Advertisement

ಕೋವಿಡ್‌ ವರದಿ ತೋರಿಸಿ, ಮನೆಗೆ ಬನ್ನಿ

07:39 AM Jul 28, 2020 | Suhan S |

ಬೆಂಗಳೂರು: ರಾಜಧಾನಿ ಜನ ಜಾಗತಿಕ ಮಹಾಮಾರಿ ಕೋವಿಡ್ ವಿರುದ್ಧ ಗೆದ್ದುಬರುತ್ತಿದ್ದಾರೆ. ಅಂತಹವರಿಗೆ ಹೂಮಳೆಗರೆದು ಅದ್ದೂರಿಯಾಗಿಯೂ ಬೀಳ್ಕೊಡಲಾಗುತ್ತಿದೆ. ಆದರೆ, ಈ ಕೋವಿಡ್ ಕಲಿಗಳಿಗೆ ಈಗ ಮನೆಗಳಲ್ಲಿ “ಪ್ರವೇಶ’ ಸಿಗುತ್ತಿಲ್ಲ!

Advertisement

ಹೌದು, ಕೋವಿಡ್ ಗೆದ್ದುಬಂದವರಿಗೆ ನಗರದಲ್ಲಿರುವ ಮನೆಗಳ ಮಾಲೀಕರ ಮನ ಗೆಲ್ಲುವುದೇ ಸವಾಲಾಗಿದೆ. ಕೋವಿಡ್‌-19 ಆರೈಕೆ ಕೇಂದ್ರದಿಂದ ಗುಣಮುಖರಾಗಿ ಮನೆಗೆ ವ್ಯಕ್ತಿಗೆ “ಪ್ರವೇಶವಿಲ್ಲ’ ಎಂಬ ಸಿದ್ಧ ಉತ್ತರ ಸಿಗುತ್ತಿದೆ. ಕೆಲವೆಡೆ ಮನೆ ಖಾಲಿ ಮಾಡಿಸುತ್ತಿದ್ದಾರೆ. ಇನ್ನು ಹಲವೆಡೆ “ನೆಗೆಟಿವ್‌ ವರದಿ ತೋರಿಸಿ ಒಳಗೆ ಬನ್ನಿ’ ಎಂದು ಷರತ್ತು ವಿಧಿಸಲಾಗುತ್ತಿದೆ. ಇದು ಪರೋಕ್ಷವಾಗಿ ವ್ಯಕ್ತಿಯ ಆತ್ಮಸ್ಥೈರ್ಯ ಕುಂದಿಸುತ್ತಿದೆ.

ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ, ಜತೆಗೆ ಗುಣಮುಖರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಆದರೆ, ಸೋಂಕು ಮುಕ್ತರಾದರೂ ಜನಕ್ಕೆ ನೆಮ್ಮದಿ ಸಿಗುತ್ತಿಲ್ಲ. ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗುವಾಗ ಮನೆ ಖಾಲಿ ಮಾಡಿ, ಇಲ್ಲಿ ಬರಬೇಡಿ ಹಾಗೂ ಕೋವಿಡ್ ಪಾಸಿಟಿವ್‌ ಇಲ್ಲ ಎನ್ನುವ ವರದಿ ತೋರಿಸಿ ಎಂದು ಮನೆ ಮಾಲೀಕರು ಒತ್ತಡ ಹೇರಲು ಪ್ರಾರಂ ಭಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

ಕೋವಿಡ್ ದೃಢಪಡುವವರಲ್ಲಿ ಶೇ. 40 ಸೋಂಕಿತರು ಸೋಂಕಿನ ಲಕ್ಷಣ ಇಲ್ಲದೆ ಇರುವವರು (ಎಸಿಂಪ್ಟಮ್ಸ್‌) ಇದ್ದಾರೆ. ಇನ್ನು ಶೇ. 30- 35 ಸೋಂಕಿತರು ಕಡಿಮೆ ಸೋಂಕಿನ ಲಕ್ಷಣಗಳನ್ನು ಹೊಂದಿರುವವರಿದ್ದಾರೆ. ಇವರನ್ನು 10ರಿಂದ 13 ದಿನಗಳ ಕಾಲ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಅಥವಾ ಪ್ರತ್ಯೇಕವಾಗಿ ಐಸೋಲೇಷನ್‌ ಮಾಡಲಾಗುತ್ತಿದೆ. ಸೋಂಕು ಮುಕ್ತರಾದ ಮೇಲೆ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ. ಆದರೆ, ಈ ಬಗ್ಗೆ ಮಾಹಿತಿ ಇಲ್ಲದ ಸಾರ್ವಜನಿಕರು ” ಕೋವಿಡ್ ನೆಗೆಟಿವ್‌’ ವರದಿ ತೋರಿಸಿ ಎಂದು ದುಂಬಾಲು ಬೀಳುತ್ತಿರುವುದು ಸೋಂಕು ಮುಕ್ತರಿಗೆ ಮಾನಸಿಕ ಯಾತನೆಗೆ ಕಾರಣವಾಗಿದೆ.

ಬಾಣಂತಿ ವರದಿ ಕೇಳಿದ ಮಾಲೀಕ: ಇತ್ತೀಚಿಗೆ ಬೆಂಗಳೂರಿನ ಬಾಪೂಜಿನಗರ ವಾರ್ಡ್‌ನ ಶಾಮಣ್ಣ ಗಾರ್ಡನ್‌ ಸಿದ್ದಾಪುರ ವಾರ್ಡ್‌ ವ್ಯಾಪ್ತಿಯಲ್ಲಿ ಹೆರಿಗೆಗೆ ಮುನ್ನ ಮಹಿಳೆಯೊಬ್ಬರು ಕೋವಿಡ್ ಪರೀಕ್ಷೆಗೆ ಒಳಪಟ್ಟಾಗ ಸೋಂಕು ದೃಢಪಟ್ಟಿತ್ತು. ಇದಾದ ಮೇಲೆ ಅವರು ಆಸ್ಪತ್ರೆಯಲ್ಲಿದ್ದೇ ಸೋಂಕಿನಿಂದ ಮುಕ್ತರಾದರು ಹಾಗೂ ಮಗುವಿಗೂ ಜನ್ಮ ನೀಡಿದರು. ಎಲ್ಲ ಮುಗಿದು ಮನೆಗೆ ಹಿಂದಿರುಗಿದ ವೇಳೆ ಮನೆಯ ಮಾಲೀಕ ಸೋಂಕು ದೃಢಪಟ್ಟಿಲ್ಲ ಎಂಬ ವರದಿ ತೋರಿಸಿ ಎಂದು ಒತ್ತಾಯಿಸಿದ್ದಾರೆ. ಎಸಿಂಟಮ್ಸ್‌ ಇದ್ದ ಹಿನ್ನೆಲೆಯಲ್ಲಿ ಎರಡನೇ ಬಾರಿ ಪರೀಕ್ಷೆ ಮಾಡಿಲ್ಲ. ಈಗ ಸೋಂಕು ಮುಕ್ತರಾಗಿದ್ದೇವೆ ಎಂದು ಹೇಳಿದರೂ, ಅವರು ಒಳಗೆ ಸೇರಿಸಿಲ್ಲ. ಸ್ಥಳೀಯ ಪಾಲಿಕೆ ಸದಸ್ಯ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಿದ್ದಾರೆ. ಇಂತಹ ಹಲವಾರು ಘಟನೆಗಳು ವರದಿಯಾಗುತ್ತಿವೆ.

Advertisement

ಮತ್ತೂಮ್ಮೆ ಪರೀಕ್ಷೆ ಅನಾವಶ್ಯಕ: ಆರೋಗ್ಯ ಇಲಾಖೆಯು ಸೋಂಕಿನ ಲಕ್ಷಣ ಇಲ್ಲದವರು ಹಾಗೂ ಕಡಿಮೆ ಲಕ್ಷಣಗಳಿರುವವರು ಕ್ವಾರಂಟೈನ್‌ ಕೇಂದ್ರದಲ್ಲಿ ಇದ್ದು, ಮರಳಿ ಮನೆಗೆ ಹೋಗುವವರಿಗೆ ಮತ್ತೂಮ್ಮೆ ಕೋವಿಡ್ ಸೋಂಕು ಪರೀಕ್ಷೆ ಮಾಡಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದೆ. ಆದರೆ, ಬಿಡುಗಡೆಗೆ ಮುನ್ನ ಕಡ್ಡಾಯವಾಗಿ ಕೆಲವು ಆರೋಗ್ಯ ಪರೀಕ್ಷೆಗಳನ್ನು ಮಾಡಿಯೇ ಬಿಡುಗಡೆ (ಕೋವಿಡ್‌ ಆರೈಕೆ ಕೇಂದ್ರ ದಿಂದ) ಮಾಡುವಂತೆ ತಿಳಿಸಿದೆ. ಅಲ್ಲದೆ, ಎಲ್ಲರೂ ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ ನಲ್ಲಿ ಇರಬೇಕು ಎಂದು ನಿರ್ದೇಶನ ನೀಡಲಾಗಿದೆ.

ಸೋಂಕು ಹೇಳಿಕೊಳ್ಳುತ್ತಿಲ್ಲ  : ನಗರದಲ್ಲಿ ಬಹುತೇಕ ಜನ ಸುತ್ತಮುತ್ತಲಿನವರು ಹಾಗೂ ಮನೆ ಮಾಲೀಕರು ಎಲ್ಲಿ ತೊಂದರೆ ಕೊಡುತ್ತಾರೋ ಎನ್ನುವ ಕಾರಣದಿಂದಲೇ ಸೋಂಕಿನ ಲಕ್ಷಣಗಳಿದ್ದರೂ, ಸ್ವಯಂ ಐಸೋಲೇಷನ್‌ ಆಗುತ್ತಿದ್ದಾರೆ. ಇಲ್ಲವೇ ಸೋಂಕಿನ ಬಗ್ಗೆ ಯಾರಿಗೂ ಹೇಳುತ್ತಿಲ್ಲ. ಇದು ಸಮಸ್ಯೆಗೆ ಕಾರಣವಾಗುತ್ತಿದೆ. ಯಾರಿಗೆ ಸೋಂಕಿನ ಲಕ್ಷಣವಿಲ್ಲವೋ ಮತ್ತು ಅವರಿಗೆ ಮನೆಯಲ್ಲಿ ಎಲ್ಲ ಪ್ರತ್ಯೇಕ ವ್ಯವಸ್ಥೆ ಇದೆಯೋ ಅವರಿಗೆ ಮಾತ್ರ ಐಸೋಲೇಷನ್‌ ಆಗಲು ಅನುಮತಿ ನೀಡಲಾಗುತ್ತಿದೆ. ಆದರೆ, ನಗರದಲ್ಲಿ ಸೋಂಕಿನ ಬಗ್ಗೆ ಜಾಗೃತಿ ಇಲ್ಲದಿರುವುದು ಅನಾಹುತಕ್ಕೆ ಕಾರಣವಾಗಿದೆ.

ಎಸಿಂಪ್ಟಮ್ಸ್‌ ಇರುವವರ ಬಿಡುಗಡೆ, ಪರೀಕ್ಷೆ ಹೇಗೆ? :  ಎಸಿಂಪ್ಟಮ್ಸ್‌ ಇರುವವರು ಕೋವಿಡ್‌ ಆರೈಕೆ ಕೇಂದ್ರದಲ್ಲಿ ಆರೈಕೆಗೆ ಒಳಪಟ್ಟ 10 ದಿನಗಳಾದ ನಂತರ ಅವರ ಆರೋಗ್ಯ ಪರೀಕ್ಷೆ ಮಾಡಲಾಗುತ್ತದೆ. ಅವು ಈ ರೀತಿ ಇವೆ.

  •  ಬಿಡುಗಡೆಯಾಗುವ ವ್ಯಕ್ತಿಗೆ ಕೋವಿಡ್ ಸೋಂಕಿನ ಯಾವುದೇ ಲಕ್ಷಣಗಳು ಇರಬಾರದು.
  • ಜ್ವರ ಇರಬಾರದು ಹಾಗೂ ಆರೋಗ್ಯದಲ್ಲಿ ಏರುಪೇರಾಗಿರಬಾರದು.
  • „ ಸರಾಗವಾಗಿ ಅವರು ಉಸಿರಾಡುತ್ತಿದ್ದಾರೆ ಎಂದು ಪರೀಕ್ಷಿಸಿಕೊಳ್ಳಬೇಕು.
  • ಆರೈಕೆ ಕೇಂದ್ರದಲ್ಲಿದ್ದು ಬಿಡುಗಡೆಯಾಗುವವರ ಆರೋಗ್ಯ ಪರೀಕ್ಷೆಯ ಜತೆಗೆ ಅವರು ಬಿಡುಗಡೆಗೆ ಮೂರು ದಿನಗಳ ಮುನ್ನ ಸೋಂಕಿನ ಲಕ್ಷಣಗಳಿರಬಾರದು. ಇದ್ದರೆ ಮತ್ತೆ 17 ದಿನಗಳ ವರೆಗೆ ಆರೈಕೆ ಕೇಂದ್ರದಲ್ಲಿಯೇ ಉಳಿಸಿಕೊಳ್ಳಬಹುದು.

ಯಾರೂ ಕೋವಿಡ್ ಸೋಂಕಿತರನ್ನು ಮತ್ತು ಬಿಡುಗಡೆಯಾದವರನ್ನು ಕೀಳಾಗಿ ನಡೆಸಿಕೊಳ್ಳುವಂತಿಲ್ಲ. ಈ ರೀತಿಯ ಪ್ರಕರಣಗಳು ದೃಢಪಟ್ಟರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೆ, ಎಸಿಂಪ್ಟಮ್ಸ್‌ ಬಗ್ಗೆ ಜನಕ್ಕೆ ಮಾಹಿತಿ ನೀಡುತ್ತೇವೆ -ಎನ್‌. ಮಂಜುನಾಥ್‌ ಪ್ರಸಾದ್‌, ಬಿಬಿಎಂಪಿ ಆಯುಕ್ತ

 

  ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next