ಕೆ.ಆರ್.ನಗರ: ಶಿಕ್ಷಕರು, ಪೋಷಕರು ಮತ್ತು ಸಾರ್ವಜನಿಕರ ನೆರವಿನಿಂದ ತಾಲೂಕಿನ ವಿದ್ಯಾರ್ಥಿಗಳಿಗೆ ಗುಣಮಟ್ಟಣದ ಶಿಕ್ಷಣ ದೊರಕುವಂತೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ರಾಜು ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಕರು ಮತ್ತು ಅಧಿಕಾರಿಗಳಿಂದಲೇ ಸಾಧನೆ ಮಾಡಲು ಸಾಧ್ಯವಿಲ್ಲ ಇದಕ್ಕೆ ಎಸ್‌ಡಿಎಂಸಿ ಮತ್ತು ಚುನಾಯಿತ ಜನಪ್ರತಿನಿಧಿಗಳ ಸಹಕಾರ ಅತ್ಯಗತ್ಯವಾಗಿದ್ದು, ಅವರೆಲ್ಲರಾ ವಿಶ್ವಾಸಗಳಿಸಿ ತಾಲೂಕಿಗೆ ಜಿಲ್ಲೆಯಲ್ಲಿಯೇ ಉತ್ತಮ ಹೆಸರು ಬರುವಂತೆ ಪರಸ್ಪರ ಸಮನ್ವಯತೆಯಿಂದ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು.
ಶಾಲಾಭಿವೃದ್ಧಿಗೆ ಒತ್ತು: ತಾಲೂಕಿನಲ್ಲಿ ಉತ್ತಮ ಶಿಕ್ಷಕರ ಪಡೆ ಇದ್ದು, ಅವರಿಗೆ ಅಗತ್ಯ ಮಾರ್ಗದರ್ಶನ ನೀಡಿ ವಿದ್ಯಾರ್ಥಿಗಳಿಗೆ ಮನವರಿಕೆಯಾಗುವಂತೆ ಬೋಧನಾ ವಿಧಾನ ಅಳವಡಿಸಿಕೊಳ್ಳಲು ಸೂಚಿಸಿ, ಅವರಿಂದಲೂ ಸೂಕ್ತ ಸಲಹೆ ಸಹಕಾರ ಪಡೆದುಕೊಂಡು ಸ್ಥಳೀಯವಾಗಿ ದೊರಕುವ ಸಂಪನ್ಮೂಲಗಳನ್ನು ಶಾಲೆಯ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತದೆ ಎಂದರು.
ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆಯುವುದರ ಜತೆಗೆ ಗುಣಮಟ್ಟದ ಶಿಕ್ಷಣ ನೀಡಲು ಹೆಚ್ಚು ಆದ್ಯತೆ ನೀಡುವ ಯೋಜನೆ ಹಮ್ಮಿಕೊಳ್ಳಲಿದ್ದು, ಇದಕ್ಕಾಗಿ ಮುಂದಿನ ದಿನಗಳಲ್ಲಿ ಶಿಕ್ಷಕರ ಸಭೆ ಮತ್ತು ವಿಚಾರ ಸಂಕೀರ್ಣ ಹಾಗೂ ಕಮ್ಮಟಗಳನ್ನು ಏರ್ಪಡಿಸಿ ನುರಿತ ಶಿಕ್ಷಣ ತಜ್ಞರಿಂದ ಶಿಕ್ಷಕ ಬಳಗಕ್ಕೆ ಅಗತ್ಯ ತರಬೇತಿ ಕೊಡಿಸಲಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದರು.
ಈ ವರೆಗೆ ಮೈಸೂರಿನ ಶಿಕ್ಷಕರ ಶಿಕ್ಷಣಾ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದು ಎಂ.ರಾಜು ಪ್ರಸ್ತುತ ಕೆ.ಆರ್.ನಗರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದು ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿ ರುದ್ರಪ್ಪ ಅವರಿಂದ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆಶ್ರಯ ಸಮಿತಿ ಮಾಜಿ ಸದಸ್ಯ ಬಿ.ರಮೇಶ್, ತಾಲೂಕು ಜೆಡಿಎಸ್ ಮುಖಂಡರಾದ ಹರ್ಷಕುಮಾರಗೌಡ, ಟಿ.ಪಿ.ಮಂಜುನಾಥ್, ತಾಲೂಕು ಶಿಕ್ಷಕರ ಸಂಘದ ಗೌರವಾಧ್ಯಕ್ಷ ರಾಜಶೇಖರ್, ಬಂಡಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಡಾ.ಎಂ.ಸುರೇಶ್ ಹಾಜರಿದ್ದು ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ವಾಗತಿಸಿದರು.