ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಬಾಬ್ತು ನಗರದಲ್ಲಿ ನಡೆಯುತ್ತಿರುವ ಫ್ಲೈಓವರ್ ಕಾಮಗಾರಿ ಮಾರ್ಚ್ ಅಂತ್ಯದಲ್ಲಿ ಮುಕ್ತಾಯವಾಗಲಿದ್ದು ಎಪ್ರಿಲ್ ಮೊದಲ ವಾರದಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಶುಕ್ರವಾರ ಕಾಮಗಾರಿಯ ಪ್ರಗತಿ ಪರಿಶೀಲಿಸಿ ಸುದ್ದಿಗಾರರ ಜತೆ ಮಾತನಾಡಿದರು.
ಕಾಮಗಾರಿಯ ಸ್ಥಿತಿಗತಿ ಕುರಿತು ನವಯುಗ ಸಂಸ್ಥೆಯ ಎಂಜಿನಿಯರ್ ರಾಘವೇಂದ್ರ ಅವರಿಂದ ಮಾಹಿತಿ ಪಡೆದ ಅವರು, ಫ್ಲೈಓವರ್ ಕೆಲಸ ಮಾರ್ಚ್ ಅಂತ್ಯದಲ್ಲಿ ಪೂರ್ಣವಾಗಲಿದೆ. ಬಸ್ರೂರು ಮೂರುಕೈ ಅಂಡರ್‌ಪಾಸ್ ಕಾಮಗಾರಿ ಜೂನ್‌ಗಿಂತ ಮೊದಲು ಪೂರ್ಣವಾಗಲಿದೆ. ಬೇರೆ ಬೇರೆ ಕಾರಣಗಳಿಂದ ಕಾಮಗಾರಿ ಹಿಂದೆ ಬಿದ್ದಿತ್ತು. ಈಗ ವೇಗ ಪಡೆದುಕೊಂಡಿದೆ ಎಂದು ವಿವರಿಸಿದರು.
ಪುರಸಭೆ ಅಧಿಕಾರ ಇನ್ನೂ ದೊರೆತಿಲ್ಲ. ಚುನಾವಣೆ ಫಲಿತಾಂಶ ಘೋಷಣೆಯಾಗಿ ಒಂದೂವರೆ ವರ್ಷ ಕಳೆದರೂ ಅಧಿಕಾರಿಗಳೇ ಆಡಳಿತ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾನೂನು ಹೋರಾಟ ನಡೆದು ಸರಕಾರದಿಂದ ಏನು ಮಾಡಬಹುದೋ ಆ ಕೆಲಸಗಳನ್ನು ಮಾಡಲಾಗುತ್ತಿದೆ. ಅಧಿಕಾರಿಗಳಿಗೂ ಅತಿಯಾದ ಕೆಲಸದ ಒತ್ತಡಗಳಿರುತ್ತವೆ. ಜನಪ್ರತಿನಿಧಿಗಳು ಮಾಡಬಹುದಾದ ಎಲ್ಲ ಕೆಲಸಗಳನ್ನೂ ಅವರು ಮಾಡಲು ಆಗುವುದಿಲ್ಲ. ಸದಸ್ಯರಿಗೆ ಅಧಿಕಾರ ದೊರೆತರೆ ಜನರ ಒಡನಾಟದ ಮೂಲಕ ಕೆಲಸ ಕಾರ್ಯಗಳನ್ನು ನಡೆಸಿಕೊಡಲು, ಅವರ ಸಮಸ್ಯೆಗಳನ್ನು ಆಲಿಸಲು ಸಾಧ್ಯ ಎಂದರು.
ಫ್ಲೈಓವರ್ ಕಾಮಗಾರಿ ನನೆಗುದಿಗೆ ಬಿದ್ದಿದ್ದಾಗ ಸಂಸದರು ಜಿಲ್ಲಾಧಿಕಾರಿಗಳ ಜತೆಗೂಡಿ ಇಲ್ಲಿನ ತಾಲೂಕು ಪಂಚಾಯತ್‌ನಲ್ಲಿ ಸಭೆ ನಡೆಸಿದ್ದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಮಾರ್ಚ್ ಅಂತ್ಯದಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಟೋಲ್ ಬಂದ್ ಮಾಡುವುದಾಗಿ ಎಚ್ಚರಿಸಿದ್ದರು. ಅದಾದ ಬಳಿಕ ಇಲ್ಲಿನ ಸಹಾಯಕ ಕಮಿಷನರ್ ಕೆ. ರಾಜು ಅವರು ಕಾಮಗಾರಿ ವೇಗ ತೆಗೆದುಕೊಳ್ಳದೇ ಇದ್ದರೆ ಕೇಸು ಮಾಡುವುದಾಗಿ ಎಚ್ಚರಿಸಿದ್ದರು. ಸಂಘಟನೆಗಳ ಮೂಲಕ ಪ್ರತಿಭಟನೆ ಕೂಡಾ ನಡೆದಿತ್ತು. ಇದಾದ ಬಳಿಕ ಕಾಮಗಾರಿ ಚುರುಕು ಪಡೆದುಕೊಂಡಿತ್ತು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕಿರಣ್ ಕೊಡ್ಗಿ, ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ ಬೀಜಾಡಿ, ಸತೀಶ್ ಪೂಜಾರಿ, ಮಾಜಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಬಿಲ್ಲವ, ಪುರಸಭೆ ಸದಸ್ಯರಾದ ಮೋಹನದಾಸ ಶೆಣೈ, ರಾಘವೇಂದ್ರ ಖಾರ್ವಿ, ಸಂದೀಪ ಖಾರ್ವಿ, ಶ್ವೇತಾ ಸಂತೋಷ್, ವೀಣಾ ಭಾಸ್ಕರ ಮೆಂಡನ್, ವನಿತಾ ಎಸ್. ಬಿಲ್ಲವ, ಸಂತೋಷ್ ಕುಮಾರ್ ಶೆಟ್ಟಿ, ಪ್ರೇಮಲತಾ, ಅಶ್ವಿನಿ ಪ್ರದೀಪ್, ಮಾಜಿ ಸದಸ್ಯರಾದ ವಿಜಯ್ ಎಸ್. ಪೂಜಾರಿ, ಸತೀಶ್ ಶೆಟ್ಟಿ, ವಸಂತಿ ಸಾರಂಗ, ಗುಣರತ್ನಾ, ಪುಷ್ಪಾ ಶೇಟ್, ಮುಖಂಡರಾದ ಕುತ್ಯಾರು ನವೀನ್ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಉಡುಪಿ, ಗೋಪಾಲ ಕಳಂಜಿ, ಸಂಗೀತಾ, ದಿವಾಕರ ಕಡ್ಗಿ, ಸದಾನಂದ ಬಳ್ಕೂರು, ವಿನೋದ್‌ರಾಜ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಆರಂಭಕ್ಕೆ ಮನವಿ
ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್, ವಿವೇಕ್ ನಾಯಕ್, ಪ್ರವೀಣ್ ಕುಮಾರ್ ಸಂಸದರನ್ನು ಭೇಟಿ ಮಾಡಿದರು. ಈಗಾಗಲೇ ಬೆಂಗಳೂರು ವಾಸ್ಕೊ ರೈಲು ಆರಂಭಿಸಲು ವೇಳಾಪಟ್ಟಿ ಪ್ರಕಟಗೊಂಡಿದ್ದು ಕೇಂದ್ರ ಸಚಿವರ ಜತೆ ಸಮಾಲೋಚಿಸಿ ಆದಷ್ಟು ಶೀಘ್ರ ಚಾಲನೆ ನೀಡಬೇಕೆಂದು ಮನವಿ ಮಾಡಿದರು.
ಮನವಿ
ಮಹೇಶ್ ಶೆಣೈ, ಕೋಡಿ ಅಶೋಕ್ ಪೂಜಾರಿ ಮೊದಲಾದವರು ಸಂಸದರನ್ನು ಭೇಟಿ ಮಾಡಿ ವಿನಾಯಕ ಬಳಿ ಕೋಡಿಗೆ ತೆರಳಲು ಹೆದ್ದಾರಿಯಲ್ಲಿ ಯು ಟರ್ನ್ ನೀಡಬೇಕು ಎಂದು ಸಂಸದರಲ್ಲಿ ಮನವಿ ಮಾಡಿದರು. ಪ್ರಸ್ತುತ ನವಯುಗ ಸಂಸ್ಥೆಯವರ ಪ್ರಕಾರ ಬಸ್ರೂರು ಮೂರುಕೈಯಿಂದ ಬಂದ ವಾಹನಗಳು ಕೋಡಿಗೆ ಬರಬೇಕಾದರೆ ದುರ್ಗಾಂಬಾ ಬಳಿ ಯು ಟರ್ನ್ ತೆಗೆದುಕೊಳ್ಳಬೇಕು. ಆದ್ದರಿಂದ ಇಷ್ಟು ದೂರದ ಅಂತರವನ್ನು ಕಡಿಮೆ ಮಾಡಬೇಕೆಂದು ಮನವಿ ಮಾಡಿದರು. ಸಂಸದರು ಇದಕ್ಕೆ ಸ್ಪಂದಿಸಿ ಮುಂದಿನ ದಿನಗಳಲ್ಲಿ ಮಾತನಾಡುವುದಾಗಿ ಹೇಳಿದರು. ಆರಂಭದಲ್ಲಿ ನವಯುಗ ಸಂಸ್ಥೆಯವರು ಇದಕ್ಕೆ ಒಪ್ಪದೇ ಇದ್ದರೂ ನಂತರ ಕಾಮಗಾರಿ ಪೂರ್ಣವಾಗುವ ಸಂದರ್ಭ ವಿನ್ಯಾಸವನ್ನು ನೋಡಿಕೊಂಡು ನಿರ್ಧರಿಸುವುದಾಗಿ ಹೇಳಿದರು.