ಬೆಂಗಳೂರು: ಸೋಮವಾರ ವಿಶ್ವಸ ಮತ ಯಾಚನೆಗೂ ಮೊದಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎತ್ತಿರುವ ಕ್ರಿಯಾಲೋಪದ ಬಗ್ಗೆ ಚರ್ಚೆಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಹೇಳಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯ ನಂತರ ಮಾತನಾಡಿದ ಅವರು, ಸೋಮವಾರ ವಿಶ್ವಾಸ ಮತ ಯಾಚನೆಯ ಪ್ರಕ್ರಿಯೆ ಮುಂದುವರಿಯುತ್ತದೆ. ಇದಕ್ಕೂ ಮೊದಲು ಸಿದ್ದರಾಮಯ್ಯ ಎತ್ತಿರುವ ಪ್ರಶ್ನೆಗೆ ಉತ್ತರ ದೊರೆಯಬೇಕಿದೆ. ಸಂವಿಧಾನದ 10ನೇ ಪರಿಚ್ಛೇದದಲ್ಲಿ ಏನಿದೆ ಎನ್ನುವುದು ಚರ್ಚೆಯಾಗಬೇಕು ಎಂದು ಹೇಳಿದರು.
ಬಿಜೆಪಿ ಅವರು ಒಂದು ಸಾವಿರ ಕೋಟಿ ಖರ್ಚು ಮಾಡಿ ಸರ್ಕಾರ ರಚನೆ ಮಾಡಲು ಮುಂದಾಗಿದ್ದಾರೆ. ಇದನ್ನು ಸುಮ್ಮನೆ ಹೇಳುತ್ತಿಲ್ಲ, ಯಡಿಯೂರಪ್ಪ ಬಿ.ಸಿ.ಪಾಟೀಲ್ ಅವರ ಜತೆ ಮಾತನಾಡಿರುವ ಆಡಿಯೋದಲ್ಲಿ ಏನಿದೆ ಎಂಬುದು ಮುಖ್ಯ ಎಂದರು.
ಸೋಮವಾರ ವಿಶ್ವಾಸ ಮತ ಯಾಚನೆ ಮಾಡಿ ನಾವು ಗೆಲ್ಲುತ್ತೇವೆ. ಬೇರೆ ಪಕ್ಷದ ಶಾಸಕರು ಬೇಜಾರು ಮಾಡಿಕೊಂಡಿದ್ದಾರೆ. ನಮ್ಮ ಶಾಸಕರು ಬಹಳ ಉತ್ಸಾಹದಿಂದ ಇದ್ದಾರೆ ಎಂದ ದಿನೇಶ್, ನಾವು ವಿಧಾನಸಭೆಯಲ್ಲಿ ಕಾಲ ಹರಣ ಮಾಡಲಿಲ್ಲ, ಉತ್ತಮವಾಗಿ ಚರ್ಚೆ ಮಾಡಿದ್ದೇವೆ. ವಿಶ್ವಾಸಮತಯಾಚನೆಯಲ್ಲಿ ನಮ್ಮ ಶಾಸಕರು ಏನು ಮಾಡಿದ್ದಾರೆ ಎಂದು ಹೇಳಬಾರದಾ ಎಂದು ಪ್ರಶ್ನಿಸಿದರು.
ಪಾಪ, ಅತೃಪ್ತರು ಬಿಜೆಪಿಯ ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಬಿಜೆಪಿಯವರು ಅವರಿಗೆ ದುಡ್ಡಿನ ಆಮೀಷ ಒಡ್ಡಿದ್ದಾರೆ. ಅವರು ರಾಜಕೀಯ ವ್ಯಭಿಚಾರ ಮಾಡುತ್ತಿದ್ದಾರೆ. ಇವರು ದುಡ್ಡಿಗಾಗಿ ಹೀಗೆ ಮಾಡಿದರೆ ಇದನ್ನು ನಾವು ರಾಜಕೀಯ ವ್ಯಭಿಚಾರ ಎನ್ನಲೇಬೇಕಾಗುತ್ತದೆ. ನಾವು ಈ ಪರಿಸ್ಥಿತಿಯನ್ನು ಸಮರ್ಥವಾಗಿ ಎದರಿಸುತ್ತೇವೆ ಎನ್ನುವ ನಂಬಿಕೆ ಇದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.