ವಿಜಯಪುರ: ಜಗತ್ತನ್ನು ತಲ್ಲಣಗೊಳಿಸಿರುವ ಕೋವಿಡ್-19 ಸೋಂಕು ಕೊನೆಗೂ ಶಾಹಿ ಸಾಮ್ರಾಜ್ಯದ ರಾಜಧಾನಿ ವಿಜಯಪುರಕ್ಕೂ ಕಾಲಿಟ್ಟಿದೆ.
ನಗರದ ಚಪ್ಪರಬಂದ ಪ್ರದೇಶದ 60 ವರ್ಷದ ವೃದ್ಧೆಯಲ್ಲಿ ಕೋವಿಡ್-19 ಸೋಂಕು ರವಿವಾರ ದೃಢಪಟ್ಟಿದೆ. ಸೋಂಕು ದೃಢಪಟ್ಟಿರುವ P221 ರೋಗಿ ಸುಮಾರು 25 ಜನರ ಅವಿಭಕ್ತ ಕುಟುಂಬದಲ್ಲಿ ವಾಸವಿದ್ದರು.
ಸೋಂಕು ದೃಢಪಡುವ ಮುನ್ನ ಸದರಿ ವೃದ್ಧೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು, ನಂತರ ನಗರದ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗೆ ದಾಖಲಾಗಿದ್ದಳು ಎನ್ನಲಾಗಿದೆ.
ಸದರಿ ರೋಗಿಯ ಕುಟುಂಬದ ಎಲ್ಲ 25 ಸದಸ್ಯರನ್ನು ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಕೋವಿಡ್-19 ವಿಶೇಷ ಆಸ್ಪತ್ರೆಯ ಐಸೋಲೇಶನ್ ವಾರ್ಡಗೆ ದಾಖಲಿಸಲಾಗಿದೆ.
ಭಾನುವಾರ ಮಧ್ಯಾಹ್ನದ ರಾಜ್ಯದ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ವಿಜಯಪುರ ನಗರಕ್ಕೂ ಸೋಂಕು ಹರಡಿದ ಕುರಿತು ಅಧಿಕೃತ ಘೋಷಣೆಯಾಗಿದೆ.
ಈ ಹಿನ್ನೆಲೆಯಲ್ಲಿ ಸದರಿ ಕೋವಿಡ್-19 ಸೋಂಕಿತ ಮಹಿಳೆಯ ಪ್ರವಾಸ ಹಾಗೂ ಸಂಪರ್ಕದ ಹಿನ್ನೆಲೆಯನ್ನು ಆರೋಗ್ಯ ಹಾಗೂ ಪೊಲೀಸ್ ಇಲಾಖೆ ತಡಕಾಡಲು ಮುಂದಾಗಿದೆ.