Advertisement

ಕಟ್ಟಡವಿದ್ದೂ ರಸ್ತೆ ಬದಿಯೇ ವ್ಯಾಪಾರ!

01:10 PM Mar 09, 2022 | Team Udayavani |

ವಿಟ್ಲ: ವಿಟ್ಲದಲ್ಲಿ ಮೀನು ಮಾರುಕಟ್ಟೆಗಾಗಿ ಬೃಹತ್‌ ಕಟ್ಟಡ ನಿರ್ಮಾಣವಾಗಿದೆ. ಸುಸಜ್ಜಿತವಾಗಿದೆ. ಆದರೆ ಮಾರುಕಟ್ಟೆಯ ಬಾಗಿಲು ತೆರೆಯುವವರಿಲ್ಲ.

Advertisement

ಮೀನು ಮಾರಾಟ ಮಾಡುವವರು ಸುಸಜ್ಜಿತ ಕಟ್ಟಡದ ಮುಂಭಾಗದಲ್ಲಿ ಹಾಕಿದ ಟರ್ಪಾಲಿ ನಡಿ ವ್ಯಾಪಾರ ಮಾಡುತ್ತಿದ್ದಾರೆ. ಗಲೀಜು ನೀರು ರಸ್ತೆಗೆ ಬರುತ್ತಿದೆ. ಗಬ್ಬು ವಾಸನೆ ಹರಡುತ್ತಿದೆ. ಸ್ಥಳೀಯರು, ರಸ್ತೆ ಸಂಚಾರಿಗಳು ನಿತ್ಯವೂ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

ಶಿಲಾನ್ಯಾಸ
ವಿಟ್ಲ ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿದ ಬಳಿಕ, ಕರಾವಳಿ ಅಭಿ ವೃದ್ಧಿ ಪ್ರಾ ಧಿಕಾರವು ಸುಮಾರು 25 ಲಕ್ಷ ರೂ. ವೆಚ್ಚದ ಸುಸಜ್ಜಿತ ಮೀನು ಮಾರುಕಟ್ಟೆ ಮಂಜೂರು ಮಾಡಿತ್ತು. 2016ರ ಜುಲೈ 2ರಂದು ಶಿಲಾನ್ಯಾಸ ನಡೆಯಿತು. ಆಗ ನಿವೇದಿತ್‌ ಆಳ್ವ ಕರಾವಳಿ ಅಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ರಾಗಿದ್ದರು. ಕಟ್ಟಡ ಶೀಘ್ರದಲ್ಲೇ ನಿರ್ಮಾಣವಾಗುವ ಭರವಸೆಯೊಂದಿಗೆ, ಹಳೆ ಮೀನು ಮಾರುಕಟ್ಟೆಯನ್ನು ತೆರವು ಮಾಡಲಾಗಿತ್ತು. ಆ ಬಳಿಕ ಮಾರುಕಟ್ಟೆ ಜಾಗದ ಬಗ್ಗೆ ತಕರಾರು ಬಂದು, ಕಾಮಗಾರಿ ನನೆಗುದಿಗೆ ಬಿದ್ದಿತ್ತು.

ಉದ್ಘಾಟನೆ
ಸುಮಾರು 30 ಲಕ್ಷ ರೂ. ಅನುದಾನದಲ್ಲಿ ನೂತನ ಮೀನು ಮಾರುಕಟ್ಟೆ ನಿರ್ಮಾಣ ಕಾಮಗಾರಿ ಆಮೆ ವೇಗ ದಲ್ಲಿ ನಡೆಯಿತು. 2021ನೇ ಸಾಲಿನ ಎ. 6ರಂದು ಕಟ್ಟಡವನ್ನು ಉದ್ಘಾಟಿಸಲಾಯಿತು. ಆಗ ಮಟ್ಟಾರು ರತ್ನಾಕರ ಹೆಗ್ಡೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಗಿದ್ದರು.

11 ತಿಂಗಳು ಕಳೆಯಿತು
ಮೀನು ಮಾರುಕಟ್ಟೆಯ ನೂತನ ಕಟ್ಟಡ ಉದ್ಘಾಟನೆಯಾಗಿ ಹನ್ನೊಂದು ತಿಂಗಳು ಕಳೆದರೂ ಕಟ್ಟಡದ ಬೀಗ ತೆರೆದಿಲ್ಲ. ಇನ್ನೂ ವ್ಯಾಪಾರಿಗಳು ಮಾತ್ರ ಕಟ್ಟಡದ ಮುಂಭಾಗದಲ್ಲಿ ರಸ್ತೆ ಬದಿಯಲ್ಲೇ ಟೆಂಟ್‌ ಹಾಕಿಕೊಂಡು ವ್ಯಾಪಾರ ನಡೆಸುತ್ತಿರುವುದು ವಿಚಿತ್ರವಾದರೂ ನಿಜ. ವಿಟ್ಲವು ಗ್ರಾಮ ಪಂಚಾಯತ್‌ ಆಗಿದ್ದ ಸಂದರ್ಭದಲ್ಲಿ ಮೀನು ಹಾಗೂ ಮಾಂಸದ ಅಂಗಡಿ ಒಟ್ಟಿಗೆ ಇತ್ತು. ಈದೀಗ ಎರಡು ವಿಭಾಗವಾಗಿ ವಿಂಗಡಿಸಬೇಕಾಗಿದೆ. ಒಳಗೆ ಮಾಂಸ ಹಾಗೂ ಮೀನು ವಿಭಾಗ ಪ್ರತ್ಯೇಕಿಸುವ ಕಾಮಗಾರಿ ಇನ್ನೂ ನಡೆದಿಲ್ಲ. ಕಟ್ಟಡದ ಒಳಗೆ ಧೂಳು ಹಿಡಿದು ಮಾಸುತ್ತಿದೆ. ಪೈಂಟ್‌ ಮತ್ತೆ ಬಳಿಯಬೇಕಾಗಬಹುದು. ಸುತ್ತಲೂ ಕೊಳೆ ತುಂಬಿಕೊಂಡಿದೆ. ಪಕ್ಕದ ಚರಂಡಿಯಲ್ಲಿ ಗಲೀಜು ನೀರು ತುಂಬಿಕೊಂಡು ರಸ್ತೆಯಲ್ಲಿ ಹರಿದು ಹೋಗುತ್ತಿದೆ. ಸೊಳ್ಳೆಗಳ ಕಾಟ ಸುತ್ತಮುತ್ತಲ ಜನತೆಯನ್ನು ಕಾಡುತ್ತಿದ್ದು, ರೋಗದ ಭೀತಿಯಿಂದಲೇ ವಾಸಿಸುವಂತಾಗಿದೆ.

Advertisement

ಇದನ್ನೂ ಓದಿ:ಮಹಿಳೆಯರು ಹೆಣ್ಣು ಮಗುವಿನ ಮೇಲಿನ ಅಸಡ್ಡೆಯನ್ನು ಮೊದಲು ಕಡಿಮೆ ಮಾಡಿಕೊಳ್ಳಬೇಕು:ಸಚಿವೆ ಜೊಲ್ಲೆ

ಪರ್ಯಾಯ ವ್ಯವಸ್ಥೆ ಆಗಲಿಲ್ಲ
2016ರ ಮಾ. 30ರಂದು ನಡೆದ ಏಲಂ ಪ್ರಕ್ರಿಯೆಯಲ್ಲಿ ಕಂಬಳಬೆಟ್ಟು ವ್ಯಾಪಾರಿಯೋರ್ವರು ಒಂದು ವರ್ಷದ ಅವ ಧಿಗೆ 1,08,345 ರೂ.ಗಳಿಗೆ ಮಾಂಸದ ಮಾರುಕಟ್ಟೆಯನ್ನು ಪಡೆದಿದ್ದರು. ಆದರೆ ಮಾಂಸ ಹಾಗೂ ಮೀನು ಮಾರಾಟ ಕೇಂದ್ರದ ಕಟ್ಟಡವನ್ನು ಕೆಡವಿದ ಬಳಿಕ ಗುತ್ತಿಗೆದಾರರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಿಲ್ಲ. ಹೊಸ ಕಟ್ಟಡದ ನಿರ್ಮಾಣವೂ ಆಗಲಿಲ್ಲ.

6 ವರ್ಷ ಕಾದರೂ ಕಾಲ ಕೂಡಿ ಬಂದಿಲ್ಲ
ಹಳೆಯ ಮೀನು ಮಾರುಕಟ್ಟೆ ಕೆಡವಿ ಹೊಸ ಕಟ್ಟಡ ನಿರ್ಮಾಣವಾಗುತ್ತಿರುವುದು ಸಾರ್ವಜನಿಕರಿಗೆ ಸಂತೋಷವನ್ನುಂಟು ಮಾಡಿತ್ತು. ಸುಂದರ ಕಟ್ಟಡ, ಸುತ್ತಲೂ ಸ್ವತ್ಛ ವಾತಾವರಣವಿರಬಹುದು ಎಂದು ಊಹಿಸಿದ್ದ ಜನತೆಗೆ ಹೊಸ ಕಟ್ಟಡದಲ್ಲಿ ಮೀನು ಖರೀದಿಸುವ ಕಾಲ ಇನ್ನೂ ಕೂಡಿ ಬಂದಿಲ್ಲ. ಎಷ್ಟೋ ವರ್ಷಗಳಿಂದ ಮೀನು ವ್ಯಾಪಾರವನ್ನು ರಸ್ತೆಯ ಬದಿಯಲ್ಲೇ ಮಾಡಿದ ವ್ಯಾಪಾರಿಗಳು, 6 ವರ್ಷದ ಬಳಿಕವೂ ಹಿಂದಿನಂತೆಯೇ ವ್ಯಾಪಾರ ಮಾಡುತ್ತಿದ್ದಾರೆ. ನೂತನ ಕಟ್ಟಡವನ್ನು ನೋಡಿಕೊಂಡು ಅದರ ಮುಂದೆಯೇ ಗಲೀಜಿನಲ್ಲೇ ನಿಂತ ವ್ಯಾಪಾರಿಗಳ ಪಾಡು ಹೇಳತೀರದು.

ಶೀಘ್ರ ಕಾರ್ಯಾರಂಭ
ಈಗಾಗಲೇ ಕಾರ್ಯಾರಂಭ ಮಾಡಬೇಕಾಗಿತ್ತು. ಕಟ್ಟಡದೊಳಗೆ ಪಾರ್ಟಿಶನ್‌ ಮಾಡಬೇಕಾಗಿದೆ. ಆ ಕಾಮಗಾರಿ ಪೂರ್ತಿಯಾಗಿಲ್ಲ. ಮಾರ್ಚ್‌ ತಿಂಗಳೊಳಗೆ ಪೂರ್ತಿಗೊಳಿಸಿ, ಕಾರ್ಯಾ ರಂಭ ಮಾಡಲು ಪ್ರಯತ್ನಿಸುತ್ತೇವೆ.
 -ಮಾಲಿನಿ,
ಪ್ರಭಾರ ಮುಖ್ಯಾಧಿ ಕಾರಿ, ವಿಟ್ಲ ಪ.ಪಂ.

– ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next