Advertisement

ಕಾರ್ಮಿಕ ಗೃಹ ಗಮನ ಶುರು ; ದೇಶದ ಅತಿದೊಡ್ಡ ರಕ್ಷಣಾ ಕಾರ್ಯಾಚರಣೆಯ ಹೆಗ್ಗಳಿಕೆ

08:17 AM May 03, 2020 | Hari Prasad |

ಹೊಸದಿಲ್ಲಿ: ಲಾಕ್‌ಡೌನ್‌ನಿಂದಾಗಿ ಅಲ್ಲಲ್ಲೇ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳಿಗೆ, ಯಾತ್ರಿಕರಿಗೆ ವಿಶೇಷ ರೈಲು ಸಂಚಾರ ಶುರುವಾಗಿದೆ.

Advertisement

ಅದಕ್ಕೆ ಪೂರಕವಾಗಿ ಶುಕ್ರವಾರ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಿಂದ ಜಾರ್ಖಂಡ್‌ನ‌ ಹಥಿಯಾಕ್ಕೆ 1,200 ಮಂದಿ ಕಾರ್ಮಿಕರನ್ನು ಸುರಕ್ಷಿತವಾಗಿ ತಲುಪಿಸಿದೆ.

ಅಂತಾರಾಜ್ಯ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಎಲ್ಲ ರಾಜ್ಯಗಳೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ.

ಬೇರೆ ಬೇರೆ ರಾಜ್ಯಗಳಲ್ಲಿರುವ ಸುಮಾರು ಒಂದು ಕೋಟಿ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ಕಳುಹಿಸಿಕೊಡುವುದೆಂದರೆ, ಅದು ದೇಶದ ಇತಿಹಾಸದಲ್ಲೇ ಅತಿದೊಡ್ಡ ಕಾರ್ಯಾಚರಣೆಯಾಗಲಿದೆ.

ಬಹುತೇಕ ರಾಜ್ಯಗಳು ವಿವಿಧ ಭಾಗಗಳಲ್ಲಿ ಸಿಲುಕಿರುವ ತಮ್ಮ ತಮ್ಮ ರಾಜ್ಯದ ನಾಗರಿಕರನ್ನು ವಾಪಸ್‌ ತವರಿಗೆ ಕರೆತರಲು ಪ್ರಕ್ರಿಯೆಗಳನ್ನು ಆರಂಭಿಸಿವೆ.

Advertisement

ಒಂದು ಬೋಗಿಯಲ್ಲಿ 54 ಮಂದಿ: ರೈಲ್ವೆ ಸಚಿವಾಲಯದ ನಿರ್ದೇಶನದ ಮೇರೆಗೆ 24 ಬೋಗಿಗಳ ರೈಲು ಶುಕ್ರವಾರ ಬೆಳಗ್ಗೆ 4.50ಕ್ಕೆ ತೆಲಂಗಾಣದಿಂದ ಹೊರಟಿತ್ತು. ಪ್ರಯಾಣಿಕರ ಸ್ಕ್ರೀನಿಂಗ್‌, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತಿತರ ಎಲ್ಲ ನಿಯಮಗಳನ್ನೂ ಅನುಸರಿಸಲಾಗಿದೆ.

ರೈಲು ಮಧ್ಯೆ ಎಲ್ಲೂ ನಿಲ್ಲದ ಕಾರಣ, ಆಹಾರವನ್ನೂ ಕೂಡ ಪೂರೈಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಒಂದು ಬೋಗಿಯಲ್ಲಿ 72ರ ಬದಲಾಗಿ ಕೇವಲ 54 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಇದೇ ವೇಳೆ, 1,200 ಮಂದಿಯನ್ನು ಹೊತ್ತ ಮತ್ತೂಂದು ವಿಶೇಷ ರೈಲು ಕೇರಳದ ಕೊಚ್ಚಿಯಿಂದ ಒಡಿಶಾದ ಭುವನೇಶ್ವರಕ್ಕೆ ಹೊರಡಲಿದೆ. ಅದೇ ರೀತಿ, ರಾಜಸ್ಥಾನದ ಕೋಟಾದಿಂದ ವಿದ್ಯಾರ್ಥಿಗಳನ್ನು ಹೊತ್ತ 2 ರೈಲುಗಳು ಝಾರ್ಖಂಡ್‌ಗೆ ತೆರಳಲಿದೆ.

ವಿಶೇಷ ಹಡಗು
ಅಂಡಮಾನ್‌-ನಿಕೋಬಾರ್‌ ದ್ವೀಪದ ಆಡಳಿತವು ವಲಸೆ ಕಾರ್ಮಿಕರು, ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಪೋರ್ಟ್‌ಬ್ಲೇರ್‌ನಿಂದ ಚೆನ್ನೈಗೆ ವಿಶೇಷ ನೌಕೆಯನ್ನು ವ್ಯವಸ್ಥೆ ಮಾಡಲು ಯೋಜಿಸಿದೆ.

ಸವಾಲುಗಳೇನು?

– ದೇಶಾದ್ಯಂತ ಚದುರಿಹೋಗಿರುವ ಒಂದು ಕೋಟಿಯಷ್ಟು ಕಾರ್ಮಿಕರ ಸಂಚಾರಕ್ಕೆ ವ್ಯವಸ್ಥೆ.

– ಕರೆತರುವಾಗ ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳುವುದು.

– ಎಲ್ಲರನ್ನೂ ಸ್ಕ್ರೀನಿಂಗ್‌ ಹಾಗೂ ಕ್ವಾರಂಟೈನ್‌ಗೆ ಒಳಪಡಿಸುವುದು, ಆಸ್ಪತ್ರೆಗಳ ವ್ಯವಸ್ಥೆ ಕಲ್ಪಿಸುವುದು.

– ಮಹಾರಾಷ್ಟ್ರ, ದೆಹಲಿಯಂಥ ಹಾಟ್‌ಸ್ಪಾಟ್‌ಗಳಿಂದ ಬರುವ ಕಾರ್ಮಿಕರಿಂದ ಕೋವಿಡ್ ಆತಂಕ.

Advertisement

Udayavani is now on Telegram. Click here to join our channel and stay updated with the latest news.

Next