Advertisement

ವಿಜ್ಞಾನವೆಂಬ ವಿಶಿಷ್ಟ ಪ್ರಯತ್ನ  

03:25 AM Nov 10, 2018 | |

ಆಂಗ್ಲಭಾಷಾಭ್ಯಾಸವು ನಮ್ಮ ದೇಶದಲ್ಲಿ ದಿನೇದಿನೇ ಅಭಿವೃದ್ಧಿಯಾಗುತ್ತಿದ್ದರೂ ವಿಜ್ಞಾನದ ವಿಷಯವಾಗಿ ಮಾತ್ರ ವಿಶೇಷ ಶ್ರದ್ಧೆಯು ತೋರಿಬಂದಿಲ್ಲ. ಆ ಭಾಗದಲ್ಲಿ ಈಗೀಗ ಕಣ್ಣು ಬಿಡುತ್ತಿದ್ದೇವೆ. ಜನಸಾಮಾನ್ಯರÇÉೆÇÉಾ ಈ ವಿಜ್ಞಾನವನ್ನು ಹರಡಿದ ಹೊರತು ದೇಶವು ಅಭಿವೃದ್ಧಿಸ್ಥಿತಿಗೆ ಬರಲಾರದು… ಇಂದಿನ ಪರಿಸ್ಥಿತಿಯನ್ನೇ ಕುರಿತು ಹೇಳಿದಂತೆ ತೋರುವ ಈ ಮಾತುಗಳು ಪ್ರಕಟವಾದದ್ದು ಇಂದಿಗೆ ನೂರು ವರ್ಷಗಳ ಹಿಂದೆ, 1918ನೇ ಇಸವಿಯಲ್ಲಿ. 

Advertisement

ಈ ಮಾತುಗಳನ್ನು ಪ್ರಕಟಿಸಿದ್ದು ‘ವಿಜ್ಞಾನ’ವೆಂಬ ಪತ್ರಿಕೆ. ನಮ್ಮ ಭಾಷೆಯಲ್ಲಿ ಪ್ರಕಟವಾದ ಈ ರೀತಿಯ ಮೊತ್ತಮೊದಲ ಪತ್ರಿಕೆ ಎಂಬ ಹೆಗ್ಗಳಿಕೆ ಈ ಪತ್ರಿಕೆಯದ್ದು.  

ಇಪ್ಪತ್ತನೇ ಶತಮಾನದ ಪ್ರಾರಂಭದ ವೇಳೆಗೆ ಪಾಶ್ಚಿಮಾತ್ಯ ರಾಷ್ಟ್ರಗಳು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಕಷ್ಟು ಬೆಳವಣಿಗೆಯನ್ನು ಸಾಧಿಸಿದ್ದವು. ಇಂತಹ ವೈಜ್ಞಾನಿಕ ಪ್ರಗತಿ ನಮ್ಮ ದೇಶದಲ್ಲೂ ಆಗಬೇಕು ಎನ್ನುವ ಅಭಿಪ್ರಾಯ ಅಲ್ಲಲ್ಲಿ ಕೇಳಸಿಗುತ್ತಿತ್ತು. ಮೈಸೂರಿನ ದಿವಾನರಾಗಿದ್ದ ಸರ್‌ ಎಂ. ವಿಶ್ವೇಶ್ವರಯ್ಯನವರ ಮನಸ್ಸಿನಲ್ಲೂ ಇದೇ ಭಾವನೆ ಇತ್ತು.  

ಅವರ ಪ್ರಯತ್ನ ಹಾಗೂ ಪ್ರೋತ್ಸಾಹ ಫ‌ಲವಾಗಿ 1917ರಲ್ಲಿ ‘ಕರ್ನಾಟಕ ವಿಜ್ಞಾನ ಪ್ರಚಾರಿಣೀ ಸಮಿತಿ’ ಅಸ್ತಿತ್ವಕ್ಕೆ ಬಂತು. ‘ವಿಜ್ಞಾನ’ ಕನ್ನಡ ಪತ್ರಿಕೆಯನ್ನು ಹೊರಡಿಸಿದ್ದು ಈ ಸಮಿತಿಯದೇ ಸಾಧನೆ. ಈ ಪತ್ರಿಕೆಯ ಜವಾಬ್ದಾರಿ ತೆಗೆದುಕೊಂಡಿದ್ದವರು, ಸಂಪಾದಕರಾಗಿ ಕಾರ್ಯನಿರ್ವಹಿಸಿದವರು ಬೆಳ್ಳಾವೆ ವೆಂಕಟನಾರಣಪ್ಪನವರು ಹಾಗೂ ನಂಗಪುರಂ ವೆಂಕಟೇಶ ಅಯ್ಯಂಗಾರರು.  

ಸಾಮಾನ್ಯರಿಗೂ ಅರ್ಥವಾಗುವಂತೆ ಸುಲಭ ಶೈಲಿಯಲ್ಲಿ ವೈಜ್ಞಾನಿಕ ಬರಹಗಳನ್ನು ಪ್ರಕಟಿಸುವ ಉದ್ದೇಶ ಇಟ್ಟುಕೊಂಡಿದ್ದ ಈ ಪತ್ರಿಕೆ,  ಎರಡು ವರ್ಷಗಳ ಕಾಲ ಪ್ರಕಟವಾಗಿತ್ತು. ಈ ಅವಧಿಯಲ್ಲಿ ಪ್ರಕಟವಾದ 24 ಸಂಚಿಕೆಗಳಲ್ಲಿ ಸುಮಾರು 60 ಪ್ರಧಾನ ಲೇಖನಗಳಿದ್ದವು. ಅವುಗಳ ಜೊತೆಗೆ ನೂರಾರು ಸಣ್ಣ ಲೇಖನಗಳನ್ನೂ ಅನೇಕ ಚಿತ್ರಗಳನ್ನೂ ವಿಜ್ಞಾನ ಪತ್ರಿಕೆ ತನ್ನ ಓದುಗರಿಗೆ ತಲುಪಿಸಿತ್ತು.  

Advertisement

ಸೂಕ್ತ ಆಕರಗಳನ್ನು ಹುಡುಕಿ ವಿಜ್ಞಾನ ವಿಷಯಗಳನ್ನು ಕಲೆಹಾಕುವುದೇ ಕಷ್ಟ ಎನ್ನುವ ಪರಿಸ್ಥಿತಿಯಿದ್ದ ಆ ಕಾಲದಲ್ಲೂ ‘ವಿಜ್ಞಾನ’ ಪತ್ರಿಕೆ ವೈವಿಧ್ಯಮಯ ಲೇಖನಗಳನ್ನು ಪ್ರಕಟಿಸಿದ್ದು ವಿಶೇಷ. ಸಂಪಾದಕರು ಈ ಮಾಹಿತಿಯನ್ನು ಎಷ್ಟೆಲ್ಲ ಆಕರಗಳಿಂದ ಸಂಗ್ರಹಿಸುತ್ತಿದ್ದರು ಎನ್ನುವುದನ್ನು ಗಮನಿಸಿದರೆ ‘ವಿಜ್ಞಾನ’ದ ಸಂಚಿಕೆಗಳನ್ನು ರೂಪಿಸುವಲ್ಲಿ ಅವರ ಆಸಕ್ತಿ ಹಾಗೂ ಶ್ರಮ ಎಷ್ಟು ಪ್ರಮಾಣದಲ್ಲಿತ್ತು ಎನ್ನುವುದು ನಮ್ಮ ಅರಿವಿಗೆ ಬರುತ್ತದೆ.  

ವಿಜ್ಞಾನ ಜಗತ್ತಿನ ಆಗುಹೋಗು, ವಿಜ್ಞಾನಿಗಳ ಪರಿಚಯ, ಕುತೂಹಲಕರ ಪ್ರಶ್ನೆಗಳ ವಿಶ್ಲೇಷಣೆ, ಕೃಷಿ- ಆರೋಗ್ಯ ಕ್ಷೇತ್ರಗಳ ಮಾಹಿತಿ, ಹೀಗೆ…ಹಲವಾರು ಬಗೆಯ ಲೇಖನಗಳು ಈ ಪತ್ರಿಕೆಯಲ್ಲಿ ಬೆಳಕು ಕಂಡಿದ್ದವು. ‘ವಿವಿಧ ವಿಜ್ಞಾನ ವಿಷಯ ಸಂಗ್ರಹ’ ಎಂಬ ಶೀರ್ಷಿಕೆಯಲ್ಲಿ ಅಂದು ನಡೆದಿದ್ದ ಸಂಶೋಧನೆಗಳ ಸಾರಾಂಶವೂ ಪ್ರಕಟವಾಗುತ್ತಿತ್ತು. ಸಾಧ್ಯವಾದ ಕಡೆಯÇÉೆಲ್ಲ ಪೂರಕ ಚಿತ್ರಗಳೂ ಇದ್ದವು.  

ಹೇಳುತ್ತಿದ್ದದ್ದು ವಿಜ್ಞಾನದ ವಿಷಯವೇ ಆದರೂ ಇಲ್ಲಿನ ಲೇಖನಗಳ ಶೈಲಿ ಬಹಳ ಸರಳವಾಗಿರುತ್ತಿತ್ತು. ವಿಜ್ಞಾನದ ಪರಿಕಲ್ಪನೆಗಳನ್ನು ಕತೆಯ ರೂಪದಲ್ಲಿ ಹೇಳುವ ಪ್ರಯೋಗವೂ ಇಲ್ಲಿ ನಡೆದಿತ್ತು. ಹೊಸ ಪರಿಕಲ್ಪನೆಗಳನ್ನು ಪರಿಚಯಿಸುವಾಗಲೂ ಅಷ್ಟೆ, ಸಾಮಾನ್ಯ ಬಳಕೆಯಲ್ಲಿರುವ ಹೆಸರುಗಳನ್ನೇ ಬಳಸುತ್ತಿದ್ದದ್ದು ವಿಶೇಷ: ಬಿಸಿಗಾಳಿಯ ಬಲೂನು ಆಕಾಶಬುಟ್ಟಿಯಾದರೆ ಥರ್ಮಾಮೀಟರು ಇಲ್ಲಿ ಶಾಖಮಾಪಿನಿ ಎಂದು ಕರೆಸಿಕೊಂಡಿತ್ತು!  

ಕರ್ನಾಟಕ ವಿಜ್ಞಾನ ಪ್ರಚಾರಿಣೀ ಸಮಿತಿಯ ಸಂವಹನ ಪತ್ರಿಕೆಗೆ ಮಾತ್ರವೇ ಸೀಮಿತವಾಗಿರಲಿಲ್ಲ ಎನ್ನುವುದು ಗಮನಾರ್ಹ. ಸಮಿತಿಯ ವತಿಯಿಂದ ಆಗಿಂದಾಗ್ಗೆ ಸಾರ್ವಜನಿಕರಿಗಾಗಿ ವಿಜ್ಞಾನ ಉಪನ್ಯಾಸಗಳನ್ನೂ ಏರ್ಪಡಿಸಲಾಗುತ್ತಿತ್ತು ಎನ್ನುವ ಅಂಶ ‘ವಿಜ್ಞಾನ’ ಪತ್ರಿಕೆಯÇÉೇ ಹಲವು ಬಾರಿ ಪ್ರಸ್ತಾಪವಾಗಿದೆ. ಬೆಂಗಳೂರಿನಲ್ಲಿ ನಡೆದ ಮೊದಲ ಉಪನ್ಯಾಸದಲ್ಲಿ ಸರ್‌ ಎಂ. ವಿಶ್ವೇಶ್ವರಯ್ಯನವರೂ ಭಾಗವಹಿಸಿದ್ದ ವಿಷಯ ಕೂಡ ಪತ್ರಿಕಾ ವರದಿಯಲ್ಲಿ ದಾಖಲಾಗಿದೆ.  

ತನ್ನ ಕಾಲಮಾನಕ್ಕಿಂತ ಮುಂದಿದ್ದ ಅನೇಕ ಸಾಧನೆಗಳನ್ನು ಮಾಡಿದರೂ ‘ವಿಜ್ಞಾನ’ಕ್ಕೆ ಸೂಕ್ತ ಬೆಂಬಲ ದೊರಕದೇ ಹೋದದ್ದು ವಿಷಾದನೀಯ. ತಪ್ಪುಗಳಿಲ್ಲದ ಉತ್ತಮ ಗುಣಮಟ್ಟದ ಮುದ್ರಣ, ಕಾಲಕ್ಕೆ ಸರಿಯಾದ ಪ್ರಕಟಣೆ-ವಿತರಣೆಗಳನ್ನು ಸಂಪಾದಕರು ಸಾಧ್ಯವಾಗಿಸಿದರೂ ಚಂದಾದಾರರ ಬೆಂಬಲವಿಲ್ಲದ ಪತ್ರಿಕೆ ಎರಡನೇ ವರ್ಷದ ಕೊನೆಯ ವೇಳೆಗೆ ನಿಲ್ಲಲೇಬೇಕಾದ ಪರಿಸ್ಥಿತಿ ರೂಪುಗೊಂಡಿತ್ತು. ಎರಡೇ ವರ್ಷದಲ್ಲಿ ನಿಂತುಹೋದರೇನಂತೆ, ವಿಜ್ಞಾನ ಸಂವಹನಕಾರರಿಗೆ ‘ವಿಜ್ಞಾನ’ ಇಂದಿಗೂ ಸ್ಫೂರ್ತಿಯಾಗಿ ನಿಂತಿದೆ!  

ಬೆಂಕಿಕಡ್ಡಿ ಮತ್ತು ವಿದ್ಯುತ್‌  
ಸರಳ ಹಾಗೂ ಮನಮುಟ್ಟುವ ಶೈಲಿಯ ಬರಹಗಳನ್ನು ಪ್ರಕಟಿಸುತ್ತಿದ್ದ ‘ವಿಜ್ಞಾನ’ದ ಸಂಚಿಕೆಗಳಲ್ಲಿ ಹಲವು ವಿಶಿಷ್ಟ ಲೇಖನಗಳು ಪ್ರಕಟವಾಗಿದ್ದವು. ‘ವಿದ್ಯುತ್ಛಕ್ತಿಯನ್ನು ಅಳೆಯುವುದು ಹೇಗೆ?’ ಎನ್ನುವ ಲೇಖನವೊಂದರಲ್ಲಿ ವಿದ್ಯುತ್ತಿನ ವೆಚ್ಚದ ಬಗ್ಗೆ ಹೇಳಿರುವುದು ಹೀಗೆ: ದೀಪದಕಡ್ಡಿಯ ಪೆಟ್ಟಿಗೆಯೊಂದಕ್ಕೆ ಮೂರೂವರೆ ಕಾಸು ಬೆಲೆಯಾಗುವುದು. ಅದರಲ್ಲಿ ಸುಮಾರು 60 ಕಡ್ಡಿಗಳಿರುವವು. ಆದದ್ದರಿಂದ ಕಾಸಿಗೆ ಸುಮಾರು 18 ಕಡ್ಡಿಗಳು ಬಿದ್ದಹಾಗಾಯಿತು. ಇಂಥ ಒಂದು ಕಡ್ಡಿಯನ್ನು ಗೀಚಿ ಬಿಸಾಡುವ ಬೆಲೆಗೆ, 16ರ ಲೋಹದೆಳೆಯ ದೀಪವೊಂದನ್ನು ಸುಮಾರು 5 ಮಿನಿಟುಗಳು ಉರಿಸಬಹುದು. ಇಷ್ಟು ಸುಲಭ ವೆಚ್ಚವಾಗುವ ದೀಪಗಳನ್ನು ಹೆಚ್ಚು ಮಂದಿ ಉಪಯೋಗಿಸಿ ಸೌಖ್ಯವನ್ನು ಪಡೆಯಬಾರದೇ?  

ವಿಜ್ಞಾನದ ಮರುಪ್ರಕಟಣೆ  
ಚರಿತ್ರೆ ಹಾಗೂ ಸಾಹಿತ್ಯ ಎರಡೂ ದೃಷ್ಟಿಯಿಂದ ಅಮೂಲ್ಯ ದಾಖಲೆಯಾಗಿರುವ ‘ವಿಜ್ಞಾನ’ ಪತ್ರಿಕೆಯ ಸಂಚಿಕೆಗಳನ್ನು ಮರುಪ್ರಕಟಿಸಿ ಎಲ್ಲರಿಗೂ ಲಭ್ಯವಾಗಿಸುವ ಎರಡು ಉಲ್ಲೇಖನೀಯ ಪ್ರಯತ್ನಗಳು ಈವರೆಗೆ ನಡೆದಿವೆ. ಮೊದಲ ವರ್ಷದ (1918) ಸಂಚಿಕೆಗಳನ್ನು ‘ಸಿರಿನುಡಿ’ ಜಾಲತಾಣದಲ್ಲಿ  (sirinudi.org) ಮೊದಲಿಗೆ ಪ್ರಕಟಿಸಲಾಗಿತ್ತು. ಇದರೊಡನೆ ಎರಡನೇ ವರ್ಷದ ಸಂಚಿಕೆಗಳನ್ನೂ ಸೇರಿಸಿ ಎರಡು ಮುದ್ರಿತ ಸಂಪುಟಗಳನ್ನು ಕೂಡ ಹೊರತರಲಾಗಿದೆ. ಪೊ›. ಎಚ್‌. ಆರ್‌. ರಾಮಕೃಷ್ಣರಾವ್‌ ಹಾಗೂ ಟಿ. ಆರ್‌. ಅನಂತರಾಮು ಸಂಪಾದಿಸಿರುವ ಈ ಸಂಪುಟಗಳನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಉದಯಭಾನು ಕಲಾಸಂಘ ಜಂಟಿಯಾಗಿ ಪ್ರಕಟಿಸಿವೆ.  

ನೂರರ ನೆನಪು  
ಕನ್ನಡದ ಮೊದಲ ವಿಜ್ಞಾನ ಪತ್ರಿಕೆಯ ಶತಮಾನೋತ್ಸವ ಸಂದರ್ಭದಲ್ಲಿ ‘ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ’ ಕುರಿತ ಸಂವಾದ ಕಾರ್ಯಕ್ರಮವನ್ನು ಇದೇ ಭಾನುವಾರ (ನವೆಂಬರ್‌.11) ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಜಯನಗರ ನ್ಯಾಷನಲ… ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದೆ. ಇಜ್ಞಾನ ಟ್ರÓr… ಹಾಗೂ ಉದಯಭಾನು ಕಲಾಸಂಘದ ಸಹಯೋಗದಲ್ಲಿ ಬಿ. ವಿ. ಜಗದೀಶ್‌ ವಿಜ್ಞಾನ ಕೇಂದ್ರ ನಡೆಸುತ್ತಿರುವ ಈ ಕಾರ್ಯಕ್ರಮದಲ್ಲಿ ಮುದ್ರಣ, ಅಂತರಜಾಲ, ಟೀವಿ ಹಾಗೂ ರೇಡಿಯೋ ಮಾಧ್ಯಮಗಳ ಪ್ರತಿನಿಧಿಗಳು ಭಾಗವಹಿಸಲಿದ್ದು ಇಂದಿನ ಪತ್ರಿಕೋದ್ಯಮದಲ್ಲಿ ವಿಜ್ಞಾನದ ಸ್ಥಿತಿಗತಿಗಳ ಕುರಿತು ಸಂವಾದ ನಡೆಸಿಕೊಡಲಿ¨ªಾರೆ. ಇದೇ ಸಂದರ್ಭದಲ್ಲಿ ‘ವಿಜ್ಞಾನ’ ಪತ್ರಿಕೆಯ ಕುರಿತ ಉಪನ್ಯಾಸವೂ ಇರಲಿದೆ.     

ಟಿ. ಜಿ. ಶ್ರೀನಿಧಿ

Advertisement

Udayavani is now on Telegram. Click here to join our channel and stay updated with the latest news.

Next