Advertisement

Karnataka: ಮೀನು ಮಾರಿದ ಹಣ ಇಂಧನ ಇಲಾಖೆಗೆ- ಡಿ.ಕೆ. ಶಿವಕುಮಾರ್‌ 

10:59 PM Jul 11, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಏತ ನೀರಾವರಿ ಮೂಲಕ ತುಂಬಿಸುವ ಕೆರೆಗಳಲ್ಲಿ ಮೀನು ಕೃಷಿ ಮಾಡಿ, ಅವುಗಳನ್ನು ಹರಾಜು ಹಾಕಿದ ಹಣದಲ್ಲಿ ಇಂಧನ ಇಲಾಖೆಯ ಬಾಕಿ ಪಾವತಿಸಲು ಸರಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿಧಾನಸಭೆಯಲ್ಲಿ ಹೇಳಿದರು.

Advertisement

ಬಿಜೆಪಿಯ ಬಿ. ಸುರೇಶ್‌ಗೌಡ ಪ್ರಶ್ನೆಗೆ ಉತ್ತರಿಸಿ, ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ಹರಿಸಲು ಬಳಸಿರುವ ವಿದ್ಯುತ್‌ ಶುಲ್ಕ ಇದುವರೆಗೆ 4 ಸಾವಿರ ಕೋಟಿ ರೂ. ಬಾಕಿ ಇದೆ. ಇದನ್ನು ಇಂಧನ ಇಲಾಖೆಗೆ ಜಲಸಂಪನ್ಮೂಲ ಇಲಾಖೆ ಪಾವತಿಸಬೇಕಿದೆ. ಕೆರೆ ತುಂಬಿಸುವ ಯೋಜನೆಗಳಿಂದ ಸರಕಾರಕ್ಕೆ ಆದಾಯಕ್ಕಿಂತ ಖರ್ಚು ಜಾಸ್ತಿಯಾಗುತ್ತಿದೆ. ಇದೊಂದು ಕೆಟ್ಟ ಸಂಪ್ರದಾಯ ಬೆಳೆಸಿಕೊಂಡಿದ್ದೇವೆ. ಎಲ್ಲರಿಗೂ ಏತ ನೀರಾವರಿ ಯೋಜನೆ ಬೇಕು, ಕೆರೆಗಳನ್ನು ತುಂಬಿಸಬೇಕು. ಅದಕ್ಕೆ ಬಳಕೆಯಾಗುವ ವಿದ್ಯುತ್‌ ದರವನ್ನು ಯಾರೂ ಭರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ಮುಂದೆ ಸಣ್ಣ ನೀರಾವರಿ ಅಥವಾ ಜಲಸಂಪನ್ಮೂಲ ಇಲಾಖೆ ಯಿಂದ ಕೈಗೊಳ್ಳುವ ಏತ ನೀರಾವರಿ ಯೋಜನೆಗಳಿಂದ ಕೆರೆ ತುಂಬಿಸಿ, ಆ ಕೆರೆಗಳಲ್ಲಿ ಮೀನು ಸಾಕಾಣಿಕೆ ಮಾಡಲಾಗುತ್ತದೆ. ಅವುಗಳನ್ನು ಹರಾಜು ಮಾಡಿದರೆ, ಸರಕಾರಕ್ಕೆ ಆದಾಯ ಬರಲಿದೆ. ಇದರಿಂದ ಇಂಧನ ಇಲಾಖೆಗೆ ಹಣ ಕಟ್ಟಲು ಸಹಾಯವಾಗುತ್ತದೆ. ಈ ಬಗ್ಗೆ ಮೀನುಗಾರಿಕೆ, ಇಂಧನ ಸಚಿವರ ಜತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಸೌರಫ‌ಲಕ, ಪವನ ವಿದ್ಯುತ್‌ ಯಂತ್ರ ಅಳವಡಿಕೆ
ಇಂಧನ ಸಚಿವ ಕೆ.ಜೆ. ಜಾರ್ಜ್‌ ಮಾತನಾಡಿ, ಸರಕಾರದ ಅನೇಕ ಇಲಾಖೆ ಹಾಗೂ ಸಂಸ್ಥೆಗಳಿಂದ ನಮ್ಮ ಇಲಾಖೆಗೆ ಸಾಕಷ್ಟು ಹಣ ಬರಬೇಕಿದೆ. ಮೀನು ಕೃಷಿ ಬಗ್ಗೆ ಒಂದು ಸುತ್ತಿನ ಚರ್ಚೆಯಾಗಿದೆ. ಇದರೊಂದಿಗೆ ಎಲ್ಲೆಲ್ಲಿ ಕೆರೆಗಳಿವೆಯೋ ಅಲ್ಲೆಲ್ಲ ಸೌರಫ‌ಲಕ ಅಥವಾ ಪವನ ವಿದ್ಯುತ್‌ ಯಂತ್ರಗಳನ್ನು ಅಳವಡಿಸುವ ಕುರಿತೂ ಚಿಂತನೆ ನಡೆದಿದೆ ಎಂದರು.

ಅಂತರ್ಜಲ ಮಟ್ಟ ಅಳೆಯಲು ಉಪಕರಣ ಅಳವಡಿಕೆ
ರಾಜ್ಯದಲ್ಲಿ ಅಂತರ್ಜಲಮಟ್ಟ ಮಾಪನ ಮಾಡಲು ಟೆಲಿಮೆಟ್ರಿ ಒಳಗೊಂಡ ಡಿಜಿಟಲ್‌ ವಾಟರ್‌ ಲೆವೆಲ್‌ ರೆಕಾರ್ಡರ್‌ (ಡಿಡಬ್ಲ್ಯುಎಲ್‌ಆರ್‌) ಅಳವಡಿಸುತ್ತಿದ್ದು, ಇದುವರೆಗೆ 2005 ಉಪಕರಣಗಳನ್ನು ಅಳವಡಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್‌. ಬೋಸರಾಜು ವಿಧಾನಸಭೆಯಲ್ಲಿ ಹೇಳಿದರು.
ಕಾಂಗ್ರೆಸ್‌ನ ನಾರಾಯಣ ಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಅವರು, ಈ ಉಪಕರ ಣಗಳ ಅಳವಡಿಕೆಯಿಂದ ದಿನಕ್ಕೆ ನಾಲ್ಕು ಬಾರಿ ಅಂತರ್ಜಲ ಮಟ್ಟ ದಾಖಲಿಸಿ, ನಿಖರವಾದ ದತ್ತಾಂಶವನ್ನು ನೇರವಾಗಿ ಮಾಹಿತಿ ಕೇಂದ್ರಕ್ಕೆ ರವಾನಿಸಬಹುದು. ಅಂತರ್ಜಲ ಬಳಕೆಯ ಜಲಮಟ್ಟದಲ್ಲಿ ಆಗುವ ಬದಲಾವಣೆ ತಿಳಿಯ ಬಹುದು. ಅತಿವೃಷ್ಟಿ, ಅನಾವೃಷ್ಟಿ ಅಧ್ಯಯನಕ್ಕೂ ಇದು ಪ್ರಮುಖ ದತ್ತಾಂಶ ಒದಗಿಸಲಿದೆ ಎಂದರು.

Advertisement

ಅಂತರ್ಜಲ ನಿರ್ದೇಶನಾಲಯ ದಿಂದ 1,191 ಉಪಕರಣ ಅಳವಡಿ ಸಿದ್ದು, ಅಟಲ್‌ ಭೂಜಲ ಯೋಜನೆ ಜಾರಿಯಲ್ಲಿರುವ 41 ತಾಲೂಕುಗಳಲ್ಲಿ 814 ಉಪಕರಣ ಅಳವಡಿಸಿದ್ದು, ಇನ್ನುಳಿದ 156 ಉಪಕರಣಗಳ ಅಳವಡಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಪ್ರಗತಿಯಲ್ಲಿರುವ ಕಾಮಗಾರಿ ಪೂರ್ಣ
ಬಿಜೆಪಿಯ ಆರಗ ಜ್ಞಾನೇಂದ್ರ ಪ್ರಶ್ನೆಗೆ ಉತ್ತರಿಸಿದ ಸಚಿವ ಬೋಸರಾಜು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ವರ್ಷದಲ್ಲಿ ಅನುಮೋದನೆಗೊಂಡಿದ್ದ 71 ಕಾಮಗಾರಿಗಳ ಪೈಕಿ 40 ಕಾಮಗಾರಿಗಳು ಪೂರ್ಣಗೊಂಡಿವೆ. ಪ್ರಗತಿಯಲ್ಲಿರುವ 26 ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುತ್ತದೆ. ಟೆಂಡರ್‌ ಹಂತದಲ್ಲಿರುವ 5 ಕಾಮಗಾರಿಗಳನ್ನು ಮುಂದಿನ ದಿನಗಳಲ್ಲಿ ಅನುದಾನದ ಲಭ್ಯತೆಗೆ ಅನುಗುಣವಾಗಿ ಕೈಗೆತ್ತಿಕೊಳ್ಳಲಾಗುತ್ತದೆ. ಇನ್ನು ಗುತ್ತಿಗೆದಾರರ ಬಿಲ್‌ ಪಾವತಿಗೂ ಹೊಸ ವ್ಯವಸ್ಥೆ ತರಲಾಗುವುದು ಎಂದರು.
.

Advertisement

Udayavani is now on Telegram. Click here to join our channel and stay updated with the latest news.

Next