Advertisement

ಕೃಷಿ ಉತ್ತೇಜನಕ್ಕೆ ಮೀನು ಮರಿ ಉತ್ಪಾದನಾ ಕೇಂದ್ರ

07:22 PM Aug 06, 2022 | Team Udayavani |

ನಾರಾಯಣಪುರ: ಬಸವಸಾಗರ ಸಮೀಪದ ಪ್ರಾದೇಶಿಕ ಮೀನು ಮರಿ ಉತ್ಪಾದನಾ ಕೇಂದ್ರ ಆಗ್ನೇಯ ಏಷ್ಯಾದ ಎರಡನೇ ದೊಡ್ಡ ಮೀನು ಮರಿ ಉತ್ಪಾದನಾ ಕೇಂದ್ರವಾಗಿದೆ.

Advertisement

ಇಲ್ಲಿ ವಿವಿಧ ತಳಿಯ ಮೀನು ಮರಿಗಳು ಮಾರಾಟಕ್ಕೆ ಲಭ್ಯವಿದ್ದು, ಕೇಂದ್ರದ ವ್ಯಾಪ್ತಿಯ ನಗರ-ಪಟ್ಟಣಗಳು ಸೇರಿದಂತೆ ವಿವಿಧ ಜಿಲ್ಲೆಗಳ ಮೀನು ಕೃಷಿ ಮಾಡುವ ರೈತರು ಮೀನು ಮರಿಗಳ ಖರೀದಿಸಲು ಇಲ್ಲಿಗೆ ಆಗಮಿಸುತ್ತಿದ್ದಾರೆ.

ಈಗಾಗಲೇ ಇಲಾಖೆ ಒಂದು ಸಾವಿರ ಕಾಟ್ಲಾ ಮೀನು ಮರಿಗೆ 400 ರೂ. ನಿಗದಿ ಮಾಡಿದ್ದರೆ, ಒಂದು ಸಾವಿರ ರೋಹು ಹಾಗೂ ಮೃಗಾಲ ಮೀನು ಮರಿಗಳಿಗೆ 350 ರೂ, ಒಂದು ಸಾವಿರ ಕಾಮನ್‌ ಕಾರ್ಪ್‌ (ಸಾಮಾನ್ಯ ಗೆಂಡೆ) ಮೀನು ಮರಿಗಳಿಗೆ 300ರೂ. ನಿಗದಿ ಮಾಡಲಾಗಿದೆ. ಹೆಚ್ಚು ಬೇಡಿಕೆ ಇರುವ ಕಾಮನ್‌ ಕಾರ್ಪ್‌ ಮೀನುಗಳ ಮೂರು ಲಕ್ಷದಷ್ಟು ಮರಿಗಳು ಲಭ್ಯವಿದೆ ಎಂದು ಸಹಾಯಕ ನಿರ್ದೇಶಕ ಬಿ.ಎಸ್‌. ಲಮಾಣಿ ತಿಳಿಸಿದ್ದಾರೆ.

ಅಂದಾಜು 73 ಎಕರೆ ಪ್ರದೇಶ ವಿಸ್ತೀರ್ಣ ಹೊಂದಿರುವ ಕೇಂದ್ರದಲ್ಲಿ 500ಕ್ಕೂ ಹೆಚ್ಚು ಪಾಂಡ್‌ ಗಳಿದ್ದು, ಅದರಲ್ಲಿ 170 ಪಾಂಡ್‌ಗಳು ಮಾತ್ರ ಮೀನು ಮರಿ ಪಾಲನೆಗೆ ಯೋಗ್ಯವಿದೆ. ನದಿಯಲ್ಲಿ ಜಾಕ್‌ವೆಲ್‌ ಮೂಲಕ ಇಲ್ಲಿನ ಪಾಂಡ್‌ಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.

ಮರಿಗಳ ಪಾಲನೆ ಹೇಗೆ?: ಜನಿಸಿದ ಐದು ದಿನದ ಮೀನು ಮರಿಗಳನ್ನು ಶಿವಮೊಗ್ಗದಿಂದ ತಂದು ಇಲ್ಲಿನ ನೀರು ಸಂಗ್ರಹ ಟ್ಯಾಂಕ್‌ಗಳಲ್ಲಿ (ಪಾಂಡ್‌) ಪಾಲನೆ ಮಾಡಲಾಗುತ್ತಿದೆ. ಮೀನು ಮರಿಗಳ ಬೆಳವಣಿಗೆಗೆ 15 ದಿನಗಳವರೆಗೂ ಶೇಂಗಾ ಹಿಂಡಿ, ಪಾಲಿಶ್‌ ಮಾಡಿದ ಅಕ್ಕಿ ತೌಡಿನಿಂದ ಮಾಡಿದ ಆಹಾರ ನೀಡುವ ಮೂಲಕ ಒಂದು ತಿಂಗಳು ಕಾಲ ಪಾಲನೆ ಮಾಡಿ, ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಮೀನು ಮರಿಗಳನ್ನು ಹಾಕಿ ಕೃತಕ ಆಕ್ಸಿಜನ್‌ ತುಂಬಿ ಮೀನು ಸಾಕಾಣಿಕೆ ಮಾಡುವರಿಗೆ ಮಾರಾಟ ಮಾಡಲಾಗುತ್ತದೆ. ಕಳೆದ ವರ್ಷ ಮೀನು ಮರಿ ಮಾರಾಟಕ್ಕೆ ಸರ್ಕಾರ ನೀಡಿದ ಗುರಿಯಲ್ಲಿ 1.10 ಕೋಟಿ ಮೀನು ಮರಿ ಮಾರಾಟ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಕೇಂದ್ರದ ಪ್ರಗತಿಗೆ ವಿವಿಧ ಕಾಮಗಾರಿ

ಮೀನುಗಾರಿಕೆ ಇಲಾಖೆಯಿಂದ ಈಚೆಗೆ ಆರ್‌ಐಡಿಎಸ್‌ ಅಡಿಯಲ್ಲಿ 3 ಕೋಟಿ, ಆರ್‌ಕೆವಿವೈ 4.73 ಕೋಟಿ ಒಟ್ಟು ಅಂದಾಜು 7.5 ಕೋಟಿ ರೂ. ಮೊತ್ತದಲ್ಲಿ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ನೀರು ಸಂಗ್ರಹಿಸುವ 10 ಹೊಸ ಟ್ಯಾಂಕ್‌ ನಿರ್ಮಿಸಲಾಗಿದೆ ಜತೆಗೆ 1 ಮೀನು ಮರಿ ಪ್ಯಾಂಕಿಂಗ್‌ ಶೆಡ್‌ ನಿರ್ಮಿಸಲಾಗಿದೆ ಹಾಗೂ ಮೀನು ಮರಿ ತಯಾರಿಕೆಗೆ 3 ಯಾಚರಿಗಳು ನಿರ್ಮಾಣ ಹಂತದಲ್ಲಿವೆ ಹಾಗೂ ಮುಖ್ಯ ರಸ್ತೆಯಿಂದ ಪಾಲಾನ ಕೇಂದ್ರದವರೆಗೆ ಸಿ.ಸಿ ರಸ್ತೆ ನಿರ್ಮಿಸಲಾಗಿದೆ.

ಬಸವಸಾಗರ ಬಳಿ ಇರುವ ಪ್ರಾದೇಶಿಕ ಮೀನು ಮರಿ ಉತ್ಪಾದನಾ ಕೇಂದ್ರ ಆಗ್ನೇಯ ಏಷ್ಯಾದ ಎರಡನೇ ದೊಡ್ಡ ಮೀನು ಮರಿ ಉತ್ಪಾದನಾ ಕೇಂದ್ರವಾಗಿದೆ. ಸರ್ಕಾರ ಪ್ರತಿ ವರ್ಷ 1.50 ಕೋಟಿ ಮೀನು ಮರಿ ಮಾರಾಟ ಮಾಡುವ ಗುರಿ ಮೀನು ಮರಿ ಪಾಲನಾ ಕೇಂದ್ರಕ್ಕೆ ನೀಡಿದೆ. ಪ್ರಸಕ್ತ ವರ್ಷದಲ್ಲಿ 16ಲಕ್ಷ ಮೀನು ಮರಿಗಳನ್ನು ಮಾರಾಟ ಮಾಡಲಾಗಿದೆ. ಇನ್ನುಳಿದ ಬಾಕಿ ಮೀನು ಮರಿ ಮಾರಾಟಕ್ಕೆ ಮುಂದಿನ 2023ರ ಮಾರ್ಚ್‌ವರೆಗೆ ಅವಕಾಶವಿದೆ. -ಸಿದ್ದಪ್ಪ ಸುರಗಿಹಳ್ಳಿ, ಉಪ ನಿರ್ದೇಶಕರು, ಪ್ರಾದೇಶಿಕ ಮೀನು ಮರಿ ಉತ್ಪಾದನಾ ಕೇಂದ್ರ ನಾರಾಯಣಪುರ (ಸಿದ್ದಾಪುರ ಡ್ಯಾಂ ಸೈಟ್‌)

-ಬಸವರಾಜ ಎಂ. ಶಾರದಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next