ತುಳು ಭಾಷೆಯಲ್ಲಿ ಮೊದಲ ಯಕ್ಷಗಾನ ಕೃತಿ ಹತ್ತೂಂಭತ್ತನೆಯ ಶತಮಾನದ ಉತ್ತರಾರ್ಧ(1880)ದಲ್ಲಿ ಪೆರುವಡಿ ಸಂಕಯ್ಯ ಭಾಗವತರಿಂದ ನಡೆಯಿತು ಎನ್ನುತ್ತವೆ ಮಾಹಿತಿಗಳು. ಅನಂತರ ತುಳು ಭಾಷೆಯಲ್ಲಿ ಸಾಕಷ್ಟು ಕೃತಿಗಳ ರಚನೆಯಾಗಿದೆ, ರಂಗಸ್ಥಳದಲ್ಲಿ ಪ್ರದರ್ಶಿತವಾಗಿ ಯಶಸ್ಸಿನ ತುತ್ತ ತುದಿಗೇರಿವೆ. ಆದರೆ ಸಾಮಾನ್ಯ ತುಳುವಿಗಿಂತ ವಿಭಿನ್ನವಾದ ರೀತಿಯ ಶಿವಳ್ಳಿ ಬ್ರಾಹ್ಮಣರ ಭಾಷೆಯಲ್ಲಿ ಪ್ರಪ್ರಥಮ ಬಾರಿಗೆ ಕೃತಿ ರಚನೆ ಮಾಡಿ ಅದೇ ಭಾಷೆಯಲ್ಲಿ ಅರ್ಥಗಾರಿಕೆಯನ್ನೂ ಪ್ರದರ್ಶಿಸುವ ಅಚ್ಚುಕಟ್ಟಾದ ತಾಳ ಮದ್ದಳೆಯೊಂದು ಬೆಳ್ತಂಗಡಿ ತಾಲೂಕಿನ ಭಂಡಾರಿಗೋಳಿಯಲ್ಲಿ ನಡೆಯಿತು.
ಅನುಭವಿ ಅರ್ಥಧಾರಿಗಳಾದ ಶಿಕ್ಷಕ ಬಳಂಜ ರಾಮಕೃಷ್ಣ ಭಟ್ಟರು ಅರ್ಜುನನು ಶಿವನೊಂದಿಗೆ ಹೋರಾಡಿ ಭಕ್ತಿಯಿಂದ ಗೆದ್ದು ಪಾಶುಪತಾಸ್ತ್ರವನ್ನು ಸಂಪಾದಿಸುವ ಕಿರಾತಾರ್ಜುನೀಯ ಪ್ರಸಂಗದಿಂದ ಕತೆಯನ್ನು ಆರಂಭಿಸಿದ್ದಾರೆ. ಬಳಿಕ ಇಂದ್ರನಗರಿಗೆ ಹೋದ ಅರ್ಜುನನು ಊರ್ವಶಿಯು ನರ್ತಿಸುವ ಕಾಲದಲ್ಲಿ ಅವಳ ದೇಹ ಸೌಷ್ಟವವನ್ನು ನೋಡುವುದರಲ್ಲಿ ತಲ್ಲೀನನಾಗುತ್ತಾನೆ. ಇದನ್ನು ಗಮನಿಸಿದ ಇಂದ್ರನು ಏಕಾಂತದಲ್ಲಿರುವ ಅರ್ಜುನನಿಗೆ ಸುಖ ನೀಡುವುದಕ್ಕಾಗಿ ಊರ್ವಶಿಯನ್ನು ಕಳುಹಿಸುತ್ತಾನೆ. ಅರ್ಜುನನು ಅವಳನ್ನು ಭೋಗದ ಕಾಮಿನಿಯೆಂದು ತಿಳಿಯದೆ ತನ್ನ ವಂಶದ ಹಿರಿಯನಾದ ಪುರೂರವನಿಗೆ ಅವಳು ಸತಿಯಾಗಿದ್ದಳೆಂಬ ಕಾರಣ ನೀಡಿ, ನೀನು ಮಾತೃಸ್ವರೂಪಿಯಾದ ಕಾರಣ ನನಗೆ ಗ್ರಾಹ್ಯಳಲ್ಲ ಎಂದು ನಿರಾಕರಿಸುತ್ತಾನೆ.
ಆದರೆ ಊರ್ವಶಿಯು ದೇವಲೋಕದ ಗಣಿಕೆಯರು ಸದಾಕಾಲ ಷೋಡಶಿಯರೇ ಆಗಿರುತ್ತಾರೆ, ಅವರಿಗೆ ಇಂತಹ ಸಂಬಂಧಗಳ ಲೇಪವಿರುವುದಿಲ್ಲ. ನನ್ನನ್ನು ಸೇರು ಎಂದು ಹೇಳಿದಾಗಲೂ ಅರ್ಜುನನು ನಿರಾಕರಿಸುತ್ತಾನೆ. ಕ್ರೋಧದಿಂದ ಊರ್ವಶಿಯು ಅವನಿಗೆ ಒಂದು ವರ್ಷದ ಕಾಲ ಷಂಡನಾಗಿರುವಂತೆ ಶಾಪ ನೀಡುತ್ತಾಳೆ. ಮುಂದೆ ಅಜ್ಞಾತವಾಸದ ಅವಧಿಯಲ್ಲಿ ಬೃಹನ್ನಳೆಯಾಗಿ ವಿರಾಟನ ಅಂತಃಪುರದಲ್ಲಿರಲು ಅರ್ಜುನನಿಗೆ ಈ ಶಾಪವೇ ವರವಾಗಿ ಪರಿಣಮಿಸುತ್ತದೆ.
ಅರ್ಜುನನಾಗಿ ಮಧೂರು ಮೋಹನ ಕಲ್ಲೂರಾಯರು ಸಮರ್ಥ ಪಾತ್ರ ಪೋಷಣೆ, ಮಾತಿನ ವರಸೆಗಳಿಂದ ಗಮನ ಸೆಳೆದರು. ಈಶ್ವರನಾಗಿ ಸುವರ್ಣಕುಮಾರಿಯವರದು ಹೆಣ್ತನದ ಅಳುಕಿಲ್ಲದೆ ಪುರುಷ ಪ್ರಧಾನವಾದ ಪಾತ್ರವನ್ನು ಮಾತಿನ ಗತ್ತು ಪಾತ್ರದ ಘನತೆಯನ್ನು ಮೇಲ್ಮಟ್ಟಕ್ಕೇರಿಸಿತು. ರಾಮಕೃಷ್ಣ ಭಟ್ಟರ ಊರ್ವಶಿ ಪಾತ್ರದ ಶೃಂಗಾರ ಭಾವದ ಪ್ರಕಟನೆಯಂತೂ ಕೇಳುಗರ ಮನವನ್ನು ಮುದಗೊಳಿಸಿತು. ಊರ್ವಶಿ ಕೇಳಿದ ಕಾಲೋಚಿತ ಪ್ರಶ್ನೆಗಳಿಗೆ ಬಿರುದೆಂತೆಂಬರ ಗಂಡ ಅರ್ಜುನನ ಬಳಿ ಉತ್ತರವಿರಲಿಲ್ಲ. ವಿಭಿನ್ನವಾದ ಶಿವಳ್ಳಿ ಭಾಷೆಯಲ್ಲಿ ಮೊದಲ ಬಾರಿಗೆ ಈ ಪಾತ್ರಗಳ ಅಭಿವ್ಯಕ್ತಿ ಪ್ರಕಟವಾಗುತ್ತಿದೆಯೆಂಬ ಭಾವ ಎಲ್ಲಿಯೂ ವ್ಯಕ್ತವಾಗಲಿಲ್ಲ.
ಇನ್ನು ಪ್ರಸಂಗವನ್ನು ಕಳೆಗಟ್ಟಿಸಿದ್ದು ಹಿಮ್ಮೇಳ. ಮಧುರವಾದ ಶರಧಿಯೇ ಹರಿದು ಬಂದಂತಹ ರಾಗ ರಸ ಪ್ರೌಢಿಮೆಯಿಂದ ಮನ ಗೆದ್ದ ವಾಸುದೇವ ಕಲ್ಲೂರಾಯರ ಭಾಗವತಿಕೆಯ ಭಾವ ಪ್ರಕ್ಷಕರನ್ನು ಸೆರೆ ಹಿಡಿದದ್ದು ಸುಳ್ಳಲ್ಲ. ಕೇದಾರಗೌಳ ರಾಗದಲ್ಲಿ, “ಮದನಾರಿನೊಟ್ಟುದ ಯುದೊœಡು ಗೆಂದ್ಯೆ ಮದನನ ಬಾಣೊಡು ಜಾದಂಪೆನಾ'(ಮದನಾರಿಯೊಂದಿಗಿನ ಯುದ್ಧದಲ್ಲಿ ಗೆದ್ದವನು ಮದನನ ಬಾಣಕ್ಕೆ ಏನೆನ್ನುವನೋ)ಸೌರಾಷ್ಟ್ರ ರಾಗದ “ಎಲ ಎಲ ಭಂಡೆರ ಗಂಡ, ಹೇಡಿಳೆ ಅರಸ'(ಎಲ ಎಲ ಭಂಡರ ಗಂಡ, ಹೇಡಿಗಳ ಅರಸ) ಪದ್ಯಗಳು ಚಪ್ಪಾಳೆ ಗಿಟ್ಟಿಸಿದವು. ರಾಮಪ್ರಕಾಶ ಕಲ್ಲೂರಾಯರ ಮೃದಂಗ, ಸುದರ್ಶನ ಕಲ್ಲೂರಾಯರ ಚೆಂಡೆ ವಾದನವೂ ಪ್ರಸಂಗದ ವೈಭವವನ್ನು ಇನ್ನಷ್ಟು ಹೆಚ್ಚಿಸಿದವು.
ಪ. ರಾಮಕೃಷ್ಣ ಶಾಸ್ತ್ರಿ