ಕೆಜಿಎಫ್: ಅಕ್ಕಿ ಗಿರಣಿಯಿಂದ ಬರುವ ಮಲಿನ ತ್ಯಾಜ್ಯ ಕೆರೆಯಲ್ಲಿರುವ ಜೀವರಾಶಿಗಳನ್ನು ನಾಶಮಾಡಿದೆ ಎಂದು ಆರೋಪಿಸಿ ಕರ್ನಾಟಕ ಸಿಂಹ ಘರ್ಜನೆ ಸಂಘಟನೆ ಕಾರ್ಯಕರ್ತರು ದಾಸರಹೊಸಹಳ್ಳಿ ಬಳಿ ಪ್ರತಿಭಟನೆ ನಡೆಸಿದರು.
ಕೆರೆಯ ಮಲಿನ ನೀರನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಚಿನ್ನಕೋಟೆ ಗ್ರಾಪಂ ಮುಂಭಾಗದಲ್ಲಿ ಕೊಂಚ ಕಾಲ ಧರಣಿ ನಡೆಸಿದ ಕಾರ್ಯಕರ್ತರು, ನಂತರ ಖಾಸಗಿ ಅಕ್ಕಿ ಗಿರಣಿಮುಂಭಾಗದಲ್ಲಿ ಸತ್ತ ಮೀನುಗಳನ್ನು ಸುರಿದು ಪ್ರತಿಭಟನೆ ಮಾಡಿದರು.
ಕೆರೆಗೆ ತ್ಯಾಜ್ಯ ನೀರನ್ನು ಬಿಡಬಾರದು ಎಂದು ಹಲವಾರು ಬಾರಿ ಎಚ್ಚರಿಕೆ ನೀಡಲಾಗಿದೆ. ಈ ಕುರಿತು ಗ್ರಾಪಂಗೆ ತಿಳಿಸಲಾಗಿತ್ತು. ಆದರೆ, ಅಧಿಕಾರಿಗಳು ಅಕ್ಕಿ ಗಿರಣಿ ಮಾಲಿಕರೊಂದಿಗೆ ಶಾಮೀಲಾಗಿ, ಕ್ರಮ ಕೈಗೊಂಡಿಲ್ಲ ಎಂದು ಕಾರ್ಯಕರ್ತರು ಆರೋಪಿಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ಗ್ರಾಪಂ ಪಿಡಿಒ, ಗಿರಣಿ ಮಾಲಿಕರನ್ನು ಸ್ಥಳಕ್ಕೆ ಕರೆಸಿದರು. ಇನ್ನು ಮುಂದೆ ಗಿರಣಿ ತ್ಯಾಜ್ಯವನ್ನು ಕೆರೆಗೆ ಬಿಡಬಾರದು ಎಂದು ಎಚ್ಚರಿಕೆ ನೀಡಿದರು. ಕೂಡಲೇ ಜೆಸಿಬಿ ತಂದು ಕೆರೆಗೆ ಹೋಗುತ್ತಿದ್ದ ನೀರಿಗೆ ತಡೆ ಹಾಕಿದರು.
ಸಂಘದ ರಾಜ್ಯ ಅಧ್ಯಕ್ಷ ಪ್ರಸನ್ನಕುಮಾರ ಸ್ವಾಮಿ, ಪದಾಧಿಕಾರಿಗಳಾದ ಉರಿಗಿಲಿ ಚಲಪತಿ, ಸುರೇಶ್ ನಾಯಕ್, ಎಸ್.ಜಿ.ಕೋಟೆ ಶ್ರೀನಿವಾಸ್, ರವಿಕುಮಾರ್, ಗೌರಿಶಂಕರ್ ಇದ್ದರು.