ಚಿತ್ರದುರ್ಗ: ಬಿರು ಬಿಸಿಲಿನಿಂದ ಬೆಂದು ಬಸವಳಿದಿದ್ದ ಜಿಲ್ಲೆಯ ಜನರಿಗೆ ಭಾನುವಾರ ರಾತ್ರಿ ಸುರಿದ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಆಲಿಕಲ್ಲು ಮಳೆ ತಂಪೆರೆದಿದೆ. ಆದರೆ ಇದೇ ವೇಳೆ 174 ಎಕರೆಯಲ್ಲಿನ ಅಡಿಕೆ, ಬಾಳೆ, ಪಪ್ಪಾಯಿ ಫಸಲು ಹಾನಿಯಾಗಿದ್ದು, 18.11 ಲಕ್ಷ ರೂ. ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ, ಧರ್ಮಪುರ ಹೋಬಳಿಯ ಮ್ಯಾದನಹೊಳೆ, ಸಮುದ್ರದಹಳ್ಳಿ, ಲಕ್ಕನಾಳ್, ಯರಕೇನಾಗೇನಹಳ್ಳಿ, ಚಿಲ್ಲಹಳ್ಳಿ, ಕಂಬದಹಳ್ಳಿ, ಕಂಬತ್ತನಹಳ್ಳಿ, ರಂಗನಾಥಪುರ, ಆದಿವಾಲ ಗೊಲ್ಲರಹಟ್ಟಿ, ವೇಣುಕಲುಗುಡ್ಡ, ಹೂವಿನಹೊಳೆ, ಟಿ. ನಾಗೇನಹಳ್ಳಿ ಮತ್ತಿತರ ಗ್ರಾಮಗಳ ಅಡಿಕೆ, ಬಾಳೆ, ಪಪ್ಪಾಯಿ ಸೇರಿದಂತೆ ಮತ್ತಿತರ ತೋಟಗಾರಿಕಾ ಬೆಳೆ ಸಂಪೂರ್ಣ ನೆಲ ಕಚ್ಚಿದೆ.
ಮ್ಯಾದನಹೊಳೆ, ಸಮುದ್ರದಹಳ್ಳಿಯ ರೈತ ದೇವರಾಜ್ ಅವರ 4 ಎಕರೆ ಅಡಿಕೆ, ಬಾಳೆ, ರಂಗನಾಥ ಗೌಡರ 11 ಎಕರೆಯಲ್ಲಿದ್ದ ಅಡಿಕೆ, ಬಾಳೆ ಮತ್ತು ಪಪ್ಪಾಯಿ, ಎಸ್.ಎನ್. ಭೂಕಾಂತ್ ಅವರ 1 ಎಕರೆ ಅಡಿಕೆ, ಯಶೋಧರ ಅವರ ಒಂದೂವರೆ ಎಕರೆ ಅಡಿಕೆ, ಎಸ್.ಎನ್. ಮೂರ್ಕಣ್ಣಪ್ಪರವರ 3 ಎಕರೆ ಅಡಿಕೆ, ಎಸ್.ಆರ್. ರಂಗನಾಥ ಅವರ 2 ಎಕರೆ ಅಡಿಕೆ, ಎಚ್.ಎಚ್. ರಾಜಣ್ಣರವರ 2 ಎಕರೆ ಅಡಿಕೆ, ಎಸ್.ಆರ್.ನಾರಾಯಣ ಅವರ 2 ಎಕರೆ ಅಡಿಕೆ, ಎಸ್.ಕೆ. ಬಸವರಾಜ್ ಅವರ 1 ಎಕರೆ ಅಡಿಕೆ, ಎಸ್.ಕೆ. ಕಣ್ಮೇಶ್ ಅವರ 2 ಎಕರೆ ಅಡಿಕೆ, ಎಸ್.ಬಿ. ಮಹಲಿಂಗಪ್ಪರವರ ಒಂದೂವರೆ ಎಕರೆ ಅಡಿಕೆ, ಎಸ್.ಕೆ. ಶಿವಣ್ಣರವರ 1 ಎಕರೆ ಅಡಿಕೆ, ಎಸ್.ಎನ್.ಹೆಂಜಾರಪ್ಪ ಒಂದೂವರೆ ಎಕರೆ ಅಡಿಕೆ, ಸಿದ್ದಪ್ಪ ಅವರ ಒಂದೂವರೆ ಎಕರೆ ಅಡಿಕೆ, ಎಸ್.ಎಚ್. ಹೊರಕೇರಪ್ಪ ಅವರ 2 ಎಕರೆ ಅಡಿಕೆ, ಎಸ್.ಬಿ. ಹಂಪಣ್ಣ ಅವರ 1 ಎಕರೆ ಅಡಿಕೆ, ಕೇಶವಮೂರ್ತಿಯವರ 2 ಎಕರೆ ಅಡಿಕೆ ಸೇರಿದಂತೆ ರೈತರ ಹತ್ತಾರು ಹೆಕ್ಟೇರ್ ಪ್ರದೇಶದಲ್ಲಿನ ಫಸಲಿಗೆ ಬಂದಿದ್ದ ಅಡಿಕೆ, ಬಾಳೆ, ಪಪ್ಪಾಯಿ, ದಾಳಿಂಬೆ ಆಲಿಕಲ್ಲು ಮಳೆಯಿಂದಾಗಿ ನಾಶವಾಗಿವೆ. ಅಡಿಕೆ ತೋಟಗಳಲ್ಲಿ ಅಡಿಕೆ ಕಾಯಿಗಳು ಗಾಳಿ ಮತ್ತು ಆಲಿಕಲ್ಲು ಮಳೆಗೆ ನೆಲಕ್ಕುರುಳಿವೆ. ಅಲ್ಲದೆ ನೂರಾರು ಅಡಿಕೆ ಮರಗಳು ಧರಾಶಾಹಿಯಾಗಿವೆ.
ಧರ್ಮಪುರ, ಜವನಗೊಂಡನಹಳ್ಳಿ ಹೋಬಳಿಯ ಕೆಲವು ಹಳ್ಳಿಗಳಲ್ಲಿ ಸುರಿದ ಮಳೆಯಿಂದಾಗಿ ಕೂಡ್ಲಹಳ್ಳಿ ಸಮೀಪ ಹರಿಯುವ ವೇದಾವತಿ ಮತ್ತು ಸುವರ್ಣಮುಖೀ ನದಿಗಳಲ್ಲಿ ನೀರು ಹರಿದಿದೆ. ಅಲ್ಲದೆ ಗೋಕಟ್ಟೆ, ಚೆಕ್‌ಡ್ಯಾಂಗಳು ಒಂದೇ ಮಳೆಗೆ ಭರ್ತಿಯಾಗಿವೆ.
ಬಿರುಗಾಳಿ ಮಳೆಗೆ ಬಾಳೆ ತೋಟಗಳೂ ಹಾನಿಗೀಡಾಗಿವೆ. ಫಸಲಿಗೆ ಬಂದಿದ್ದ ಬಾಳೆ ಕಂದುಗಳು ಮುರಿದುಬಿದ್ದಿವೆ. ಇನ್ನೊಂದು ತಿಂಗಳಲ್ಲಿ ಬಾಳೆಕಾಯಿ ಗೊನೆಗಳು ಕಟಾವಿಗೆ ಬರುತ್ತಿದ್ದವು. ಮಾರುಕಟ್ಟೆಯಲ್ಲಿ ಉತ್ತಮ ದರ ಇದ್ದು ಬೆಳೆಗಾರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ. ಫಸಲಿಗೆ ಬಂದಿದ್ದ ಪಪ್ಪಾಯಿ ತೋಟಗಳಲ್ಲಿನ ಪಪ್ಪಾಯಿ ಹಣ್ಣುಗಳು ನೆಲಕ್ಕುರುಳಿದ್ದು ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಅಡಿಕೆ, ತೆಂಗಿನ ತೋಟ ಉಳಿಸಿಕೊಳ್ಳಲು ಉತ್ತಮ ಮಳೆಯಾಗಿರುವ ಸಂತೋಷ ಒಂದು ಕಡೆಯಾದರೆ, ಅಡಿಕೆ ಕಾಯಿ ಬಿದ್ದಿರುವುದು, ಬಾಳೆಗೊನೆ ಮತ್ತು ಅಡಿಕೆ ಮರಗಳು ನೆಲಕ್ಕುರುಳಿರುವುದು ರೈತರಲ್ಲಿ ಆಘಾತ ಮೂಡಿಸಿದೆ.