Advertisement

ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ

05:53 PM Feb 09, 2020 | Suhan S |

ಕುಮಟಾ: ಸಮಾಜದಲ್ಲಿ ಎಲ್ಲರ ಪ್ರೀತಿ ವಿಶ್ವಾಸಗಳಿಸಲು ಶಿಕ್ಷಣ ಅತ್ಯವಶ್ಯ. ಆ ನಿಟ್ಟಿನಲ್ಲಿ ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.

Advertisement

ಧಾರೇಶ್ವರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಶೌರ್ಯ ಪ್ರಶಸ್ತಿ ಪುರಸ್ಕೃತಳಾದ ಆರತಿ ಕಿರಣ ಶೇಟ್‌ ಅವಳನ್ನು ಸನ್ಮಾನಿಸಿ, ಅವರು ಮಾತನಾಡಿದರು. ಆರತಿಗೆ ಪ್ರಶಸ್ತಿ ಬಂದಿರುವುದು ತಾಲೂಕಿನ ಜನತೆ ಹೆಮ್ಮೆ ಪಡುವ ಸಂಗತಿ. ತಮ್ಮನನ್ನು ಹಸುವಿನಿಂದ ರಕ್ಷಿಸಲು ಪ್ರಾಣದ ಹಂಗು ತೊರೆದು ಹಸುವನ್ನು ಬೆದರಿಸಿದ್ದಾಳೆ. ಅವಳ ಈ ಶೌರ್ಯವನ್ನು ಮೆಚ್ಚಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗಣರಾಜ್ಯೋತ್ಸವ ಸಂದರ್ಭದಲ್ಲಿ ಸನ್ಮಾನಿಸಿರುವುದು ಕುಮಟಾ-ಹೊನ್ನಾವರ ಕ್ಷೇತ್ರದ ಜನತೆಗೆ ಹೆಮ್ಮೆ ಎಂದರು.

ಜಿಲ್ಲೆಯ ಜನರು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಉದ್ದೇಶದಿಂದ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ದಿ.ಡಾ| ದಿನಕರ ದೇಸಾಯಿಯವರು ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಸ್ಥಾಪಿಸಿ, ಲಕ್ಷಾಂತರ ಯುವಕರು ಉನ್ನತ ಶಿಕ್ಷಣ ಪಡೆದು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವಂತೆ ಮಾಡಿದ್ದಾರೆ ಎಂದರು.

ಸಹಾಯಕ ಆಯುಕ್ತ ಎಂ.ಅಜಿತ್‌ ಮಾತನಾಡಿ, ಪಾಲಕರು ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕಬಾರದು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದೊಂದು ರೀತಿಯ ಪ್ರತಿಭೆ ಹುದುಗಿರುತ್ತದೆ. ಅವುಗಳನ್ನು ಅಭಿವ್ಯಕ್ತಗೊಳಿಸಲು ಪಾಲಕರು ಮುಕ್ತ ಅವಕಾಶ ಕಲ್ಪಿಸಬೇಕು ಎಂದರು.

ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಮಾತನಾಡಿ, ತಮ್ಮ ಜಿಲ್ಲೆಯಲ್ಲಿ ಸಾಕಷ್ಟು ರಾಷ್ಟ್ರಮಟ್ಟದಲ್ಲಿ ಮಿಂಚಿದ ಪ್ರತಿಭೆಗಳಿದ್ದು, ಅವುಗಳಿಗೆ ನಿರಂತರ ಪ್ರೋತ್ಸಾಹ ನೀಡಬೇಕಿದೆ. 5ನೇ ತರಗತಿ ಪುಟ್ಟ ಬಾಲಕಿ ಯಾವುದೇ ಸನ್ಮಾನ, ಪ್ರಶಸ್ತಿಗಾಗಿ ತನ್ನ ಜೀವದ ಹಂಗು ತೊರೆದು ತಮ್ಮನ ಜೀವ ಉಳಿಸಲಿಲ್ಲ. ಬದಲಾಗಿ ಅವಳಲ್ಲಿರುವ ಧೈರ್ಯ ಹಾಗೂ ಆತ್ಮವಿಶ್ವಾಸದ ಛಲದಿಂದ ತಮ್ಮನ ಜೀವವನ್ನು ರಕ್ಷಿಸಿದ್ದಾಳೆ ಎಂದರು.

Advertisement

ಜಿ.ಪಂ ಸದಸ್ಯ ಶಿವಾನಂದ ಹೆಗಡೆ ಕಡತೋಕ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರಮಟ್ಟದ ಶೌರ್ಯ ಪ್ರಶಸ್ತಿ ಪಡೆದ ಆರತಿಯ ಸಾಧನೆ ಜಿಲ್ಲೆಯ ಜನ ಹೆಮ್ಮೆಪಡುವಂತಹ ಸಂಗತಿಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ದೇವಗಿರಿ ಗ್ರಾಪಂ ಅಧ್ಯಕ್ಷ ಎಸ್‌.ಟಿ. ನಾಯ್ಕ ಮಾತನಾಡಿ,ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಶೈಕ್ಷಣಿಕ ಕೇಂದ್ರದ ಅಭಿವೃದ್ಧಿಗೆ ಗ್ರಾ.ಪಂನಿಂದ ಸಿಗುವ ಸಂಪೂರ್ಣ ಸೌಲಭ್ಯ ನೀಡಲಾಗುತ್ತದೆ ಎಂದರು.

ರಾಜ್ಯ ಮತ್ತು ರಾಷ್ಟ್ರಮಟ್ಟದ ಶೌರ್ಯ ಪ್ರಶಸ್ತಿ ಪುರಸ್ಕೃತಳಾದ ಆರತಿ ಶೇಟ್‌ಗೆ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನಿಸಲಾಯಿತು. ತಾಪಂ ಅಧ್ಯಕ್ಷೆ ವಿಜಯಾ ಪಟಗಾರ, ಕೆನರಾ ವೆಲ್‌ಫೇರ್‌ ಟ್ರಸ್ಟ್‌ ಅಧ್ಯಕ್ಷ ಕೆ.ವಿ. ಶೆಟ್ಟಿ, ಬಿಇಒ ಆರ್‌.ಎಲ್‌. ಭಟ್ಟ, ವಿಎಸ್‌ಎಸ್‌ ಸಂಘದ ಅಧ್ಯಕ್ಷ ಕುಮಾರ ಭಟ್ಟ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದು ಶಾನಭಾಗ, ಕೋಶಾಧ್ಯಕ್ಷ ನಾಗರಾಜ ಶೇಟ್‌, ಮಹಾಲಕ್ಷ್ಮೀ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಸಚಿನ ನಾಯ್ಕ, ದಿನಕರ ಮಾತೃಮಂಡಳಿ ಅಧ್ಯಕ್ಷೆ ದೀಪಾ ಹೆಗಡೆ, ಬಿಆರ್‌ಸಿ ರೇಖಾ ನಾಯಕ ಮತ್ತಿತರರು ಉಪಸ್ಥಿರಿದ್ದರು. ಮುಖ್ಯಾಧ್ಯಾಪಕ ಜಗದೀಶ ಗುನಗಾ ಸ್ವಾಗತಿಸಿದರು. ಯೋಗೇಶ ಕೋಡ್ಕಣಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next