ಭುವನೇಶ್ವರ್: ಗರ್ಭಗುಡಿಗೆ ಮಹಿಳಾ ಪ್ರವೇಶ ನಿರ್ಬಂಧವಿರುವ ಅನೇಕ ದೇವಾಲಯಗಳು ದೇಶದಲ್ಲಿವೆ. ಆದರೆ, ದೇವಾಲಯ ಪ್ರವೇಶಕ್ಕೆ ಪುರುಷರಿಗೇ ನಿರ್ಬಂಧವಿದ್ದು, 400 ವರ್ಷಗಳ ಬಳಿಕ, ಈಗ ಅನಿವಾರ್ಯ ಕಾರಣಕ್ಕಾಗಿ ದೇಗುಲ ಪ್ರವೇಶಿಸಲು ಅವರಿಗೆ ಅವಕಾಶ ಕೊಟ್ಟ ಅಪರೂಪದ ಪ್ರಸಂಗವೊಂದು ಇಲ್ಲಿದೆ.
ಒಡಿಶಾದ ಕೇಂದ್ರಪರಾ ಜಿಲ್ಲೆಯ ಸತಾಭಯಾ ಹಳ್ಳಿಯಲ್ಲಿ 400 ವರ್ಷಗಳಿಂದ ವಿವಾಹಿತ ದಲಿತ ಮಹಿಳೆಯರೇ ಪೂಜಿಸಿಕೊಂಡು ಬಂದಿದ್ದ ಮಾ ಪಂಚುಬಾರಹಿ ದೇವಾಲಯಕ್ಕೆ ಕಡೆಗೂ ಮೊದಲ ಬಾರಿಗೆ ಪುರುಷರ ಪ್ರವೇಶವಾಗಿದೆ. ದೇಗುಲದ ಗರ್ಭಗುಡಿಯಲ್ಲಿದ್ದ ಐದು ವಿಗ್ರಹಗಳನ್ನು ಪುರುಷರು ಸ್ಪರ್ಶಿಸಿದ್ದಾರೆ. ಎ.20ರವರೆಗೂ ಪುರುಷರ ಪ್ರವೇಶಕ್ಕೆ ನಿರ್ಬಂಧವಿದ್ದ ಈ ದೇಗುಲಕ್ಕೆ, ಈಗ ಅನುಮತಿ ಕೊಟ್ಟಿರುವುದು ಸಾಕಷ್ಟು ಚರ್ಚೆಗೂ ಕಾರಣವಾಗಿದೆ.
ಪುರುಷರು ಪ್ರವೇಶಿಸಿದ್ದೇಕೆ?: ಇದಕ್ಕೆ ಬಲವಾದ ಕಾರಣ ಇದೆ. ಹವಾಮಾನ ವೈಪರೀತ್ಯ ಸೇರಿ ಅನೇಕ ಕಾರಣಗಳಿಂದ ದೇಗುಲ ಶಿಥಿಲಾವಸ್ಥೆಗೆ ತಲುಪಿತ್ತು. ಪ್ರವಾಹದಿಂದ ದೇಗುಲಕ್ಕೆ ಭಾರೀ ಹಾನಿಯಾಗಿತ್ತು. ಪ್ರತಿವರ್ಷವೂ ಇದೇ ಸಮಸ್ಯೆ ತಲೆದೋರುತ್ತಿದ್ದ ಕಾರಣ ಇಲ್ಲಿನ ಜನ ದೇಗುಲವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ, ತಲಾ 1.5 ಟನ್ ತೂಕವಿದ್ದ ಅಮೃತಶಿಲೆಯ 5 ವಿಗ್ರಹಗಳನ್ನು ಬಗಪಾಟಿಯಾ ಎಂಬಲ್ಲಿಗೆ ಸ್ಥಳಾಂತರಿಸುವ ಉದ್ದೇಶದಿಂದ ಐದು ಮಂದಿ ಪುರುಷರಿಗೆ ದೇಗುಲದ ಒಳ ಪ್ರವೇಶಿಸಲು ಅವಕಾಶ ನೀಡಲಾಯಿತು. ವಿಗ್ರಹ ಸ್ಥಳಾಂತರ ಮಹಿಳಾ ಭಕ್ತರಿಂದ ಸಾಧ್ಯವಾಗದೇ ಇದ್ದಾಗ ಈ ನಿರ್ಧಾರಕ್ಕೆ ಬರಲಾಯಿತು.
ಹಾನಿಗೆ ಪ್ರಮುಖ ಕಾರಣ
– ಸತಾಭಯಾ ಗ್ರಾಮ ಕಳೆದ ಕೆಲವು ದಶಕಗಳಿಂದ ಪ್ರವಾಹದಿಂದ ಹಾನಿ
– ದ್ವೀಪ ಪ್ರದೇಶ ಇದಾಗಿದ್ದರಿಂದ ನೀರಿನ ಮಟ್ಟವೂ ಕೆಲವು ವರ್ಷಗಳಿಂದ ಹೆಚ್ಚಳ