ಕಾರವಾರ: ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ (ಸಿಎಂಎಫ್‌ಆರ್‌ಐ) ಯ ಕಾರವಾರ ಸಂಶೋಧನಾ ಕೇಂದ್ರ ಮತ್ತು ಎನ್‌ಎಫ್‌ಡಿಬಿ ಯೋಜನೆ ಕಾಳಿ ನದಿ ಭಾಗದ ಫಲಾನುಭವಿಗಳು ಇಲ್ಲಿನ ನಂದನಗದ್ದಾ ನಾಗನಾಥವಾಡಾದಲ್ಲಿ ಮೀನು ಕೊಯ್ಲು ಮೇಳ ನಡೆಯಿತು.
ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ (ಎನ್‌ಎಫ್‌ಡಿಬಿ) ಆರ್ಥಿಕ ಸಹಾಯದೊಂದಿಗೆ ಸಿಎಂಎಫ್‌ಆರ್‌ಐ ಕರ್ನಾಟಕದ ಕರಾವಳಿ ಸಮುದಾಯಕ್ಕಾಗಿ ತೆರೆದ ನೀರಿನ ಪಂಜರ ಕೃಷಿ ಯೋಜನೆ ಕಳೆದ ಆಗಸ್ಟ್‌ನಲ್ಲಿ ಪ್ರಾರಂಭಿಸಿದ್ದು, ಪಂಜರ ವ್ಯವಸಾಯಕ್ಕಾಗಿ ಕಾರವಾರ ತಾಲೂಕಿನ 22 ಫಲಾನುಭವಿಗಳನ್ನು ಒಳಗೊಂಡು ಒಟ್ಟು ಕರ್ನಾಟಕದಾದ್ಯಂತ 96 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಬಹುಸಂಖ್ಯೆ ಫಲಾನುಭವಿಗಳು ಮೀನುಗಾರ ಮಹಿಳೆಯರೇ ಆಗಿದ್ದು, ಇವರೆಲ್ಲರಿಗೂ ಸಿಎಂಎಫ್‌ಆರ್‌ಐ ಕಾರವಾರ ಸಂಶೋಧನಾ ಕೇಂದ್ರವು ತರಬೇತಿ ನೀಡಿತ್ತು.
ಕಾರವಾರ ತಾಲೂಕಿನ ಫಲಾನುಭವಿಗಳು ಒಟ್ಟೂ 29 ಪಂಜರಗಳನ್ನು ಚೌಕಾಕಾರದ (4x4x3 ಮೀ.) ಸ್ಥಾಪಿಸಿ ಅದರಲ್ಲಿ ಕುರುಡೆ ಮೀನಿನ ಮರಿಗಳನ್ನು ದಾಸ್ತಾನಿಸಿದ್ದರು. ಸಿಎಂಎಫ್‌ಆರ್‌ಐನ ಕಾರವಾರ ಸಂಶೋಧನಾ ಕೇಂದ್ರದ ತಾಂತ್ರಿಕ ಹಾಗೂ ವೈಜ್ಞಾನಿಕ ಸಲಹೆಗಳೊಂದಿಗೆ ಸುಮಾರು 7 ತಿಂಗಳ ಕಾಲ ಕೃಷಿ ಕೈಗೊಂಡಿದ್ದರು. ಸಿಎಂಎಫ್‌ಆರ್‌ಐ ಸಲಹೆ ಮೇರೆಗೆ ಮಾರುಕಟ್ಟೆ ಗಾತ್ರಕ್ಕೆ ಅನುಕೂಲವಾಗುವಷ್ಟು ಅಂದರೆ ಸುಮಾರು 800 ಗ್ರಾಂ (ಮುಕ್ಕಾಲು ಕಿಲೋ ಗಿಂತ ಜಾಸ್ತಿ) ಗಾತ್ರಕ್ಕೆ ಬೆಳೆದ ನಂತರ ಫಲಾನುಭವಿಗಳು ಕೊಯ್ಲು ನಡೆಸಲು ಪ್ರಾರಂಭಿಸಿದರು.
ಸಿಎಂಎಫ್‌ಆರ್‌ಐನ ಪ್ರಧಾನ ಹಾಗೂ ಪ್ರಭಾರಿ ವಿಜ್ಞಾನಿಗಳು ಡಾ| ಜಯಶ್ರೀ ಲೋಕಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಕೊಯ್ಲು ಮೇಳ ಉದ್ಘಾಟಿಸಿದರು. ಮೀನು ಕೃಷಿಕರ ಮುಖಂಡ ಸುಧೀರ ಸಾರಂಗ ಅಧ್ಯಕ್ಷತೆ ವಹಿಸಿದ್ದರು. ವೆಂಕಟರಮಣ ಹೆಗಡೆ, ಸಹಾಯಕ ನಿರ್ದೇಶಕರು, ಮೀನುಗಾರಿಕಾ ಇಲಾಖೆ, ಕರ್ನಾಟಕ ಸರಕಾರ, ಡಾ| ಸುರೇಶ ಬಾಬು ಪಿ.ಪಿ., ಹಿರಿಯ ವಿಜ್ಞಾನಿ, ಸಿಎಂಎಫ್‌ಆರ್‌ಐ, ಕಾರವಾರ, ಗಾಬಿತ ಸಮಾಜದ ಮುಖಂಡ ಮಾಜಿ ಉಪಾಧ್ಯಕ್ಷ ಪಾಂಡುರಂಗ ಸಾರಂಗ, ಸುಂಕೇರಿ ಸಮಾಜದ ಬುದವಂತ ಯಶೋ ಲಕ್ಷ್ಮಣ ಗಿರಫ್ ಭಾಗವಹಿಸಿದ್ದರು.
ಯೋಜನೆಯ ಫಲಾನುಭವಿಗಳು ಅನಿಸಿಕೆ ವ್ಯಕ್ತಪಡಿಸಿ, ಮೀನುಗಾರರ ಆರ್ಥಿಕ ಮಟ್ಟ ಸುಧಾರಿಸುವುದಕ್ಕಾಗಿ ಸಿಎಂಎಫ್‌ಆರ್‌ಐ ಅಭಿವೃದ್ಧಿಪಡಿಸಿದ ಪಂಜರ ಕೃಷಿ ತಾಂತ್ರಿಕತೆ ಹಾಗೂ ಸಿಎಂಎಫ್‌ಆರ್‌ಐನ ಶ್ರಮ ಶ್ಲಾಘಿಸಿದರು. ಇದರಿಂದಾಗಿ ತಾವು ಉತ್ತಮ ಬೆಳೆ ಪಡೆದಿದ್ದು, ಒಳ್ಳೆಯ ಮಾರುಕಟ್ಟೆ ಬೆಲೆ ಪಡೆದಿದ್ದೇವೆ. ಪಂಜರ ಕೃಷಿ ಮುಂದುವರಿಸಿಕೊಂಡು ಹೋಗುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.