Advertisement

ಕಾಪು ಕಡಲ ತೀರದಲ್ಲಿ ಮೀನಿನ ಸುಗ್ಗಿ

12:22 PM Oct 03, 2020 | mahesh |

ಕಾಪು: ಕಾಪು ಬೀಚ್‌ನಲ್ಲಿ ಶುಕ್ರವಾರ ದಿನವಿಡೀ ಜಾತ್ರೆಯ ವಾತಾವರಣ ಕಂಡು ಬಂದಿದೆ. ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ದನ ಕೈರಂಪಣಿ ಫಂಡ್‌ನ‌ವರು ಶುಕ್ರವಾರ ಬೆಳಗ್ಗೆ ಬೀಸಿದ ಬಲೆಗೆ ಲಕ್ಷಾಂತರ ಸಂಖ್ಯೆಯ ಮೀನುಗಳು ಏಕಕಾಲದಲ್ಲಿ ಸಿಕ್ಕಿದ್ದು ಮೀನುಗಾರರು ಮಾತ್ರವಲ್ಲದೇ ಮತ್ಸ್ಯ ಪ್ರಿಯರಲ್ಲೂ ಸಂತಸ ಮೂಡಿಸಿದೆ.

Advertisement

ಕೊಡ್ಡೆಯಿ, ಕಲ್ಲೂರ್‌, ಕುರ್ಚಿ, ಬತ್ತಿ, ಮೊಡಂಗ್‌, ಅಡೆ, ಬಂಡಸೆ, ಮಾಂಜಿ, ಸಿಗಡಿ ಸಹಿತ 10 ಟನ್‌ಗೂ ಹೆಚ್ಚಿನ ವಿವಿಧ ಜಾತಿಯ ಮೀನುಗಳು ಬಲೆಗೆ ಬಿದ್ದಿವೆ. ಏಕಕಾಲದಲ್ಲಿ ನಿರೀಕ್ಷೆಗೂ ಮೀರಿ ಮೀನುಗಳು ಬಿದ್ದಿದ್ದು ಬಲೆಯನ್ನು ದಡಕ್ಕೆ ಎಳೆಯಲು ಮೀನುಗಾರರು ದಿನವಿಡೀ ಒದ್ದಾಡುವಂತಾಗಿದೆ. ಇದರಲ್ಲಿ ಒಳ್ಳೆಯ ಜಾತಿಯ ಮೀನುಗಳನ್ನು ಸ್ಥಳದಲ್ಲೇ ವಿಂಗಡಿಸಿ ಬಂದರಿಗೆ ಸಾಗಿಸಿದ್ದಾರೆ. ಸಣ್ಣ ಸಣ್ಣ ಮೀನುಗಳನ್ನು ನೇರವಾಗಿ ಫಿಶ್‌ ಮಿಲ್‌ಗೆ ಸಾಗಿಸಲಾಗಿದ್ದು, ಜನರ ರುಚಿಯ ವಿವಿಧ ಜಾತಿಯ ಮೀನುಗಳನ್ನು ಸ್ಥಳದಲ್ಲೇ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ.

ಬಲೆಗೆ ಸಿಕ್ಕ ಮೀನುಗಳ ಒದ್ದಾಟ ದಿಂದಾಗಿ ಬಲೆ ತುಂಡಾಗಿ ಸಾವಿರಾರು ಮೀನುಗಳು ಸಮುದ್ರ ಪಾಲಾಗಿದ್ದು ಸಮುದ್ರ ಪಾಲಾದ ಮತ್ತು ಬಲೆಯಿಂದ ಜಿಗಿದು ದಡ ಸೇರಿದ ಮೀನನ್ನು ಹಿಡಿಯಲು ಬೀಚ್‌ ಬದಿ ಮುಗಿ ಬಿದ್ದ ಮತ್ಸ್ಯ ಪ್ರಿಯರನ್ನು ನಿಯಂತ್ರಿಸಲು ಮೀನುಗಾ ರರೇ ಕಷ್ಟಪಟ್ಟರು.

60ಕ್ಕೂ ಹೆಚ್ಚು ಮಂದಿ ಮೀನುಗಾರರ ತಂಡ ಸೇರಿ ಬಲೆ ಎಸೆದಿದ್ದು, ಮೀನಿನ ರಾಶಿಯನ್ನು ಕಂಡು ಬಲೆ ಎಳೆಯಲು ಮತ್ತಷ್ಟು ಜನರನ್ನು ಬಳಸಿಕೊಳ್ಳಲಾಯಿತು. ಎಳೆದಷ್ಟು ಮತ್ತೆ ಮತ್ತೆ ಮೀನುಗಳು ಬರುತ್ತಿದ್ದುದರಿಂದ ಸಂಜೆಯ ವೇಳೆಗಂತೂ ಬಂದವ ರೆಲ್ಲರಿಗೂ ಮೀನುಗಳನ್ನು ಉಚಿತ ವಾಗಿ ನೀಡಲಾಯಿತು.

ಮೀನು ಬೀಳಲು ಕಾರಣವೇನು
ಮಳೆ – ಮೋಡಗಳ ಚೆಲ್ಲಾಟದಿಂದಾಗಿ ಮೀನುಗಳು ತಂಪಿರುವ ಜಾಗಕ್ಕೆ ಬಂದು ಸೇರುವ ಸಾಧ್ಯತೆಯಿದೆ. ಜತೆಗೆ ಕಡಲು ಕೂಡ ಸಣ್ಣದಾಗಿದ್ದು, ಗಾಳಿಯ ದಿಕ್ಕನ್ನು ಆಧರಿಸಿ ಮೀನುಗಳು ದಡಕ್ಕೆ ಬರುತ್ತವೆ. ಶುಕ್ರವಾರ ಕೂಡ ಇದೇ ರೀತಿಯಲ್ಲಿ ಕಾಪು ಲೈಟ್‌ ಹೌಸ್‌ನ ಸುತ್ತಲಿನ ಪ್ರದೇಶಕ್ಕೆ ಲಕ್ಷಾಂತರ ಸಂಖ್ಯೆಯ ಮೀನುಗಳು ಬಂದಿದ್ದು, ಅದೇ ಸಮಯಕ್ಕೆ ಎಸೆದಿದ್ದ ಶ್ರೀ ಲಕ್ಷ್ಮೀ ಜನಾರ್ದನ ಕೈರಂಪಣಿ ಫಂಡ್‌ನ‌ ಬಲೆಗೆ ನಿರೀಕ್ಷೆಗೂ ಮೀರಿದ ಮೀನುಗಳು ಬಿದ್ದಿವೆ.

Advertisement

ಶುಕ್ರವಾರ ಬೆಳಗ್ಗೆ ಹೇರಳವಾಗಿ ಸಿಕ್ಕಿರುವ ಮೀನಿನ ಸುಗ್ಗಿಯಿಂದಾಗಿ ಮೀನುಗಾರರು ಮಾತ್ರವಲ್ಲದೇ ಮತ್ಸ್ಯ ಪ್ರಿಯರು ಕೂಡ ಸಂಭ್ರಮಿಸುವಂತಾಗಿದೆ. ಹೇರಳ ಪ್ರಮಾಣದಲ್ಲಿ ಮೀನು ಬಿದ್ದರೂ ಅದನ್ನು ಸಮರ್ಪಕವಾಗಿ ಮಾರಾಟ ಮಾಡಲಾಗದೆ ನಾವು ನಷ್ಟ ಎದುರಿಸುವಂತಾಗಿದೆ. ಎಂಜಿನ್‌ ಜೋಡಣೆ, ಬಲೆ ಜೋಡಣೆ ಸಹಿತವಾಗಿ ವಿವಿಧ ಖರ್ಚು ತೆಗೆದು 50-60 ಮಂದಿಗೆ ಲಾಭಾಂಶವನ್ನು ವಿತರಿಸಲಾಗುತ್ತದೆ. ಬಲೆಯಲ್ಲಿ ಸಿಲುಕಿದ ಹೇರಳ ಪ್ರಮಾಣದ ಮೀನುಗಳ ಪೈಕಿ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳು ಬಲೆ ತುಂಡಾಗಿ ಮತ್ತೆ ಕಡಲು ಸೇರಿವೆ.
– ಸೋಮನಾಥ್‌ ಸುವರ್ಣ ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ದನ ಕೈರಂಪಣಿ ಫಂಡ್‌ನ‌ ಪ್ರತಿನಿಧಿ

Advertisement

Udayavani is now on Telegram. Click here to join our channel and stay updated with the latest news.

Next