Advertisement

ONGC ಅನ್ವೇಷಿಸಿದ ಕಚ್ಚಾತೈಲದ ಮೊದಲ ಕಂತು; ಎಂಆರ್‌ಪಿಎಲ್‌ಗೆ “ದೇಶೀಯ’ ಕಚ್ಚಾತೈಲ

01:09 AM Mar 10, 2024 | Team Udayavani |

ಮಂಗಳೂರು: ಮಂಗ ಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ಸ್‌ ಲಿ. (ಎಂಆರ್‌ಪಿಎಲ್‌)ನ ಮಾತೃ ಸಂಸ್ಥೆ ಒಎನ್‌ಜಿಸಿ (ಆಯಿಲ್‌ ಆ್ಯಂಡ್‌ ನ್ಯಾಚುರಲ್‌ ಗ್ಯಾಸ್‌ ಕಾರ್ಪೊ ರೇಶನ್‌) ಬಂಗಾಲಕೊಲ್ಲಿಯ ಕೃಷ್ಣ- ಗೋದಾವರಿ ಜಲಾನಯನ ಪ್ರದೇಶದಲ್ಲಿ ಹೊಸದಾಗಿ ಅನ್ವೇಷಿಸಿದ ಕಚ್ಚಾತೈಲವು ಮಂಗಳೂರಿಗೆ ಆಗಮಿಸಿದೆ.

Advertisement

60 ಸಾವಿರ ಮೆಟ್ರಿಕ್‌ ಟನ್‌ ಕಚ್ಚಾತೈಲ ತುಂಬಿದ ಮೊದಲ ಸರಕು ಹಡಗು “ಸ್ವರ್ಣ ಸಿಂಧು’ ಎನ್‌ಎಂಪಿಎ (ನವ ಮಂಗಳೂರು ಬಂದರು)ಗೆ ಆಗಮಿಸಿದ್ದು, ಶನಿವಾರ ನಡೆದ ಕಚ್ಚಾತೈಲ ಸ್ವೀಕಾರ ಕಾರ್ಯ ಕ್ರಮದಲ್ಲಿ ಒಎನ್‌ಜಿಸಿ, ಎಂಆರ್‌ಪಿಎಲ್‌ ಹಾಗೂ ಎನ್‌ಎಂಪಿಎ ಪ್ರಮುಖರು ಭಾಗವಹಿಸಿದ್ದರು.

ಎಂಆರ್‌ಪಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರು ಶ್ಯಾಮಪ್ರಸಾದ್‌ ಕಾಮತ್‌ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕಚ್ಚಾ ತೈಲವನ್ನು ಪೆಟ್ರೋಲ್‌, ಡೀಸೆಲ್‌ ಸಹಿತ ವಿವಿಧ ಪೆಟ್ರೋಲಿಯಂ ಉತ್ಪನ್ನಗಳಾಗಿ ಸಂಸ್ಕರಿಸಲಾಗುತ್ತದೆ ಎಂದರು.

ನಿರ್ದೇಶಕ (ಸಂಸ್ಕ ರಣೆ) ಸಂಜಯ್‌ ವರ್ಮ ಮಾತನಾಡಿ, ಕಚ್ಚಾತೈಲವನ್ನು ವಿವಿಧ ದೇಶಗಳಿಂದ ಸುಮಾರು ಶೇ. 70 ರಷ್ಟು ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಮುಂಬಯಿ ಸಹಿತ ಬೆರಳೆಣಿಕೆ ಕಡೆಗಳಲ್ಲಿ ಮಾತ್ರ ಆಂಶಿಕ ಪ್ರಮಾಣದಲ್ಲಿ ಕಚ್ಚಾತೈಲ ಸಿಗುತ್ತಿತ್ತು. ಆದರೆ ಮೊದಲ ಬಾರಿಗೆ ಭಾರೀ ಪ್ರಮಾಣದ ಕಚ್ಚಾತೈಲವು ಕೃಷ್ಣ-ಗೋದಾವರಿ ಜಲಾನಯನ ಪ್ರದೇಶದಲ್ಲಿ ದೊರಕಿದೆ ಎಂದರು.

ಎಂಆರ್‌ಪಿಎಲ್‌ ವಿಸ್ತರಣೆಯಿಂದ ಹಸುರು ವಲಯ ಹೆಚ್ಚಿಸಲು ಭೂಮಿ ಕೊರತೆ ಉಂಟಾಗಿದ್ದು, ಹೆಚ್ಚುವರಿ 27 ಎಕರೆ ಭೂಮಿ ಸ್ವಾಧೀನ ಪಡಿಸಿ ಕೊಳ್ಳಲಾ ಗುವುದು ಎಂದರು.

Advertisement

ಬಗ್ಗುಂಡಿ ಕೆರೆ ಮತ್ತು ಫಲ್ಗುಣಿ (ಗುರು ಪುರ) ನದಿಯ ನಡುವಿನ ಕುಡುಂಬೂರು ನದಿ ಬದಿ ಕಾಂಡ್ಲಾವನ ಬೆಳೆಸಲು ಅರಣ್ಯ ಇಲಾಖೆ ಯ ಅನುಮತಿ ಕೇಳಲಾಗಿದೆ ಎಂದರು. ಸಂಸ್ಥೆಯ ಗ್ರೂಪ್‌ ಮ್ಯಾನೇಜರ್‌ ಕೃಷ್ಣ ಹೆಗ್ಡೆ ಉಪಸ್ಥಿತರಿದ್ದರು. ಕಾರ್ಪೊ ರೇಟ್‌ ಕಮ್ಯುನಿಕೇಶನ್‌ನ ಜನರಲ್‌ ಮ್ಯಾನೇಜರ್‌ ರುಡಾಲ್ಫ್ ನೊರೊನ್ಹಾ ನಿರೂಪಿಸಿದರು.

ತ್ಯಾಜ್ಯ ಹೊರಬಿಡುತ್ತಿಲ್ಲ
ಎಂಆರ್‌ಪಿಎಲ್‌ ಸಂಸ್ಥೆ ತನ್ನ ವ್ಯಾಪ್ತಿಯ ಮಳೆನೀರು ಚರಂಡಿಗಳಿಗೆ ತ್ಯಾಜ್ಯ ಬಿಡುತ್ತಿಲ್ಲ ಎಂದು ಮುಂಡ್ಕೂರು ಶ್ಯಾಮಪ್ರಸಾದ್‌ ಕಾಮತ್‌ ತಿಳಿಸಿದರು. “ಫಲ್ಗುಣಿ ನದಿಯು ಎಂಆರ್‌ಪಿಎಲ್‌ ಮತ್ತಿತರ ಕೈಗಾರಿಕೆಗಳಿಂದ ಕಲು ಷಿತವಾಗುತ್ತಿದೆ’ ಎಂಬ ಆರೋಪದ ಬಗೆಗಿನ ಪ್ರಶ್ನೆಗೆ ಉತ್ತರಿಸಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ನಮ್ಮ ಪ್ರದೇಶಕ್ಕೆ ಭೇಟಿ ನೀಡಿ ಸುತ್ತಲಿನ ಎಲ್ಲ ಮಳೆನೀರು ಚರಂಡಿಗಳನ್ನು ಪರಿಶೀಲಿಸಿದ್ದು, ಯಾವುದೇ ತ್ಯಾಜ್ಯ ಹೊರಸೂಸುವಿಕೆ ಕಂಡುಬಂದಿಲ್ಲ. ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್‌ ಸಂಶೋಧನ ಸಂಸ್ಥೆ (ನೀರಿ) ಕೂಡ ಸಂಸ್ಕರಣಾಗಾರದ 5 ಮತ್ತು 10 ಕಿ.ಮೀ. ವ್ಯಾಪ್ತಿಯಲ್ಲಿ ಗಾಳಿ, ನೀರಿನ ಮಾದರಿಗಳನ್ನು ಸ್ವೀಕರಿಸಿ ಎಂಆರ್‌ಪಿಎಲ್‌ನ ಗ್ರಿಡ್‌ ವಿಶ್ಲೇಷಣೆ ನಡೆಸುತ್ತದೆ. ಪರಿಸರ ಕಾಳಜಿ ವಿಚಾರದಲ್ಲಿ ಎಂಆರ್‌ಪಿಎಲ್‌ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next