Advertisement

ಹಣಕಾಸಿನ ಕೊರತೆ: ಕೆರೆ ಕಾಮಗಾರಿ ಅಂತ್ಯ?

05:54 PM Apr 01, 2019 | pallavi |
ಸಾಗರ: ನಗರದ ಸಾಗರ ತಾಲೂಕು ಜೀವಜಲ ಕಾರ್ಯಪಡೆ ಹಾಗೂ ಸ್ವಾನ್‌ ಆ್ಯಂಡ್‌ ಮ್ಯಾನ್‌ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿದ್ದ ಕಲ್ಮನೆ ಗ್ರಾಪಂ ವ್ಯಾಪ್ತಿಯ ಚಿಪ್ಳಿಲಿಂಗದಹಳ್ಳಿಯ ಬಂಗಾರಮ್ಮನ ಕೆರೆಯ ಹೂಳು ತೆಗೆಯುವ ಕಾಮಗಾರಿ ಸೋಮವಾರ ಮತ್ತೂಮ್ಮೆ ಹಣಕಾಸಿನ ಕೊರತೆಯ ಹಿನ್ನೆಲೆಯಲ್ಲಿ ಸ್ಥಗಿತಗೊಳ್ಳುವ ಅಪಾಯ ಎದುರಾಗಿದೆ.
ದಿನಕ್ಕೆ 37 ಸಾವಿರ ರೂ.ಗಳಷ್ಟು ವೆಚ್ಚ ಬೀಳುವ ಈ ಹೂಳು ತೆಗೆಯುವ ಎರಡನೇ ಹಂತದ ಕಾಮಗಾರಿ ಕಳೆದ 14 ದಿನಗಳಿಂದ ನಡೆದಿದೆ. ಈಗಾಗಲೇ ಆರು ಲಕ್ಷ ರೂ. ಗಳಷ್ಟು ಹಣ ಬಳಕೆಯಾಗಿದೆ. ಹೊಸ ಆರ್ಥಿಕ ಮೂಲಗಳಿಂದ ಸಹಾಯ ಲಭಿಸದೆ ಕಾಮಗಾರಿ ಮುಂದುವರಿಸುವುದು ಬೇಡ ಎಂದು ಸಾಗರ ತಾಲೂಕು ಜೀವಜಲ ಕಾರ್ಯಪಡೆ ನಿರ್ಧರಿಸಿದೆ.
2017ರಲ್ಲಿ ಹಿರಿಯ ಸಾಹಿತಿ ನಾ. ಡಿಸೋಜಾ, ತಾಲೂಕಿನ ಎಸಿ, ಡಿವೈಎಸ್‌ಪಿ ಮೊದಲಾದವರನ್ನು ಒಳಗೊಂಡ ಜೀವಜಲ ಕಾರ್ಯಪಡೆ ಹೊಸ ಹುಮ್ಮಸ್ಸಿನಿಂದ ಲಿಂಗದಹಳ್ಳಿಯ ಕೆರೆ ಹೂಳೆತ್ತುವ ಕಾರ್ಯ ಸುಮಾರು 11.5 ಲಕ್ಷ ರೂ.ಗಳ ವೆಚ್ಚ ಮಾಡಿಯೂ ಶೇ. 30ರಷ್ಟು ಮಾತ್ರ ಸಾಗಿತ್ತು. ಈ ವರ್ಷ ಕರ್ನಾಟಕ ಬ್ಯಾಂಕ್‌ ಐದು ಲಕ್ಷ ರೂ. ಸಹಾಯ ಧನ ಒದಗಿಸಿದ ಹಿನ್ನೆಲೆಯಲ್ಲಿ ಎರಡನೇ ಹಂತದ ಕಾಮಗಾರಿ ನಡೆದಿದ್ದು, ಶೇ. 75ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಕಾರ್ಯಪಡೆಯ ಅಖೀಲೇಶ್‌ ಚಿಪ್ಳಿ ಪತ್ರಿಕೆಯೊಂದಿಗೆ ಮಾತನಾಡಿ, ಪತ್ರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ಬಂಗಾರಮ್ಮನ ಕೆರೆಯ ವಿಷಯ ಪ್ರಸ್ತಾಪವಾದ ನಂತರದಲ್ಲಿ ಸ್ವಲ್ಪ ಮಟ್ಟಿನ ಧನಸಹಾಯದ ಭರವಸೆಗಳು ವ್ಯಕ್ತವಾಗಿವೆ. ಕೆಲವರು ಸ್ವಯಂಪ್ರೇರಿತವಾಗಿ ಕರೆ ಮಾಡಿ ಈ ರೀತಿಯ ಸಾಮಾಜಿಕ ಕಾರ್ಯಯೋಜನೆಗಳಿಗೆ ಧನಸಹಾಯ ಒದಗಿಸುವ ಸರ್ಕಾರೇತರ ಸಂಸ್ಥೆಗಳ ನೆರವನ್ನು ಒದಗಿಸಿಕೊಡುವ ಭರವಸೆ ನೀಡಿದ್ದಾರೆ. ನಾವೂ ಕೂಡ ವೈಯಕ್ತಿಕ ಮಟ್ಟದಲ್ಲಿ ಸಿಗಬಹುದಾದ ಹಣಕಾಸು ನೆರವಿಗೆ ಸಂಪರ್ಕ ನಡೆಸಿದ್ದೇವೆ ಎಂದರು.
ಈ ಬಾರಿಯ ಹಣ ಸಂಗ್ರಹವಾಗುವ ವಿಶ್ವಾಸವಿದೆ. ಅದನ್ನು ಆಧರಿಸಿ ಇನ್ನಷ್ಟು ದಿನ ಕಾಮಗಾರಿ ಮುಂದುವರಿಸಲು ಕೆಲವರು ಸಲಹೆ ನೀಡುತ್ತಿದ್ದಾರೆ. ಆದರೆ ಕಳೆದ ಬಾರಿ ಕಾಮಗಾರಿ ಆರಂಭಿಸಿ, ಹಣ ಸಂಗ್ರಹವಾಗುವ ಭರವಸೆಯ ಮೇಲೆ ಚಟುವಟಿಕೆಯನ್ನು ಧೈರ್ಯದಿಂದ ಮುಂದುವರಿಸಿದ್ದೆವು. ನಂತರದ ದಿನಗಳಲ್ಲಿ ಬಾಕಿ ಬಿಲ್‌ಗ‌ಳ ಪಾವತಿಗೆ ನಾವು ಬಹಳ ಶ್ರಮ ಪಡಬೇಕಾಯಿತು. ಈ ಹಂತದಲ್ಲಿ ಆ ಅಪಾಯವನ್ನು ತಂದುಕೊಳ್ಳುವ ಕೆಲಸ ಮಾಡುವುದು ಬೇಡ ಎಂದು ಕಾರ್ಯಪಡೆಯ ಸದಸ್ಯರು ತೀರ್ಮಾನಿಸಿದ್ದೇವೆ. ಒಂದೊಮ್ಮೆ ತಕ್ಷಣದಲ್ಲಿ ಹಣಕಾಸಿನ ನೆರವು ಹರಿದುಬಂದರೆ ವಿಳಂಬವಿಲ್ಲದೆ ಈ ವರ್ಷವೇ ಕಾಮಗಾರಿ ಪೂರೈಸಲಾಗುವುದು ಎಂದು ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next