Advertisement

ನೀಲಮಣಿ ಪೊಲೀಸ್‌ ಮುಖ್ಯಸ್ಥೆ

06:00 AM Nov 01, 2017 | Harsha Rao |

ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ಐಪಿಎಸ್‌ ಅಧಿಕಾರಿ ನೀಲಮಣಿ ಎನ್‌.ರಾಜು ಅತ್ಯುನ್ನತ ಡಿಜಿಪಿ ಹುದ್ದೆ ಅಲಂಕರಿಸಿದ್ದಾರೆ.

Advertisement

ಆರ್‌.ಕೆ.ದತ್ತಾ ಅವರ ನಿವೃತ್ತಿಯಿಂದ ತೆರವಾದ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು, ಮಹಾ ನಿರೀಕ್ಷಕರ ಹುದ್ದೆಗೆ ನೀಲಮಣಿ ಎನ್‌.ರಾಜು ಅವರನ್ನು ನೇಮಿಸಿ ಸರಕಾರ ಮಂಗಳವಾರ ಆದೇಶ ಹೊರಡಿಸಿತು. ನೀಲಮಣಿ ಎನ್‌. ರಾಜು ಅವರ ಅಧಿಕಾರ ಅವಧಿ 2020ರ ಜ. 17ರ ವರೆಗೂ ಇದೆ.

ಡಿಜಿಪಿ ಹುದ್ದೆಗೆ ಕಿಶೋರ್‌ಚಂದ್ರ ಹೆಸರು ಕೇಳಿ ಬಂದಿತಾದರೂ ಅಂತಿಮ ಕ್ಷಣದಲ್ಲಿ ರಾಜ್ಯ ಸರಕಾರ ನೀಲಮಣಿ ಎನ್‌.ರಾಜು ಅವರನ್ನು ನೇಮಿಸುವ ಮೂಲಕ ಮಹಿಳಾ ಅಧಿಕಾರಿಗೆ ಮಣೆ ಹಾಕಿದೆ.

ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಸಂಜೆ ನಡೆದ ಕಾರ್ಯಕ್ರಮ ದಲ್ಲಿ ನಿರ್ಗಮಿತ ಡಿಜಿ- ಐಜಿಪಿ ರೂಪಕ್‌ಕುಮಾರ್‌ ದತ್ತಾ ಅವರು ನೂತನ ಡಿಜಿಪಿ ನೀಲಮಣಿ ಎನ್‌.ರಾಜು ಅವರಿಗೆ ಬೇಟನ್‌ ಹಸ್ತಾಂತರಿಸಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ನೀಲಮಣಿ ಎನ್‌. ರಾಜು, “ಪ್ರಥಮವಾಗಿ ಓರ್ವ ಮಹಿಳಾ ಅಧಿಕಾರಿಗೆ ಇಲಾಖೆಯ ಅತ್ಯುನ್ನತ ಸ್ಥಾನ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.  ಈ ಮೂಲಕ ಬಹುದೊಡ್ಡ ಹೊಣೆಗಾರಿಕೆಯನ್ನು ನನ್ನ ಹೆಗಲ ಮೇಲೆ ಹಾಕಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಮುಂದಿರುವ ದೊಡ್ಡ ಸವಾಲು. ಈ ಎಲ್ಲ ಸವಾಲುಗಳನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ. ನನ್ನ ಸಹೋದ್ಯೋಗಿಗಳು, ಅಧಿಕಾರಿಗಳು ಸಮರ್ಥರಾಗಿದ್ದಾರೆ. ಪೊಲೀಸ್‌ ಇಲಾಖೆಯಲ್ಲಿ ಪೇದೆಗಳು ಸಹಿತ ಎಲ್ಲ ಹಂತದ ಅಧಿಕಾರಿಗಳು, ಗೃಹ ಇಲಾಖೆ, ನಾಗರಿಕ ಪಡೆ ಒಳ್ಳೆಯ ಕೆಲಸ ಮಾಡುತ್ತಿದೆ’ ಎಂದರು.

Advertisement

“ಆರ್‌.ಕೆ. ದತ್ತಾ ಅವರು ಕೆಳ ಹಂತದ ಅಧಿಕಾರಿಗಳಿಗೆ ತನಿಖೆ ನಡೆಸುವ ಅಧಿಕಾರ ಹಾಗೂ ಬೀಟ್‌ ಪೊಲೀಸ್‌ ರಚಿಸಿ ಇಲಾಖೆಯನ್ನು ಇನ್ನಷ್ಟು ಚುರುಕು ಮಾಡಿದ್ದಾರೆ. ದತ್ತಾ ಅವರು ಅತೀ ಕಡಿಮೆ ಅವಧಿಯಲ್ಲಿ ದೊಡ್ಡ ಕೆಲಸ ಮಾಡಿದ್ದಾರೆ. ಅದನ್ನು ನಾನು ಮುಂದುವರಿಸಿಕೊಂಡು ಹೋಗುತ್ತೇನೆ. ಇಲಾಖೆ, ಸಮಾಜದಲ್ಲಿ ಶಾಂತಿ ಕಾಪಾಡುವ ದೃಷ್ಟಿ ಯಿಂದ ದಿನದ 24 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧನಿದ್ದೇನೆ’ ಎಂದು ಹೇಳಿದರು.

ಇದಕ್ಕೂ ಮೊದಲು ನೂತನ ಡಿಜಿ-ಐಜಿಪಿ ನೀಲಮಣಿರಾಜು ಅವರಿಗೆ ಪೊಲೀಸ್‌ ಗೌರವ ಸಲ್ಲಿಸಲಾಯಿತು. ಇದೇ ವೇಳೆ ಡಿಜಿಪಿ ಆಗಿ ಭಡ್ತಿ ಹೊಂದಿದ ಪ್ರವೀಣ್‌ ಸೂದ್‌ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ  ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಕಮಲ್‌ ಪಂತ್‌, ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್‌ರಾವ್‌, ಅಲೋಕ್‌ ಮೋಹನ್‌, ಐಜಿಪಿ ಉಮೇಶ್‌, ಅರುಣ್‌ ಚಕ್ರವರ್ತಿ, ಶರತ್‌ ಚಂದ್ರ, ಚರಣ್‌ ರೆಡ್ಡಿ, ಡಿಐಜಿ ಡಿ. ರೂಪಾ ಉಪಸ್ಥಿತರಿದ್ದರು.

ನೀಲಮಣಿ ಪರಿಚಯ
ಪೊಲೀಸ್‌ ಇಲಾಖೆಯ ಸರ್ವೋಚ್ಚ ಪದವಿ ಅಲಂಕರಿಸಿದ ನೀಲಮಣಿ ಎನ್‌.ರಾಜು 1960 ಜ. 17ರಂದು ಉತ್ತರಪ್ರದೇಶದ ರೂರ್ಕಿಯಲ್ಲಿ ಜನಿಸಿದ್ದಾರೆ. ಎಂಎ, ಎಂಬಿಎ, ಎಂಫಿಲ್‌ ಪದವೀಧರೆ. 1983 ಬ್ಯಾಚ್‌ನ ಅಧಿಕಾರಿಯಾಗಿರುವ ಇವರು ಮೊದಲು ಬೆಳಗಾವಿಯಲ್ಲಿ ವೃತ್ತಿ ಜೀವನ ಆರಂಭಿಸಿದರು. ನಂತರ ಕೋಲಾರದ ಚಿಂತಾಮಣಿಯಲ್ಲಿ ಎಎಸ್‌ಪಿ, ವಿಧಿವಿಜ್ಞಾನ ಪರೀûಾ ಕೇಂದ್ರದ ಎಸ್ಪಿ ,ಬೆಂಗಳೂರಿನಲ್ಲಿ ಗುಪ್ತಚರ ಇಲಾಖೆಯ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ಕೇಂದ್ರ ಸೇವೆಗೆ ಮರಳಿದ ನೀಲಮಣಿ ಎನ್‌.ರಾಜು, 1993ರಲ್ಲಿ ಗುಪ್ತಚರ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದರು. 1998ರಿಂದ ಆ. 2002ರವರೆಗೆ ನೇಪಾಲದ ಕಾಠ್ಮಂಡುವಿನಲ್ಲಿ ಭಾರತೀಯ ರಾಯಭಾರಿ ಕಚೇರಿಯ ಕಾರ್ಯದರ್ಶಿಯಾಗಿ, 2005ರಿಂದ 2008ರವರೆಗೆ ಭಾರತೀಯ ವಲಸೆ ವಿಭಾಗದ ಆಯುಕ್ತರಾಗಿದ್ದರು. ಅನಂತರ 2009ರಲ್ಲಿ ರಾಷ್ಟ್ರೀಯ ರಕ್ಷಣಾ ಕಾಲೇಜಿನಲ್ಲಿ ಒಂದು ವರ್ಷದ ಕೋರ್ಸ್‌ಗೆ ಆಯ್ಕೆಯಾಗಿದ್ದರು. ಅನಂತರ 2016 ಮಾರ್ಚ್‌ನಲ್ಲಿ ಮತ್ತೂಮ್ಮೆ ಗುಪ್ತಚರ ಇಲಾಖೆಗೆ ಹೆಚ್ಚುವರಿ ನಿರ್ದೇಶಕರಾಗಿ ಭಡ್ತಿ ಪಡೆದಿದ್ದರು.

2016 ಮೇನಲ್ಲಿ ಕರ್ನಾಟಕ ಪೊಲೀಸ್‌ಗೆ ಮರಳಿದ ನೀಲಮಣಿ ರಾಜು ಅವರ ಸೇವಾ ಹಿರಿತನದ ಆಧಾರದ ಮೇಲೆ ಆಂತರಿಕ ಭದ್ರತಾ ದಳದ ಡಿಜಿಯಾಗಿ ನೇಮಕ ಮಾಡಲಾಯಿತು. ಬಳಿಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಗೃಹ ರಕ್ಷಕ ದಳ, ನಾಗರಿಕರ ರಕ್ಷಣಾ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next