Advertisement

ಮೊದಲ ಮೆಟ್ಟಿಲು

06:00 AM Aug 06, 2018 | |

ಹಣ ಹೂಡಿಕೆ ಕುರಿತಾದ ಯಾವುದೇ ಸಭೆಗಳಿಗೆ ಹೋದರೂ ಅಲ್ಲೊಂದು ಕಥೆ ಹೇಳುತ್ತಾರೆ. ಕಥೆ  ಅಂದರೆ, ಈ ಹಿಂದೆ ಏನಾಯಿತು ಎಂಬುದನ್ನು ವರ್ಣರಂಜಿತವಾಗಿ ವಿವರಿಸುವುದು. ನೀವೇನಾದರೂ 1998 ರಲ್ಲಿ ಇಂತಹ ಷೇರು ಕೊಂಡಿದ್ದರೆ, ಈಗ ಎಷ್ಟಾಗುತ್ತಿತ್ತು ಎನ್ನುವುದನ್ನು  ಆಧಾರ ಸಹಿತವಾಗಿ ಹೇಳುವುದು. ಇಂಥವು ಕೇವಲ ಒಂದೆರಡು ಉದಾಹರಣೆ ಅಲ್ಲ. ಸರಣಿ ಉದಾಹರಣೆಗಳನ್ನು ಹೇಳುವುದು. ಕೇಳುತ್ತ ಕುಳಿತವರು ಸುತ್ತಲೂ ಕೋಟ್ಯಾಧೀಶರನ್ನೇ ಕಣ್ಣಲ್ಲಿ ತುಂಬಿಕೊಂಡು, ತಾವೂ ಕೋಟ್ಯಾಧೀಶರಾಗುವ ಕನಸು ಹೆಣೆಯುವುದು. ಇಲ್ಲಿನ ಮಾತುಗಳನ್ನು ಕೇಳಿದಾಗ ದುಡ್ಡು ಮಾಡುವುದು ಇಷ್ಟು ಸುಲಭವಾ ಅನ್ನಿಸಿ ಹೊಸ ಭರವಸೆ ಹೊಂದುವುದು.

Advertisement

ಇಂತಹ ಮಾತುಗಳನ್ನು ಕೇಳಿದಾಗ ತಕ್ಷಣಕ್ಕೆ ನಾವು ತಾರ್ಕಿಕ ಆಲೋಚನೆಗಳನ್ನು ಪಕ್ಕಕ್ಕಿಟ್ಟು, ಸಾಧ್ಯಾ ಸಾಧ್ಯತೆಗಳನ್ನು ಪರಿಶೀಲಿಸದೆ, ಮೂರನೇ ವ್ಯಕ್ತಿಯೊಬ್ಬ ಹೇಳಿದ ಮಾತುಗಳನ್ನು ಕಣ್ಮುಚ್ಚಿಕೊಂಡು ನಂಬುತ್ತೇವೆ. ಎಷ್ಟರ ಮಟ್ಟಿಗೆ ಅಂದರೆ- ನಾಳಿಯಿಂದಲೇ ನಾವು ಹೂಡಿಕೆ ಮಾಡಬೇಕು. ಈ ಹೂಡಿಕೆಯ ಬಲದಿಂದಲೇ ಮುಂದಿನ ಐದೇ ವರ್ಷದಲ್ಲಿ ಲಕ್ಷಾಧಿಪತಿ ಆಗಿಬಿಡಬೇಕು ಎಂದೆಲ್ಲಾ ಯೋಚಿಸುತ್ತೇವೆ. 

ಹೀಗೊಂದು ಉಳಿತಾಯದ ಯೋಜನೆ ಇದೆ. ಇದರಲ್ಲಿ ಹೂಡಿಕೆ ಮಾಡಿದರೆ ಇಂತಿಷ್ಟು ದಿನದಲ್ಲಿ, ಇಂತಿಷ್ಟು ಹಣ ಸಿಗುತ್ತದೆ ಎಂದು ನಮಗೆ ಏಜೆಂಟೋ, ಪರಿಚಯದ ಹಿರಿಯರೋ ಹೇಳುತ್ತಾರೆ ಅಂದುಕೊಳ್ಳಿ. ತಮ್ಮ ಮಾತಿಗೆ ಉದಾಹರಣೆ ಹಾಗೂ ಸಮರ್ಥನೆಯ ರೂಪದಲ್ಲಿ ಅವರು ಒಂದು ಲೆಕ್ಕಾಚಾರವನ್ನು ನಮ್ಮ ಮುಂದಿಡುತ್ತಾರೆ.  ಮುಂದಿನ ಇಷ್ಟು ವರ್ಷದಲ್ಲಿ ನಿಮ್ಮ ಹಣ ಇಷ್ಟಾಗುತ್ತದೆ. ಅದಕ್ಕೊಂದು ಲೆಕ್ಕಾಚಾರ ಕೊಡುತ್ತಾರೆ. ಆ ಲೆಕ್ಕಾಚಾರ ಕರಾರುವಕ್ಕಾಗಿರುತ್ತದೆ. ಅದರಲ್ಲಿ ತಪ್ಪು ಇಲ್ಲ. ಉದಾಹರಣೆಗೆ ವರ್ಷಕ್ಕೆ 5000 ರೂಪಾಯಿಯ ಹಾಗೆ ಮುಂದಿನ 20 ವರ್ಷ ನೀವು ಕಟ್ಟುತ್ತ ಬಂದರೆ ನಿಮ್ಮ ಹಣ ಇಷ್ಟಾಗುತ್ತದೆ ಎನ್ನುತ್ತಾರೆ. ಈ ವಿವರಗಳೂ ನಮಗೆ ಆಪ್ತವಾಗುತ್ತವೆ. ಕುಳಿತಲ್ಲಿಯೇ ನಾವು ನಿರ್ಧರಿಸುತ್ತೇವೆ. ಖಂಡಿತ ಹೀಗೆ ಮಾಡಬೇಕು ಅಂತಾ. ಆದರೆ ಮನೆಗೆ ಬಂದಾಗ  ನಮ್ಮ ನಿರ್ಧಾರಗಳ ತೀವ್ರತೆ ಕಡಿಮೆ ಆಗುತ್ತದೆ. ಒಂದೆರಡು ದಿನ ಕಳೆಯುವುದರಲ್ಲಿ ನಮಗೆ ಅದು ಮರೆತೇ ಹೋಗುತ್ತದೆ.

ಹಾಗಾಗಿ, ಯಾವುದೇ ಹಣಕಾಸು ಹೂಡಿಕೆ ಮಾಡುವಾಗ, ಯಾಕೆ ಇಂತಹ ಹೂಡಿಕೆ ಮಾಡುತ್ತಿದ್ದೇವೆ ಎನ್ನುವುದು ಸ್ಪಷ್ಟವಾಗಿದ್ದಾಗ ಹೂಡಿಕೆ ಮಾಡಿಯೇ ತೀರುತ್ತೇವೆ. ಮಕ್ಕಳ ಶಿಕ್ಷಣ. ಮನೆ, ನಿವೃತ್ತಿ ಜೀವನ, ಆರೋಗ್ಯ ವಿಮೆ ಕಟ್ಟುವುದು ಹೀಗೆ . ನಮ್ಮ ಎದುರು ಇಂತಹ ಹಲವು ಗುರಿಗಳು ಸ್ಪಷ್ಟವಾಗಿರುವಾಗ ನಮ್ಮ ನಡಿಗೆಗೆ ಖಚಿತತೆ ಇರುತ್ತದೆ. ಈಗೇನೂ ಅಂಥ ಅವಸರವಿಲ್ಲ. ಇವತ್ತಲ್ಲದಿದ್ದರೆ ನಾಳೆ ಮಾಡಿದರಾಯಿತು ಎನ್ನುವ ಮನೋಭಾವ ಇರುವುದಿಲ್ಲ. ಮಾಡಲೇ ಬೇಕು ಎನ್ನುವ ಸ್ವಯಂ ಒತ್ತಡ ನಮಗೆ ನಾವೇ ಹಾಕಿಕೊಳ್ಳುತ್ತೇವೆ. ಎಷ್ಟೋ ಮೆಟ್ಟಿಲುಗಳನ್ನು ಹತ್ತುವ ಕೆಲಸ ಮೊದಲ ಮೆಟ್ಟಿಲಿನಿಂದಲೇ ಶುರು ಆಗಬೇಕು. ಕೊನೆಯ ಮಟ್ಟಿಲಿನ ಬಗೆಗೆ ಯೋಚಿಸುತ್ತ ಕುಳಿತಿರುವ ಬದಲು, ಒಂದೊಂದಾಗಿ ಮೆಟ್ಟಿಲು ಹತ್ತುವುದು ಆಗಬೇಕು. ಮಾಡಿ ಮುಗಿಸುವ ಮೊದಲು ಅದು ಆರಂಭ ಆಗಬೇಕಲ್ಲಾ. ಹೂಡಿಕೆ ಮೊದಲು ಆರಂಭ ಆಗಲಿ, ಅದಕ್ಕೂ ಮೊದಲು ಆರ್ಥಿಕ ಶಿಸ್ತು ಇರಲಿ.

– ಸುಧಾಶರ್ಮ ಚವತ್ತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next