Advertisement

ಕೋವಿಡ್-ಪ್ರವಾಹ ತಡೆಗೆ ಪ್ರಥಮಾದ್ಯತೆ

06:02 PM Jul 20, 2021 | Team Udayavani |

ಗೋಕಾಕ: ಪ್ರವಾಹ ಮತ್ತು ಕೊರೊನಾ ತಡೆಗೆ ಪ್ರಥಮ ಆದ್ಯತೆ ನೀಡಿ ಎಲ್ಲ ಅಧಿಕಾರಿಗಳು ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಿಬೇಕೆಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಸೋಮವಾರ ನಗರದ ತಮ್ಮ ಕಾರ್ಯಾಲಯದಲ್ಲಿ ನಡೆದ ತಾಲೂಕು  ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಪ್ರವಾಹ ಬಂದು ಮುಳುಗಡೆಯಾಗುವ ಜಮೀನುಗಳಿಗೆ ಯಾವುದೇ ತೊಂದರೆ ಆಗದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿ ಕಾರ್ಯಮಾಡಬೇಕು.

Advertisement

ತುರ್ತು ಸಂದರ್ಭಗಳಲ್ಲಿ ಪೊಲೀಸ್‌ ಇಲಾಖೆ ಹಾಗೂ ಇತರ ಇಲಾಖೆ ಅಧಿಕಾರಿಗಳು ತಾಲೂಕಾಡಳಿತ ಜೊತೆಗೆ ಕೈ ಜೋಡಿಸಿ ಕಾರ್ಯಮಾಡಿದಾಗ ಮಾತ್ರ ಸಂಭಾವ್ಯ ಪ್ರವಾಹ ಹಾಗೂ ಕೊರೊನಾದಂತಹ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಆ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು.

ತಾಲೂಕಿನಾದ್ಯಂತ ಮಂಗಾರು ಚುರುಕುಗೊಂಡಿದ್ದು ಬೀಜ ವಿತರಣೆಯಲ್ಲಿ ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಸೊಸೈಟಿಯಲ್ಲಿ ಬೀಜ ಮಾರಾಟ ಮಾಡದೆ ಕೃಷಿ ಇಲಾಖೆಯಿಂದ ತೆರೆದಿರುವ ಬೀಜ ವಿತರಣಾ ಕೇಂದ್ರಗಳಿಂದಲೇ ಬೀಜ ಹಾಗೂ ಗೊಬ್ಬರ ವಿತರಣೆಯಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ತಾಲೂಕಿನಾದ್ಯಂತ ನಿರಂತರ ಜ್ಯೋತಿಗಾಗಿ ಸರಕಾರದಿಂದ ಬಿಡುಗಡೆಯಾದ ಅನುದಾನವನ್ನು ಸೂಕ್ತವಾಗಿ ಬಳಸಿಕೊಂಡು.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶೀಘ್ರದಲ್ಲೇ ಯೋಜನೆಯನ್ನು ಅನುಷ್ಠಾನಗೊಳಿಸಲು ಹೆಸ್ಕಾಂ ಇಲಾಖೆ ಅಧಿ ಕಾರಿಗಳು ಕ್ರಮ ಕೈಗೊಳ್ಳಬೇಕು.

ಸಾರ್ವಜನಿಕರಿಗೆ ಕೆಇಬಿ ಶುಲ್ಕ ಪಾವತಿಸಲು ಮತ್ತು ದೂರು ದಾಖಲಿಸಲು ಅನುಕೂಲವಾಗುವಂತೆ ನಗರದ ಮಧ್ಯ ಭಾಗದಲ್ಲಿ ಹೊಸ ಕಟ್ಟಡ ನಿರ್ಮಿಸಲು ಕ್ರಮ
ಕೈಗೊಳ್ಳಲಾಗುವುದು. ತಾಲೂಕಿನಾದ್ಯಂತ ಇರುವ 2.14 ಲಕ್ಷ ಜಾನುವಾರುಗಳಿಗೆ ಯಾವುದೇ ತೊಂದರೆಯಾಗದಂತೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಔಷಧ ಹಾಗೂ ಲಸಿಕೆ ನೀಡಬೇಕೆಂದು ಶಾಸಕ ರಮೇಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು.

ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ, ಡಿವೈಎಸ್‌.ಪಿ ಮನೋಜಕುಮಾರ ನಾಯಿಕ, ಪೌರಾಯುಕ್ತ ಶಿವಾನಂದ ಹಿರೇಮಠ, ತಾಲೂಕಾ ವೈದ್ಯಾಧಿಕಾರಿ ಡಾ.ಮುತ್ತಣ್ಣ ಕೊಪ್ಪದ, ವಲಯ ಅರಣ್ಯ ಅಧಿಕಾರಿ ಕೆ.ಎನ್‌.ವಣ್ಣೂರ, ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ, ಸಿಪಿಐ ಗೋಪಾಲ ರಾಠೊಡ, ಎಂ.ಎಲ್‌. ಜನ್ಮಟ್ಟಿ, ಎಮ್‌ ಎಮ್‌ ನದಾಫ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next