ಹುಬ್ಬಳ್ಳಿ: ಆರೋಗ್ಯ-ಶಿಕ್ಷಣಕ್ಕೆ ಸರಕಾರ ಮೊದಲ ಆದ್ಯತೆ ನೀಡಿದೆ. ಆರೋಗ್ಯ ಇಲಾಖೆಗೆ ಬಜೆಟ್‌ನಲ್ಲಿ 10 ಸಾವಿರ ಕೋಟಿ ರೂ.ಗಳನ್ನು ನೀಡಿದ್ದರೆ, ರಾಜ್ಯದಲ್ಲಿ ಒಂದೇ ವರ್ಷದಲ್ಲಿ ಸುಮಾರು ಎಂಟು ಸಾವಿರ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದೇವೆ. ಇದು ರಾಜ್ಯದ ಇತಿಹಾಸದಲ್ಲಿಯೇ ಮೊದಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಬೈರಿದೇವರಕೊಪ್ಪದ ರೇಣುಕಾ ನಗರದಲ್ಲಿ ಬುಧವಾರ ನಮ್ಮ ಕ್ಲಿನಿಕ್ ಉದ್ಘಾಟಿಸಿದ ಅನಂತರ ಮಾತನಾಡಿದ ಅವರು, ಸರಕಾರ ಏಳು ಸಾವಿರಕ್ಕೂ ಅಧಿಕ ಆರೋಗ್ಯ-ಕ್ಷೇಮ ಕೇಂದ್ರಗಳನ್ನು ಆರಂಭಿಸಿದ್ದು, 30 ವರ್ಷಕ್ಕೂ ಮೇಲ್ಪಟ್ಟ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆಯಾದರೂ ಎಲ್ಲ ರೀತಿಯ ತಪಾಸಣೆಗೊಳಗಾಗಬೇಕೆಂಬ ಉದ್ದೇಶ ನಮ್ಮದಾಗಿದೆ ಎಂದರು.
ವಿವಿಧ ಸೌಲಭ್ಯಗಳಿಂದ ವಂಚಿತ ರಾಜ್ಯದ ಸುಮಾರು 110 ಮಹಾತ್ವಾಕಾಂಕ್ಷಿ ಅಥವಾ ಉದಯೋನ್ಮುಖ ತಾಲೂಕುಗಳನ್ನು ಗುರುತಿಸಿದ್ದು, ಮೊದಲ ಬಾರಿಗೆ ಅಲ್ಲಿ ಆರೋಗ್ಯ-ಶಿಕ್ಷಣ ದೃಷ್ಟಿಯಿಂದ ವಿಶೇಷ ಕಾರ್ಯಕ್ರಮ ಕೈಗೊಳ್ಳಲಾಗುತ್ತದೆ. ಸುಮಾರು 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉನ್ನತೀಕರಿಸಲಾಗುತ್ತಿದೆ. ಅಂದಾಜು 10 ಕೋಟಿ ರೂ. ವೆಚ್ಚದಲ್ಲಿ ತಾಲೂಕುಗಳಲ್ಲಿ 30 ಹಾಸಿಗೆ ಆಸ್ಪತ್ರೆ ನಿರ್ಮಾಣ, ಕಲ್ಯಾಣ ಕರ್ನಾಟಕ ಭಾಗದಲ್ಲಿ 42 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಟೆಲಿಮೆಡಿಸಿನ್ ಸಂಪರ್ಕ ನೀಡಲಾಗುತ್ತಿದೆ. ರಾಜ್ಯದಲ್ಲಿ ನಿತ್ಯ ಡಯಾಲಿಸಿಸ್ 30 ಸಾವಿರ ಸೈಕಲ್ ಅನ್ನು 60 ಸಾವಿರಕ್ಕೆ ಹೆಚ್ಚಿಸಲಾಗಿದೆ. ಕ್ಯಾನ್ಸರ್ ರೋಗಿಗಳಿಗೆ ಕಿಮೊ ಥೆರಪಿ ದುಪ್ಪಟ್ಟು ಮಾಡಲಾಗಿದ್ದು, 12 ಹೊಸ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಆರಂಭಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಪ್ರಸ್ತುತ 1,250 ಜನೌಷಧ ಕೇಂದ್ರಗಳಿದ್ದು, ಇನ್ನೂ ಒಂದು ಸಾವಿರ ಜನೌಷಧ ಕೇಂದ್ರಗಳನ್ನು ಆರಂಭಿಸಲಾಗುವುದು.
ನಿಮ್ಹಾನ್ಸ್, ಕಿದ್ವಾಯಿ, ಜಯದೇವ ಆಸ್ಪತ್ರೆ ಅಲ್ಲದೆ ಪ್ರತೀ ತಾಲೂಕು ಆರೋಗ್ಯ ಕೇಂದ್ರಗಳಿಗೂ ಟೆಲಿಮೆಡಿಸಿನ್ ಸಂಪರ್ಕ ಕಲ್ಪಿಸಲಾಗುವುದು ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ಡಾ| ಕೆ. ಸುಧಾಕರ್, ಹಾಲಪ್ಪ ಆಚಾರ್, ಸಿ.ಸಿ. ಪಾಟೀಲ್, ಶಾಸಕ ಅರವಿಂದ ಬೆಲ್ಲದ, ಮಹಾಪೌರ ಈರೇಶ ಅಂಚಟಗೇರಿ ಇದ್ದರು.
ಮಕ್ಕಳ ಆರೋಗ್ಯ ತಪಾಸಣೆಯಾಗಲಿ
ರಾಜ್ಯದ ಎಲ್ಲ ಕಡೆಯ ಮಕ್ಕಳ ಆರೋಗ್ಯ ತಪಾಸಣೆಯಾಗಿ ದತ್ತಾಂಶ ಸಂಗ್ರಹ ಮಾಡಬೇಕಿದೆ. ಹಾವೇರಿ-ಉಡುಪಿ ಜಿಲ್ಲೆಗಳಲ್ಲಿ ಇದನ್ನು ಮಾಡಿಸಿದ್ದೇನೆ. ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಇದು ಮಾಡುವಂತಾಗಬೇಕು. ಹುಬ್ಬಳ್ಳಿಯಲ್ಲಿ ತಾಯಿ-ಮಗುವಿನ ಆಸ್ಪತ್ರೆ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಆಗಬೇಕು ಎಂದರು.