Advertisement

ಮೊದಲ “ರೋಶಿನಿ’ಶಾಲೆ ಸಜ್ಜು

06:29 AM Feb 26, 2019 | |

ಬೆಂಗಳೂರು: “ಬಿಬಿಎಂಪಿ ರೋಶಿನಿ’ ಯೋಜನೆಯ “ಲೈಟಿಂಗ್‌ ಸ್ಕೂಲ್‌’ ಯೋಜನೆಯಡಿ ಮೊದಲ ಮಾದರಿ ಶಾಲೆ ಸಜ್ಜಾಗಿದೆ. ಪಾಲಿಕೆಯ 156 ಶಾಲಾ-ಕಾಲೇಜುಗಳಲ್ಲಿ ಯೋಜನೆ ಜಾರಿಗೊಳಿಸುವ ಮೊದಲು ಪ್ರಮುಖ ಆರು ಶಾಲೆಗಳನ್ನು ಮಾದರಿ ಶಾಲೆಗಳಾಗಿ ಪರಿವರ್ತಿಸಿ, ಬಳಿಕ ಉಳಿದ ಶಾಲೆಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲು ಮೈಕ್ರೋಸಾಫ್ಟ್ ಯೋಜನೆ ರೂಪಿಸಿದೆ.

Advertisement

ಅದರಂತೆ ಎಲ್ಲ ಏಳು ಕಡೆಗಳಲ್ಲಿ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶಿವಾಜಿನಗರದ ಕ್ಲೀವ್‌ಲ್ಯಾಂಡ್‌ಟೌನ್‌ ಶಾಲೆ ಉದ್ಘಾಟನೆಗೆ ಸಿದ್ಧವಾಗಿದೆ. ಮಾದರಿ ಶಾಲೆಗಳ ಹೊರಭಾಗ ಹಾಗೂ ತರಗತಿ ಕೊಠಡಿಗಳು ಹಳದಿ ಬಣ್ಣದಿಂದ ಕಂಗೊಳಿಸುತ್ತಿದೆ.

ಬಿಬಿಎಂಪಿ ಶಾಲಾ-ಕಾಲೇಜುಗಳನ್ನು ಉನ್ನತೀಕರಿಸಿ ಮಕ್ಕಳಿಗೆ 21ನೇ ಶತಮಾನ ಕಲಿಕಾ ಮಾದರಿಗಳ ಮೂಲಕ ಶಿಕ್ಷಣ ನೀಡುವ ಉದ್ದೇಶದಿಂದ ಮೈಕ್ರೋಸಾಫ್ಟ್ ಹಾಗೂ ಟೆಕ್‌ ಅವಾಂತ್‌ ಗಾರ್ಡ್‌ ಸಂಸ್ಥೆಗಳು ಪಾಲಿಕೆಯ ಸಹಯೋಗದಲ್ಲಿ “ರೋಶಿನಿ’ ಯೋಜನೆ ಜಾರಿಗೊಳಿಸುತ್ತಿದೆ. ಮಾದರಿ ಶಾಲೆಗಳ ಮೂಲಕ ವಿದ್ಯಾರ್ಥಿಗಳನ್ನು ಪಾಲಿಕೆಯ ಶಾಲೆಗಳತ್ತ ಆಕರ್ಷಿಸುವ ಮೂಲಕ ಪಾಲಿಕೆಯ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಮಾಡುವುದು ಇದರ ಉದ್ದೇಶವಾಗಿದೆ.

ಆ ಮೂಲಕ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ದೊರೆಯುವ ರೀತಿಯಲ್ಲಿಯೇ ಗುಣಮಟ್ಟದ ಶಿಕ್ಷಣ ಪಾಲಿಕೆ ಶಾಲೆಯಲ್ಲಿಯೂ ದೊರೆಯುತ್ತದೆ ಎಂಬುದನ್ನು ಜನರಿಗೆ ತಿಳಿಸಲಾಗುತ್ತದೆ. ಜತೆಗೆ ಮಕ್ಕಳು ಶಿಕ್ಷಣದ ಜತೆ ಜತೆಗೆ ಸಾಂಸ್ಕೃತಿಕ, ಕ್ರೀಡೆ, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯ, ಕಂಪ್ಯೂಟರ್‌ ಹೀಗೆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಅಂಕಣಗಳ ವ್ಯವಸ್ಥೆ ಮಾಡಲಾಗಿದೆ. 

ಸ್ಮಾರ್ಟ್‌ ಕ್ಲಾಸ್‌ ರೂಂ ಸಿದ್ಧ: ರೋಶಿನಿ ಯೋಜನೆಯಡಿಯಲ್ಲಿ ಮೊದಲ ಸ್ಮಾರ್ಟ್‌ ಕ್ಲಾಸ್‌ ರೂಂ ಕ್ಲೀವ್‌ಲ್ಯಾಂಡ್‌ಟೌನ್‌ ಪಾಲಿಕೆಯ ಶಾಲೆಯಲ್ಲಿ ಸಿದ್ಧವಾಗಿದೆ. ಅದರಂತೆ ತರಗತಿಯಲ್ಲಿ ಬಹುಪಯೋಗಿ ಸ್ಮಾರ್ಟ್‌ ಟಿವಿಯನ್ನು ಅಳವಡಿಕೆ ಮಾಡಲಾಗಿದ್ದು, ಇದನ್ನು ಬೋರ್ಡ್‌, ಟಿವಿ, ಕಂಪ್ಯೂಟರ್‌ ಆಗಿ ಬಳಸಬಹುದಾಗಿದೆ. ಇನ್ನು ಕೆಲವು ಶಾಲೆಗಳಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಒಳಗೊಂಡ ಪ್ರಯೋಗಾಲಯ ಸಹ ನಿರ್ಮಾಣವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. 

Advertisement

ಕಟ್ಟಡ ಹಾಗೂ ಶೌಚಾಲಯ ವ್ಯವಸ್ಥೆ: ಮಾದರಿಯ ಶಾಲೆಗಳಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಸಮರ್ಪಕ ಕಾಂಪೌಂಡಿಂಗ್‌ ಹಾಗೂ ವಿದ್ಯುತ್‌ ಬಲ್ಬ್ಗಳನ್ನು ಅಳವಡಿಕೆ ಮಾಡಲಾಗಿದೆ. 

ಮಾದರಿ ಆಗಲಿರುವ ಶಾಲೆಗಳು 
-ಆಸ್ಟಿನ್‌ಟೌನ್‌ ಬಾಲಕಿಯರ ಪ್ರೌಢಶಾಲೆ
-ಗಾಂಧಿನಗರ ಪ್ರೌಢಶಾಲೆ
-ಜಯನಗರ 1ನೇ ಬ್ಲಾಕ್‌ ಪ್ರೌಢಶಾಲೆ
-ಮೂಡಲಪಾಳ್ಯ ಪ್ರೌಢಶಾಲೆ
-ಕ್ಲೀವ್‌ಲ್ಯಾಂಡ್‌ಟೌನ್‌, ಪ್ರೌಢಶಾಲೆ ಹಾಗೂ ಕಾಲೇಜು
-ಭೈರಸಂದ್ರ ಪ್ರೌಢಶಾಲೆ ಹಾಗೂ ಕಾಲೇಜು 

ಬಿಬಿಎಂಪಿ ರೋಶಿನಿ ಯೋಜನೆಯಡಿ ಮೊದಲ ಹಂತದಲ್ಲಿ ಆರು ಶಾಲೆಗಳನ್ನು ಮಾದರಿ ಶಾಲೆಗಳಾಗಿ ನಿರ್ಮಿಸಲಾಗುತ್ತಿದೆ. ಅದರಂತೆ ಈಗಾಗಲೇ ಕ್ಲೀವ್‌ಲ್ಯಾಂಡ್‌ಟೌನ್‌ ಶಾಲೆ ಉದ್ಘಾಟನೆಗೆ ಸಿದ್ಧವಾಗಿದ್ದು, ಉಳಿದ ಶಾಲೆಗಳಲ್ಲಿಯೂ ಕಾಮಗಾರಿ ನಡೆಯುತ್ತಿದೆ. 
-ಅಲಿ ಸೇಠ್, ಸಿಇಒ ಟೆಕ್‌ ಅವಾಂತ್‌ ಗಾರ್ಡ್‌

* ವೆಂ.ಸುನೀಲ್‌ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next