Advertisement

ಮೀನಿಗೆ ಕುದುರಿದ ಬೇಡಿಕೆ; ಗಗನಕ್ಕೇರಿದ ದರ

12:18 AM Mar 19, 2020 | Sriram |

ಮಲ್ಪೆ: ಕೋವಿಡ್‌ 19 ವೈರಸ್‌ ಹಾವಳಿ ಹಿನ್ನೆಲೆಯಲ್ಲಿ ಮಾಂಸ, ಕೋಳಿಗೆ ಬೇಡಿಕೆ ಕಡಿಮೆಯಾದ ಬೆನ್ನಲ್ಲೇ ಮೀನಿಗೆ ಬೇಡಿಕೆ ಕುದುರಿದ್ದು, ಮೀನಿನ ದರವೂ ಗಗನಕ್ಕೇರಿದೆ.

Advertisement

ಕೋಳಿ ಮಾಂಸ ತಿಂದರೆ ಕೊರೊನಾ ಬರುತ್ತದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಮೀನಿನ ಬೆಲೆ ಏರಿಕೆಯಾಗಿದೆ. ಕರಾವಳಿಯಲ್ಲಿ ಮೀನಿನ ಅಲಭ್ಯತೆ ಯಿಂದ ತಮಿಳುನಾಡು, ಗುಜರಾತ್‌ ರಾಜ್ಯ ಗಳಿಂದ ಮೀನು ಆಮದು ಮಾಡಲಾಗುತ್ತಿದೆ.

ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಎಸ್‌.ಸುವರ್ಣ ಅವರು ಜತೆ ಮಾತನಾಡಿ, ಕೊರೊನಾದಿಂದ ಮೀನುಗಾರಿಕೆಗೆ ಯಾವುದೇ ಪರಿಣಾಮ ಉಂಟಾಗಿಲ್ಲ. ಆದರೆ ಕೆಲವೊಂದು ಕಿಡಿಗೇಡಿಗಳು ಮೀನಿಗೆ ಕೋವಿಡ್‌ 19 ವೈರಸ್‌ ಬಂದಿದೆ ಎಂದು ಮೀನಿನ ಚಿತ್ರವನ್ನು ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ಗಮನಕ್ಕೂ ಬಂದಿದೆ. ಇಂತಹ ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಮೀನಿಗೆ ಉತ್ತಮ ಬೇಡಿಕೆ ಇದ್ದು, ದರ ಏರಿಕೆ ಕಂಡಿದೆ. ಆದರೆ ಮೀನಿನ ಲಭ್ಯತೆ ಇಲ್ಲದ್ದರಿಂದ ಮೀನುಗಾರಿಕೆ ನಷ್ಟದಲ್ಲಿ ಸಾಗಿದೆ.

ಮೀನಿನ ದರ
ಫೆಬ್ರವರಿಗೆ ಮೊದಲು ಇದ್ದ ಮೀನಿನ ದರಕ್ಕೂ ಇಂದಿನ ದರಕ್ಕೂ ಸಾಕಷ್ಟು ವ್ಯತ್ಯಾಸವಾಗಿದೆ. ಕೆ.ಜಿ. 600 ರೂ. ಇದ್ದ ಅಂಜಲ್‌ ಮೀನಿಗೆ 800 ರೂ. ಆಗಿದೆ. ದೊಡ್ಡ ಗಾತ್ರದ 250 ರೂ. ಅಡೆಮೀನಿಗೆ 400, 250ರ ಕೊಡ್ಡಯಿ ಮೀನಿಗೆ 350, 900 ರೂ. ಇದ್ದ ಪಾಂಪ್ರಟ್‌ 1,100, ದೊಡ್ಡ ಕಂಡಿಗೆ 800 ರೂ. ಇದ್ದದ್ದು 1,000 ರೂ. ಏರಿದೆ. 10 ಬೂತಾಯಿಗೆ 100 ರೂ. ಒಂದು ದೊಡ್ಡ ಬಂಗುಡೆಗೆ 40 ರೂಪಾಯಿ ಇದೆ.

ಬೋಟುಗಳು ಲಂಗರು
ಸದ್ಯ ಸಮುದ್ರದಲ್ಲಿ ಮೀನು ಲಭ್ಯತೆ ಇಲ್ಲದೆ ಮೀನುಗಾರಿಕೆ ಶೇ. 80ರಷ್ಟು ಕುಂಠಿತಗೊಂಡಿದೆ. ಮೀನುಗಾರಿಕೆ ನಷ್ಟದಲ್ಲಿರುವುದರಿಂದ ಶೇ. 35 ರಷ್ಟು ಬೋಟುಗಳು ಬಂದರಿನಲ್ಲಿ ಲಂಗರು ಹಾಕಿವೆ. ಮಲ್ಪೆ ಬಂದರಿನಲ್ಲಿ ಸುಮಾರು 1,800ಕ್ಕೂ ಅಧಿಕ ಯಾಂತ್ರೀಕೃತ ಬೋಟುಗಳಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗಿದ್ದರೂ ದೇಶದಲ್ಲಿ ಬೆಲೆ ವ್ಯತ್ಯಾಸವಾಗಿಲ್ಲ. ಸರಕಾರ ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮಲ್ಪೆ ಮೀನುಗಾರ ಸಂಘದ ಪ್ರಧಾನ ಕಾರ್ಯದರ್ಶಿ ಸುಭಾಷ್‌ ಮೆಂಡನ್‌, ಕೋಶಾಧಿಕಾರಿ ಶಿವಾನಂದ ಕುಂದರ್‌ ಹೇಳುತ್ತಾರೆ.

Advertisement

ಎಚ್ಚರಿಕೆ ಫಲಕ
ಮೀನುಗಾರಿಕೆ ಇಲಾಖೆ ಬಂದರಿನಲ್ಲಿ ಎಚ್ಚರಿಕೆ ಫಲಕ ಅಳವಡಿಸಿದೆ. ಬೋಟು ಮಾಲಕರು ಮತ್ತು ವ್ಯಾಪಾರಸ್ಥರು ಕೆಲಸಗಾರರ ಆರೋಗ್ಯದ ಬಗ್ಗೆ ವಿಚಾರಿಸಿ ನೇಮಿಸಿಕೊಳ್ಳಬೇಕು. ಈ ರೋಗದ ಗುಣಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಮೀನುಗಾರಿಕೆ ಇಲಾಖೆ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು, ಕೋವಿಡ್‌ 19 ಹಿನ್ನೆಲೆಯಲ್ಲಿ ವಹಿಸಬೇಕಾದ ಎಚ್ಚರಿಕೆ ಬಗ್ಗೆ ಮಾಹಿತಿಯನ್ನೂ ನೀಡಲಾಗಿದೆ.

ಕೋವಿಡ್‌ 19 ಜಾಗೃತಿ
ಕೋವಿಡ್‌ 19 ಹಿನ್ನೆಲೆಯಲ್ಲಿ ಕೇರಳ ಸಮುದ್ರ ಸಮೀಪ ಮೀನುಗಾರಿಕೆ ನಡೆಸುವ ನಮ್ಮ ಮೀನುಗಾರರಿಗೆ ಈಗಾಗಲೇ ಆ ರಾಜ್ಯದ ಮೀನುಗಾರರು, ಜನ ಸಮೂಹದಿಂದ ಅಂತರ ಕಾಪಾಡಿಕೊಳ್ಳುವಂತೆ, ಬಂದರು ಪ್ರವೇಶಿಸದಂತೆ ಸಲಹೆ, ಸೂಚನೆ ನೀಡಲಾಗಿದೆ. ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಮೀನುಗಾರಿಕೆ ಇಲಾಖೆಯ ಸಹಕಾರದಿಂದ ಕೋವಿಡ್‌ 19 ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
– ಕೃಷ್ಣ ಎಸ್‌. ಸುವರ್ಣ, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

ಮೀನು ದುಬಾರಿ
ಮೀನಿನ ಬರದಿಂದಾಗಿ ದಿನದಿಂದ ದಿನಕ್ಕೆ ಮಾರುಕಟ್ಟೆಯಲ್ಲಿ ದರವೂ ವಿಪರೀತ ಏರಿಕೆಯಾಗಿದೆ. ಕೋಳಿ ತಿಂದರೆ ಕೋವಿಡ್‌ 19 ಬರುತ್ತದೆ ಎಂಬ ವದಂತಿ ಹರಡಿದ ಅನಂತರ ಮೀನು ಖರೀದಿಸುವವರ ಸಂಖ್ಯೆಯೂ ಜಾಸ್ತಿಯಾಗಿದೆ.
– ಬೇಬಿ ಎಚ್‌. ಸಾಲ್ಯಾನ್‌, ಅಧ್ಯಕ್ಷ ಉಡುಪಿ ತಾ. ಮಹಿಳಾ ಹಸಿಮೀನು ಮಾರಾಟಗಾರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next