Advertisement

ಕಾಯಕಯೋಗಿ ‘ಕುಡ್ಲದ ಆಟೋರಾಜ’

10:01 AM Apr 08, 2018 | |

ಮಹಾನಗರ: ಎಂಬತ್ತಮೂರರ ಇಳಿ ವಯಸ್ಸಲ್ಲೂ ಎಳೆಯರಂತಹ ಉತ್ಸಾಹ. 62 ವರ್ಷಗಳಿಂದ ಆಟೋ ರಿಕ್ಷಾ ಚಾಲಕ. ಈ ವರೆಗೆ ಒಂದೇ ಒಂದು ಪೊಲೀಸ್‌ ಕೇಸ್‌ ಇಲ್ಲದೆ, ಅಪಘಾತ ಎಸಗದೆ ನಿಷ್ಠೆಯಿಂದ ದುಡಿಯುತ್ತಿರುವ ಕಾಯಕಯೋಗಿ. ವಿಶೇಷವೆಂದರೆ ಮಂಗಳೂರಿನಲ್ಲಿ ಪ್ರಪ್ರಥಮವಾಗಿ ಓಡಾಟ ನಡೆಸಿದ ರಿಕ್ಷಾದ ಚಾಲಕ ಅವರು!

Advertisement

ನಗರದ ಜಪ್ಪು ನಿವಾಸಿ ಮೊಂತು ಲೋಬೋ ಅವರೇ ಇಳಿ ವಯಸ್ಸಿನಲ್ಲಿಯೂ ಉತ್ಸಾಹದಿಂದ ಆಟೋ ಓಡಿಸುತ್ತಿರುವವರು.

ಬ್ರಿಟಿಷರ ವಾಹನಗಳನ್ನು ಹೊರತುಪಡಿಸಿದರೆ ನಗರದಲ್ಲಿ ಎತ್ತಿನಗಾಡಿ, ಕುದುರೆಗಾಡಿಯೇ ಕಾಣ ಸಿಗುತ್ತಿದ್ದ ಕಾಲವದು. 1956ರಲ್ಲಿ ಮೊದಲ ಬಾರಿಗೆ ಮಂಗಳೂರಿಗೆ ರಿಕ್ಷಾ ಪರಿಚಯವಾಯಿತು. ಎರಡು ರಿಕ್ಷಾಗಳನ್ನು ನಗರದಲ್ಲಿನ ಓಡಾಟಕ್ಕೆಂದು ತರಲಾಗಿತ್ತು. ಈ ಪೈಕಿ ಒಂದು ರಿಕ್ಷಾದಲ್ಲಿ ಮೊಂತು ಲೋಬೋ ಚಾಲಕರಾಗಿ ಸೇರಿದ್ದರು. ಅಲ್ಲಿಂದ ಆರಂಭವಾದ ಆಟೋ ಚಾಲನೆ ಪ್ರೀತಿಯು ಇಳಿ ವಯಸ್ಸಿನಲ್ಲಿಯೂ ಅವರನ್ನು ಸ್ವಾವಲಂಬಿ ಜೀವನಕ್ಕೆ ಪ್ರೇರೇಪಿಸುತ್ತಿದೆ.

ನಸುಕಿನ ವೇಳೆಗೇ ಕೆಲಸಕ್ಕೆ!
ಮೊಂತು ಲೋಬೋ ಅವರು ಈ ಇಳಿ ವಯಸ್ಸಿನಲ್ಲಿಯೂ ನಸುಕಿನ ವೇಳೆ ಎರಡು ಗಂಟೆಗೆ ಏಳುತ್ತಾರೆ. ತಾವೇ ಚಾ ಮಾಡಿ ಕುಡಿದು, ಮನೆಯ ಸಣ್ಣ ಪುಟ್ಟ ಕೆಲಸ ಮುಗಿಸಿ ಮೂರು ಗಂಟೆಗೆ ರಿಕ್ಷಾವನ್ನು ಬಾಡಿಗೆ ಓಡಾಟಕ್ಕೆ ಕೊಂಡೊಯ್ಯುತ್ತಾರೆ. ‘ರೈಲ್ವೇ ಸ್ಟೇಷನ್‌ಗೆ ಹೋಗುವವರಿಗೆ ಬೆಳಗ್ಗೆ ಬೇಗನೇ ರೈಲು ನಿಲ್ದಾಣ ತಲುಪಬೇಕಾಗುವುದರಿಂದ ದಿನನಿತ್ಯ ನಸುಕಿನ ವೇಳೆ ಬಾಡಿಗೆ ಇರುತ್ತದೆ ಎನ್ನುತ್ತಾರೆ ಅವರು. ಪತ್ನಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಸಂಜೆ ಮಾತ್ರ 5 ಗಂಟೆ ವೇಳೆಗೆ ಮನೆಗೆ ತಲುಪುತ್ತಾರೆ.

ಹಳ್ಳಿಯಾಗಿತ್ತು ಮಂಗಳೂರು
ಅಂದು ಮಂಗಳೂರು ಹೇಗಿತ್ತು ಎಂಬ ಬಗ್ಗೆ ಅವರು, 1956ರ ಹೊತ್ತಿನಲ್ಲಿ ನನಗೆ 20 ವರ್ಷ. ಆಗ ಮಂಗಳೂರು ತೀರಾ ಹಳ್ಳಿಯಾಗಿತ್ತು. ಮರ ಗಿಡಗಳು ಸಮೃದ್ಧವಾಗಿದ್ದವು. ‘ಮೇಡ್‌ ಇನ್‌ ಇಂಗ್ಲೆಂಡ್‌’ ವಾಹನಗಳನ್ನು ಬಿಟ್ಟರೆ ಈಗಿನಂತೆ ವಾಹನ ದಟ್ಟಣೆಯೇ ಇರಲಿಲ್ಲ ಎಂದು ನೆನಪುಗಳನ್ನು ಬಿಚ್ಚಿಟ್ಟರು.

Advertisement

ಹಲವು ಪ್ರಶಸ್ತಿ
ಬೆಂಗಳೂರಿನ ಪುರಭವನದಲ್ಲಿ ಸಂಘಟನೆಯೊಂದು ಸಾರಥಿ ನಂಬರ್‌ ವನ್‌ ಪ್ರಶಸ್ತಿ, ನಗರದ ಬೆಸೆಂಟ್‌ ಕಾಲೇಜಿನವರು ಕುಡ್ಲದ ಆಟೋ ರಾಜ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಅಲ್ಲದೆ ಕಂಕನಾಡಿ ಟ್ಯಾಲೆಂಟ್‌ ರೀಸರ್ಚ್‌ ಫೌಂಡೇಶನ್‌ ಸಹಿತ ಸುಮಾರು 15ಕ್ಕೂಹೆಚ್ಚು ಸಂಘ- ಸಂಸ್ಥೆಗಳು ಅವರನ್ನು ಗೌರವಿಸಿವೆ.

ಆಗ ರಿಕ್ಷಾ ಬಾಡಿಗೆ ನಾಲ್ಕಾಣೆ
ಈಗ ರಿಕ್ಷಾ ಕನಿಷ್ಠ ಬಾಡಿಗೆ ದರ 27 ರೂ. ಆದರೆ ಮೊಂತು ರಿಕ್ಷಾ ಚಾಲಕರಾಗಿ ವೃತ್ತಿ ಜೀವನ ಆರಂಭಿಸಿದ ಹೊತ್ತಿನಲ್ಲಿ ಕಿಲೋ ಮೀಟರ್‌ ವೊಂದಕ್ಕೆ ನಾಲ್ಕಾಣೆ ಇತ್ತು. ಐದು ಲೀಟರ್‌ ಪೆಟ್ರೋಲ್‌ಗೆ ಆಗ ಕೇವಲ 4 ರೂ. ಎಂದು ನೆನಪಿಸಿಕೊಳ್ಳುತ್ತಾರೆ ಅವರು. ಮೊಂತು ಅವರ ದುಡಿಮೆಗೆ ರಿಕ್ಷಾ ಮಾಲಕರು ದಿನಕ್ಕೆ 5 ರೂ. ಗಳಂತೆ ತಿಂಗಳಿಗೆ 150 ರೂ. ನೀಡುತ್ತಿದ್ದರಂತೆ. ಇಂದಿನ ವರೆಗೆ ಅವರು ಎಂಟು ರಿಕ್ಷಾಗಳನ್ನು ಬದಲಾಯಿಸಿದ್ದಾರೆ. ಚಾಲಕರಾಗಿ ವೃತ್ತಿ ಜೀವನ ಆರಂಭಿಸಿದವರು ಈಗ ಮಾಲಕರಾಗಿ ಸ್ವಾವಲಂಬಿಯಾಗಿದ್ದಾರೆ. ಮೊಂತು ಲೋಬೋ ಅವರ ಪುತ್ರ ಅನಿಲ್‌ ಲೋಬೋ ಕೂಡ ರಿಕ್ಷಾ ಓಡಿಸುತ್ತಿದ್ದಾರೆ. 

ಅಪಘಾತ ಮಾಡಿಲ್ಲ; ಪೊಲೀಸ್‌ ದೂರಿಲ್ಲ
62 ವರ್ಷಗಳ ಚಾಲಕ ವೃತ್ತಿ ಜೀವನದಲ್ಲಿ ಒಂದೇ ಒಂದು ಅಪಘಾತ ಎಸಗಿಲ್ಲ. ಅವರ ಮೇಲೆ ಇದುವರೆಗೆ ಯಾವುದೇ ಪೊಲೀಸ್‌ ದೂರಿಲ್ಲ. ದೇವರ ದಯೆ, ತಾಯಿ-ತಂದೆಯ ಆಶೀರ್ವಾದ, ನನ್ನ ಪ್ರಯತ್ನ ಮತ್ತು ಜನರ ಸಹಕಾರದಿಂದ ಇದು ಸಾಧ್ಯವಾಗಿದೆ.
– ಮೊಂತು ಲೋಬೋ,
ಹಿರಿಯ ಆಟೋ ಚಾಲಕ

 ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next