Advertisement

ಪಿಲಿಕುಳ: ಮೇಳೈಸಿದ ಮತ್ಸ್ಯೋತ್ಸವ, ಕ್ಷೇತ್ರೋತ್ಸವ

11:00 AM Jul 22, 2019 | sudhir |

ಮಂಗಳೂರು: ಅಲ್ಲಿ ಹಬ್ಬದ ಕಳೆ ಮೇಳೈಸಿತ್ತು. ಕೆರೆಯಿಂದ ಆಗತಾನೆ ಹಿಡಿದ ತಾಜಾ ಮೀನುಗಳನ್ನು ಖರೀದಿ ಮಾಡುವಲ್ಲಿ ಕೆಲವರು ನಿರತರಾಗಿದ್ದರೆ, ಇನ್ನೂ ಕೆಲವರು ತರಹೇವಾರಿ ಮೀನಿನ ಖಾದ್ಯಗಳನ್ನು ಸವಿಯುತ್ತಿದ್ದರು. ಒಂದಿಷ್ಟು ಮಂದಿ ಮೀನುಗಳ ಗಾತ್ರವನ್ನು ಆಶ್ಚರ್ಯದಿಂದ ನೋಡುತ್ತಿದ್ದರು.

Advertisement

ಅಂದಹಾಗೆ, ಈ ದೃಶ್ಯಗಳು ಕಂಡು ಬಂದಿದ್ದು ಪಿಲಿಕುಳದ ಡಾ| ಶಿವರಾಮ ಕಾರಂತ ನಿಸರ್ಗಧಾಮ ಮತ್ತು ಮೀನುಗಾರಿಕಾ ಇಲಾಖೆ ಜಂಟಿಯಾಗಿ ಪಿಲಿಕುಳ ಲೇಕ್‌ ಗಾರ್ಡನ್‌ನಲ್ಲಿ ರವಿವಾರ ಆಯೋಜಿಸಿದ್ದ ಮತ್ಸ್ಯೋತ್ಸವ ಮತ್ತು ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ. ಪಿಲಿಕುಳದ ಕೆರೆಯಲ್ಲಿ ಬೆಳೆಸಲಾಗಿದ್ದ ಕಾಟ್ಲಾ, ರೋಹ ಸಹಿತ ಇನ್ನಿತರ ಜಾತಿಯ ಮೀನುಗಳನ್ನು ಸ್ಥಳದಲ್ಲೇ ಮಾರಾಟ ಮಾಡುವ ಪ್ರಕ್ರೀಯೆಯನ್ನು ಏರ್ಪಡಿಸಲಾಗಿತ್ತು. ಹೆಚ್ಚಿನ ಮಂದಿ ಮುಗಿಬಿದ್ದು ಮೀನು ಖರೀದಿ ಮಾಡುವ ದೃಶ್ಯ ಸಾಮಾನ್ಯವಾಗಿತ್ತು.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಿದ್ದ ಮೀನಿನಿಂದ ಮಾಡಿದ ಖಾದ್ಯಗಳ ಮಾರಾಟ ಜೋರಾಗಿತ್ತು. ಸಿಹಿ ನೀರಿನ ಮೀನುಗಳು, ಪಾಂಪ್ಲೆಟ್, ಅಂಜಲ್, ಬಂಗುಡೆ, ಸಿಗಡಿ, ಬೊಂಡಾಸು ಹಾಗೂ ಇನ್ನಿತರ ತಾಜಾ ಮೀನು ಮತ್ತು ಮೌಲ್ಯವರ್ಧಿತ ಮೀನು ಉತ್ಪನ್ನಗಳ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ತಾಜಾ ಸಮುದ್ರ ಮೀನುಗಳ ಫ್ರೈ, ಫಿಶ್‌ ಮಸಾಲಾ, ಫಿಶ್‌ ಕಬಾಬ್‌ ಹಾಗೂ ಇನ್ನಿತರ ಮೀನಿನ ಖಾದ್ಯಗಳನ್ನು ಶುಚಿ ರುಚಿಯಾಗಿ ಸ್ಥಳದಲ್ಲೇ ತಯಾರಿಸಿ ಮಾರಾಟವಿತ್ತು.

ಮೀನು ಆಹಾರ ಪದ್ಧತಿ

ಕಾರ್ಯಕ್ರಮವನ್ನು ಉದ್ಘಾಟಿಸಿದ ದ.ಕ.ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, ಕರಾವಳಿ ಮಂದಿಗೆ ಮೀನು ಆಹಾರ ಪದ್ಧತಿ. ಉಪ ಕಸುಬಾಗಿ ಮೀನು ಮಾರಾಟ ಮಾಡುತ್ತಾರೆ. ಪಿಲಿಕುಳದಲ್ಲಿ ತಾಜಾ ಮೀನುಗಳ ಮಾರಾಟ ನಡೆಯುತ್ತಿದ್ದು, ಹೆಚ್ಚಿನ ಮಂದಿ ಖರೀದಿಗೆ ಉತ್ಸಾಹ ತೋರುತ್ತಿದ್ದಾರೆ ಎಂದರು. ದ.ಕ.ಜಿ.ಪಂ. ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಯು.ಪಿ. ಇಬ್ರಾಹಿಂ, ಮೂಡುಶೆಡ್ಡೆ ಗ್ರಾ.ಪಂ. ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ, ಡಾ| ಶಿವರಾಮಕಾರಂತ ನಿಸರ್ಗಧಾಮ ಪಿಲಿಕುಳದ ಕಾರ್ಯನಿರ್ವಾಹಕ ನಿರ್ದೇಶಕಿ ಮೇಘನಾ ಆರ್‌., ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ ಎಸ್‌. ಜಯಪ್ರಕಾಶ್‌ ಭಂಡಾರಿ, ನಿರ್ದೇಶಕ, ಕಾರ್ಯಕಾರಿ ಮಂಡಳಿ ಸದಸ್ಯ ಸುಬ್ಬಯ್ಯ ಶೆಟ್ಟಿ, ಎನ್‌.ಜಿ. ಮೋಹನ್‌, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಮೀ. ಇ. ಸಹಾಯಕ ನಿರ್ದೇಶಕ ದಿಲೀಪ್‌, ಮೀನುಗಾರಿಕಾ ಕಾಲೇಜು ಸಹಾಯಕ ಪ್ರೊಫೇಸರ್‌ ಡಾ| ಮೃದುಲಾ, ಡಾ| ರಾಜೇಶ್‌, ಮೀನುಗಾರಿಕಾ ತಜ್ಞ ಡಾ| ನಜೀರ್‌, ಬೀಚ್ ಅಭಿವೃದ್ಧಿ ನಿಗಮದ ನಿಇಒ ಯತೀಶ್‌ ಬೈಕಂಪಾಡಿ ಉಪಸ್ಥಿತರಿದ್ದರು.

Advertisement

ಮತ್ಸ್ಯೋತ್ಸವದಲ್ಲಿ ಮೀನು ಖರೀದಿ ಜೋರಾಗಿತ್ತು. ಕಾಟ್ಲಾ, ರೋಹ, ಸೇರಿದಂತೆ ಆಗ ತಾನೇ ಕೆರೆಯಿಂದ ಬಲೆ ಹಾಕಿ ಹಿಡಿದ ಒಂದು ಕೆ.ಜಿ. ಮೀನಿಗೆ ಸುಮಾರು 150 ರೂ. ನಿಗದಿ ಪಡಿಸಲಾಗಿತ್ತು.

ಪಿಲಿಕುಳ ಕೆರೆಗೆ ಈ ಬಾರಿ ಸುಮಾರು 25,000ಕ್ಕೂ ಹೆಚ್ಚಿನ ಮೀನಿನ ಮರಿಯನ್ನು ಬಿಡಲಾಗಿದೆ. ಇವುಗಳನ್ನು ಮುಂದಿನ ವರ್ಷ ಬಲೆ ಬೀಸಿ ಹಿಡಿಯಲಾಗುತ್ತದೆ.  ಒಂದೊಂದು ಮೀನು ಸುಮಾರು ಒಂದೂವರೆ ಕೆ.ಜಿ.ಗೂ ಅಧಿಕ ತೂಕ ಬೆಳೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next