Advertisement

ಬ್ಲೂವೇಲ್‌ ಗೇಮ್‌ಗೆ ದೇಶದಲ್ಲಿ 4ನೇ ಬಲಿ

06:00 AM Sep 01, 2017 | Team Udayavani |

ಮದುರೆ: ಮಕ್ಕಳು, ವಿದ್ಯಾರ್ಥಿಗಳನ್ನು ಬಲಿತೆಗೆದುಕೊಳ್ಳುತ್ತಿರುವ ಅಪಾಯಕಾರಿ ಆನ್‌ಲೈನ್‌ ಆಟ ಬ್ಲೂವೇಲ್‌ ಚಾಲೆಂಜ್‌ ಇದೀಗ ತಮಿಳುನಾಡಿನಲ್ಲೂ ಜೀವ ಬಲಿ ಪಡೆದಿದೆ.

Advertisement

19ರ ಹರೆಯದ ಬಿಕಾಂ ವಿದ್ಯಾರ್ಥಿ ವಿಘ್ನೇಶ್‌ ನೇಣಿಗೆ ಶರಣಾಗಿದ್ದಾನೆ. ಈ ಮೂಲಕ ಆಗಸ್ಟ್‌ ತಿಂಗಳೊಂದರಲ್ಲೇ ದೇಶದಲ್ಲಿ ಬ್ಲೂವೇಲ್‌ಗೆ ನಾಲ್ವರು ಪ್ರಾಣ ಕಳೆದುಕೊಂಡಂತಾಗಿದೆ. ಆಘಾತಕಾರಿ ವಿಚಾರವೆಂದರೆ, ತಮಿಳುನಾಡಿನಲ್ಲಿ ಇನ್ನೂ 75 ಮಂದಿ ವಿದ್ಯಾರ್ಥಿಗಳು ಈ ಸಾವಿನ ಆಟವನ್ನು ಆಡುತ್ತಿದ್ದಾರೆ ಎಂದು ಸ್ವತಃ ಪೊಲೀಸರೇ ಬಹಿರಂಗಪಡಿಸಿದ್ದಾರೆ.

ಒಳಹೋದರೆ, ಹೊರಬರಲಾಗದು: ನೇಣಿಗೆ ಕುತ್ತಿಗೆ ಒಡ್ಡುವ ಮೊದಲು ವಿಘ್ನೇಶ್‌ ಪತ್ರವೊಂದನ್ನು ಬರೆದಿಟ್ಟಿದ್ದು, ಈ ಡೆಡ್ಲಿ ಗೇಮ್‌ನ ಆತಂಕವನ್ನು ಇನ್ನಷ್ಟು ಹೆಚ್ಚಿಸುವಂತಿದೆ. “ಬ್ಲೂವೇಲ್‌- ಇದು ಆಟವಲ್ಲ, ಅಪಾಯ. ಒಮ್ಮೆ ನೀವು ಇದರೊಳಗೆ ಪ್ರವೇಶಿಸಿದರೆ, ಮತ್ತೆ ಹೊರಬರಲು ಸಾಧ್ಯವೇ ಇಲ್ಲ,’ ಎಂದು ವಿಘ್ನೇಶ್‌ ಬರೆದಿದ್ದಾನೆ. ಜತೆಗೆ, ಅವನ ಎಡಗೈ ಮೇಲೆ ಬ್ಲೂವೇಲ್‌ನ ಚಿತ್ರವನ್ನೂ ಕೆತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಸ್ಟರ್‌ಮೈಂಡ್  ಯುವತಿ ಬಂಧನ: ಬ್ಲೂವೇಲ್‌ ಆಟದ ಮಾಸ್ಟರ್‌ಮೈಂಡ್ , 17ರ ಯುವತಿಯನ್ನು ರಷ್ಯಾ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈಕೆ ಹಲವು ಬ್ಲೂವೇಲ್‌ ಆಟಗಳ ಗುಂಪುಗಳನ್ನು ನಿಯಂತ್ರಿಸುತ್ತಿದ್ದಳು ಹಾಗೂ ಯಾರು ತನ್ನ ಸೂಚನೆಯಂತೆ ನಡೆದುಕೊಳ್ಳುವುದಿಲ್ಲವೋ, ಅವರನ್ನು ಕೊಲ್ಲುವ ಅಥವಾ ಅವರ ಕುಟುಂಬ ಸದಸ್ಯರನ್ನು ಹತ್ಯೆಗೈಯ್ಯುವ ಬೆದರಿಕೆ ಹಾಕುತ್ತಿದ್ದಳು. ಆರಂಭದಲ್ಲಿ ಈಕೆಯೂ ಬ್ಲೂವೇಲ್‌ ಆಡಿದ್ದು, ಅಂತಿಮ ಟಾಸ್ಕ್ ಪೂರ್ಣಗೊಳಿಸಿರಲಿಲ್ಲ. ಹೀಗಾಗಿ, ತಾನೇ “ಅಡ್ಮಿನ್‌’ ಆಗಿ, ವಿಶ್ವಾದ್ಯಂತ ಹಲವರನ್ನು ಬಲಿತೆಗೆದುಕೊಳ್ಳಲು ಆರಂಭಿಸಿದಳು. ಆಕೆ, ಸಂತ್ರಸ್ತರಲ್ಲಿ ತನ್ನನ್ನು ತಾನು ಹುಡುಗ ಎಂದು ಪರಿಚಯಿಸಿಕೊಳ್ಳುತ್ತಿದ್ದಳು ಎಂದಿದ್ದಾರೆ ಪೊಲೀಸರು.

Advertisement

Udayavani is now on Telegram. Click here to join our channel and stay updated with the latest news.

Next