ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು ಸಿಲ್ಕ್ಯಾರಾ ಸುರಂಗದೊಳಗೆ ಕಾರ್ಮಿಕರು ಸಿಲುಕಿರುವ ಮೊದಲ ದೃಶ್ಯಗಳು ಮಂಗಳವಾರ ಬೆಳಿಗ್ಗೆ ಬಿಡುಗಡೆಯಾಗಿದೆ.
ಸೋಮವಾರ ರಕ್ಷಣಾ ತಂಡದ ಮೊದಲ ಹಂತದ ಯಶಸ್ಸು ಎಂಬಂತೆ, ಸೋಮವಾರ 6 ಇಂಚು ಅಗಲದ ಪರ್ಯಾಯ ಪೈಪ್‌ವೊಂದು ಕಾರ್ಮಿಕರಿದ್ದ ಸ್ಥಳವನ್ನು ತಲುಪಿದೆ. ಇದರ ಮೂಲಕ ಕ್ಯಾಮೆರಾದಿಂದ ಕಾರ್ಮಿಕರ ಚಲನವಲನದ ದೃಶ್ಯ ಸೆರೆಹಿಡಿಯಲಾಗಿದೆ. ಅಲ್ಲದೆ ಸುಮಾರು ಎಂಟು ದಿನಗಳ ಕಾಲ ಒಳಗೆ ಸಿಕ್ಕಿಬಿದ್ದ 41 ಕಾರ್ಮಿಕರಿಗೆ ಆಹಾರ ಒದಗಿಸುವ ಕಾರ್ಯವನ್ನು ಮಾಡಲಾಯಿತು.
ಸುರಂಗದೊಳಗೆ ಸಿಲುಕಿದ ಕಾರ್ಮಿಕರನ್ನು ಸಂಪರ್ಕಿಸಲು ಅಲ್ಲದೆ ಕಾರ್ಯಾಚರಣೆ ವೇಳೆ ಸಂವಹನ ನಡೆಸಲು ಇದು ಸಹಕಾರಿಯಾಗಲಿದೆ. ಜೊತೆಗೆ ಕಾರ್ಮಿಕರೊಂದಿಗೆ ಸಂವಹನ ಸಾಧ್ಯವಾಗುವಂತೆ ಫೋನ್ ಮತ್ತು ಚಾರ್ಜರ್‌ವೊಂದನ್ನು ರವಾನಿಸಲಾಗಿದೆ.
ವೀಡಿಯೊದಲ್ಲಿ, ಕಾರ್ಮಿಕರು ಹಳದಿ ಮತ್ತು ಬಿಳಿ ಹೆಲ್ಮೆಟ್‌ಗಳನ್ನು ಧರಿಸಿ ಪೈಪ್‌ಲೈನ್ ಮೂಲಕ ಕಳುಹಿಸಲಾದ ಆಹಾರ ಪದಾರ್ಥಗಳನ್ನು ಸ್ವೀಕರಿಸಿ ಪರಸ್ಪರ ಮಾತನಾಡುತ್ತಿರುವುದು ಕಾಣಬಹುದಾಗಿದೆ.
ಸದ್ಯ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು ಕಾರ್ಮಿಕರನ್ನು ರಕ್ಷಿಸುವ ನಿಟ್ಟಿನಲ್ಲಿ 5 ಅಂಶಗಳ ಕ್ರಿಯಾಯೋಜನೆಯನ್ನು ರೂಪಿಸಲಾಗಿದ್ದು, ಅದರಂತೆ, ಪ್ರತಿ ಯೋಜನೆಯ ಹೊಣೆಯನ್ನು 5 ಪ್ರತ್ಯೇಕ ಏಜೆನ್ಸಿಗಳಿಗೆ ವಹಿಸಲಾಗಿದೆ. ಮೂರು ಬದಿಗಳಿಂದ ಡ್ರಿಲ್ಲಿಂಗ್ ಮಾಡಿ ಒಳಗೆ ಸಿಲುಕಿರುವ ಕಾರ್ಮಿಕರನ್ನು ತಲುಪುವುದೇ ಇದರ ಪ್ರಮುಖ ಉದ್ದೇಶವಾಗಿದೆ.
ಇಂಟರ್‌ನ್ಯಾಷನಲ್ ಟನೆಲಿಂಗ್ ಆ್ಯಂಡ್ ಅಂಡರ್‌ಗ್ರೌಂಡ್ ಸ್ಪೇಸ್ ಅಸೋಸಿಯೇಷನ್ ಅಧ್ಯಕ್ಷ ಅರ್ನಾಲ್ಡ್ ಡಿಕ್ಸ್ ಅವರು ಕಾರ್ಮಿಕರ ರಕ್ಷಣೆ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದಾರೆ. ಇದರ ಜೊತೆಗೆ, ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ)ಯ ರೊಬೋಟಿಕ್ಸ್ ತಂಡವೂ ಸ್ಥಳಕ್ಕೆ ಬಂದಿದ್ದು, ಎರಡು ರೊಬೋಟ್‌ಗಳನ್ನೂ ತರಿಸಲಾಗಿದೆ.
ಇದನ್ನೂ ಓದಿ: Video: ದೇಶಕ್ಕಾಗಿ ರಾಹುಲ್ ಗಾಂಧಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದ ಖರ್ಗೆ! ವಿಡಿಯೋ ವೈರಲ್