೋಗ್ಯ ಇಲಾಖೆಯಿಂದ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ವಿಶೇಷವಾಗಿ ಲಾರ್ವಾಗಳನ್ನು ನಾಶ ಮಾಡಿ ಅಪಾಯಕಾರಿ ಸೊಳ್ಳೆಗಳ ಉತ್ಪತ್ತಿಗೆ ಕಡಿವಾಣ ಹಾಕುವ ಕಾರ್ಯಕ್ಕೆ ಗಪ್ಪಿ ಮೀನುಗಳನ್ನು ಬಳಸುತ್ತಿದ್ದಾರೆ. ಮಹಾನಗರ ವ್ಯಾಪ್ತಿಯಲ್ಲಿ ಉಣಕಲ್ಲ, ನಾಗಶೆಟ್ಟಿಕೊಪ್ಪ, ಸಂತೋಷನಗರ ಕೆರೆ ಸೇರಿದಂತೆ 21 ಕೆರೆ ಹಾಗೂ 70 ನಾಲಾಗಳನ್ನು ಗುರುತಿಸಲಾಗಿದೆ. ಈಗಾಗಲೇ ಹುಬ್ಬಳ್ಳಿಯಲ್ಲಿ ಪೂರ್ಣಗೊಂಡಿದ್ದು, ಧಾರವಾಡದಲ್ಲಿ ಕಾರ್ಯ ನಡೆಯುತ್ತಿದೆ.

ಒಂದು ಸ್ಥಳದಲ್ಲಿ ನಿರಂತರವಾಗಿ ನೀರು ಸಂಗ್ರಹವಾಗುವುದರಿಂದ ಮೇಲ್ಪದರಿನಲ್ಲಿ ಲಾರ್ವಾಗಳು ಉತ್ಪತ್ತಿಯಾಗುತ್ತವೆ. ಹೀಗಾಗಿಯೇ ಇಂತಹ ಸ್ಥಳ ಗುರುತಿಸಿ ಗಪ್ಪಿ ಮೀನುಗಳನ್ನು ಬಿಡುವ ಕೆಲಸ ನಡೆಯುತ್ತಿದೆ. ಇವು ಲಾರ್ವಾ ಆಹಾರಿಯಾಗಿರುವ ಕಾರಣ ಸೊಳ್ಳೆಗಳ ಪ್ರಮಾಣ ಕಡಿಮೆಯಾಗಲಿದೆ. ಒಂದು ಕೆರೆಗೆ 5 ಸಾವಿರ ಮೀನುಗಳಂತೆ ಬಿಡಲಾಗುತ್ತಿದೆ. ಆರೋಗ್ಯ ಇಲಾಖೆ ಈ ಮೀನುಗಳನ್ನು ಮಹಾನಗರ ಪಾಲಿಕೆಗೆ ನೀಡಿದ್ದು, ಅತ್ಯಂತ ಕಡಿಮೆ ಖರ್ಚಿನಲ್ಲಿ ಈ ಪ್ರಯೋಗಕ್ಕೆ ಪಾಲಿಕೆ ಮುಂದಾಗಿದೆ.

ಗಪ್ಪಿ ಮೀನಿನ ವಿಶೇಷತೆ

ಈಗಾಗಲೇ ಗ್ರಾಮೀಣ ಭಾಗದಲ್ಲಿ ಇವುಗಳನ್ನು ಬಿಡಲಾಗುತ್ತಿದೆ. ಆದರೆ ಮಹಾನಗರ ಪಾಲಿಕೆಗಳ ಪೈಕಿ ಇದು ಮೊದಲ ಪ್ರಯತ್ನ. ಇವು ನೀರಿನ ಮೇಲ್ಪದರಿನಲ್ಲಿ ಉತ್ಪತ್ತಿಯಾಗುವ ಲಾರ್ವಾವನ್ನು ತಿಂದು ಜೀವಿಸುತ್ತವೆ. ವಿಶೇಷವಾಗಿ ಮಲೇರಿಯಾ ರೋಗ ಹರಡಿಸುವಂತಹ ಲಾರ್ವಾಗಳನ್ನು ನಾಶ ಮಾಡುತ್ತವೆ. ಅತ್ಯಂತ ಸಣ್ಣದಾಗಿರುವುದರಿಂದ ಮೀನುಗಾರರ ಗಾಳ, ಬಲೆಗೆ ಬೀಳುವುದಿಲ್ಲ. ಕಡಿಮೆ ಅವಧಿಯಲ್ಲಿಯೇ ಮೀನುಗಳು ಹೆಚ್ಚಾಗಲಿವೆ. ಅಣ್ಣಿಗೇರಿಯಿಂದ ಈ ಮೀನುಗಳನ್ನು ತರಲಾಗಿದೆ.

Advertisement

ಇನ್ನಷ್ಟು ಯಂತ್ರ ಖರೀದಿ

ಈಗಾಗಲೇ ಫಾಗಿಂಗ್‌ ಕಾರ್ಯ ನಡೆಯುತ್ತಿದ್ದರೂ ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಮತ್ತಷ್ಟು ಯಂತ್ರಗಳನ್ನು ಖರೀದಿಸಲು ಪಾಲಿಕೆ ಮುಂದಾಗಿದೆ. ಪ್ರಾಯೋಗಿಕವಾಗಿ ಈ ಕಾರ್ಯವನ್ನು ಕೇಂದ್ರೀಕೃತವಾಗಿ ನಿರ್ವಹಿಸಲು ನಿರ್ಧರಿಸಿದೆ. ಮೂರ್‍ನಾಲ್ಕು ದಿನಗಳಲ್ಲಿ ಮತ್ತಷ್ಟು ಯಂತ್ರಗಳು ಬರಲಿವೆ. ಪ್ರಮುಖವಾಗಿ ಜನರು ಲಾರ್ವಾ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಲಾರ್ವಾ ಉತ್ಪತ್ತಿಯಾಗಿರುವ ಕುರಿತು ತಿಳಿದು ಬಂದರೆ ಕೂಡಲೇ ಪಾಲಿಕೆ ಕಂಟ್ರೋಲ್‌ ರೂಂಗೆ ಕರೆ ಮಾಡಿ ತಿಳಿಸಿದರೆ ಫಾಗಿಂಗ್‌ ಮಾಡಲಾಗುತ್ತದೆ.

ವಿದ್ಯಾರ್ಥಿಗಳ ಸಾಥ್‌

ಪಾಲಿಕೆ ವ್ಯಾಪ್ತಿಯ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಪ್ರದೇಶಗಳನ್ನು ಪಾಲಿಕೆ ಗುರುತಿಸಿದೆ. ಇಲ್ಲಿ ಲಾರ್ವಾ ಸಮೀಕ್ಷೆ, ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಕಾರ್ಯಕ್ಕೆ ಶಕುಂತಲಾ ನರ್ಸಿಂಗ್‌ ಹೋಂ ಕಾಲೇಜಿನ 150 ವಿದ್ಯಾರ್ಥಿಗಳು ಕೈ ಜೋಡಿಸಿದ್ದಾರೆ. ಜನರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಬಗ್ಗೆ ತಿಳಿಸುತ್ತಿದ್ದಾರೆ. ಲಾರ್ವಾ ಪತ್ತೆಯಾದ ಕಡೆಯಲ್ಲಿ ಫಾಗಿಂಗ್‌ ಮತ್ತು ಸ್ಪ್ರೆ ಮಾಡುವ ಕಾರ್ಯ ನಡೆಯುತ್ತಿದೆ.

ಮಳೆಗಾಲದಲ್ಲಿ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ನಿತ್ಯವೂ ಕೆಲ ಕಾರ್ಯಗಳನ್ನು ಮಾಡಲಾಗುತ್ತದೆ. ಈಗಾಗಲೇ ಲಾರ್ವಾ ಸಮೀಕ್ಷೆ ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ. ಈ ಕೆಲಸಗಳೊಂದಿಗೆ ಮೊದಲ ಬಾರಿಗೆ ಗಪ್ಪಿ ಮೀನುಗಳನ್ನು ನಿರಂತರ ನೀರು ಸಂಗ್ರಹವಾಗುವ ಸ್ಥಳಗಳಲ್ಲಿ ಬಿಡಲಾಗುತ್ತಿದೆ. ಆರೋಗ್ಯ ಇಲಾಖೆಯಿಂದ ಈ ಮೀನುಗಳನ್ನು ಪಡೆಯಲಾಗಿದೆ. ಜನರೂ ಜಾಗೃತಿ ವಹಿಸಿ ಲಾರ್ವಾ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. –ಡಾ| ಶ್ರೀಧರ ದಂಡಪ್ಪನವರ, ಮುಖ್ಯ ಆರೋಗ್ಯಾಧಿಕಾರಿ, ಮಹಾನಗರ ಪಾಲಿಕೆ

ಪ್ರಮುಖವಾಗಿ ಮಲೇರಿಯಾ ಹರಡುವ ಲಾರ್ವಾ ಉತ್ಪತ್ತಿಯಾಗುವ ನೀರಿಗೆ ಗಪ್ಪಿ ಮೀನುಗಳನ್ನು ಬಳಸಲಾಗುತ್ತದೆ. ಉಳಿದಂತೆ ಕೆರೆ ಹಾಗೂ ನಾಲಾಗಳಲ್ಲಿ ಬಿಡುವುದರಿಂದ ತೊಂದರೆ ಕೊಡುವ ಸೊಳ್ಳೆಗಳು ಉತ್ಪತ್ತಿಯಾಗದಂತೆ ತಡೆಯಲಿವೆ. ಚಿಕೂನ್‌ಗುನ್ಯ ಹಾಗೂ ಡೆಂಘಿ ತರುವ ಸೊಳ್ಳೆಗಳು ಸ್ವತ್ಛ ನೀರಿನಲ್ಲಿ ಉತ್ಪತ್ತಿಯಾಗಲಿವೆ. ಹೀಗಾಗಿ ದೊಡ್ಡ ಟ್ಯಾಂಕ್‌ಗಳಲ್ಲಿಯೂ ಈ ಮೀನುಗಳನ್ನು ಬಿಡಬಹುದಾಗಿದೆ. –ಟಿ.ಪಿ. ಮಂಜುನಾಥ, ಜಿಲ್ಲಾ ಕೀಟಶಾಸ್ತ್ರಜ್ಞ

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next