ಮಹಾನಗರ: ಮನೆ ಮನೆಗಳಲ್ಲಿಯೂ ಜಲಜಾಗೃತಿ ಮೂಡಿಸಬೇಕೆಂಬ ಕಳಕಳಿಯೊಂದಿಗೆ ಜೂ. 8ರಂದು “ಉದಯವಾಣಿ’ ಆರಂಭಿಸಿದ್ದ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನ ಬುಧವಾರಕ್ಕೆ ಯಶಸ್ವಿ ನೂರು ದಿನ ಪೂರೈಸಿದೆ. ಶತದಿನ ತಲುಪಿದ ಅಭಿಯಾನವು ಸದ್ಯಕ್ಕೆ ಇಲ್ಲಿಗೆ ಮುಗಿಯುತ್ತಿದ್ದು, ಉದಯವಾಣಿಯ ಜಲಜಾಗೃತಿಯು ಇದೇರೀತಿ ಮುಂದುವರಿಯಲಿದೆ.
ಅಭಿಯಾನ ಆರಂಭವಾದ ದಿನದಿಂದ ಇಲ್ಲಿಯವರೆಗೆ ಸುಮಾರು 400ಕ್ಕೂ ಹೆಚ್ಚು ಮನೆಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರಂಭಿಕ ಹಂತದಲ್ಲೇ ಮಳೆಕೊಯ್ಲು ಅಳವಡಿಸಿದವರು ತಮ್ಮ ಮನೆಯ ಬಾವಿಗಳಲ್ಲಿ ಶುದ್ಧ, ತಿಳಿಯಾದ ನೀರು ಸಿಗುತ್ತಿದೆ ಮತ್ತು ನೀರಿನ ಮಟ್ಟ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂಬ ಖುಷಿಯನ್ನು ಹಂಚಿಕೊಂಡಿದ್ದಾರೆ. ಇದು ಜಿಲ್ಲೆಯಲ್ಲಿ ಮತ್ತಷ್ಟು ಜನರು ಮಳೆಕೊಯ್ಲು ವ್ಯವಸ್ಥೆ ಅಳವಡಿಸಿ ಕೊಳ್ಳುವುದಕ್ಕೆ ಪ್ರೇರಣೆ ನೀಡಿದೆ.
ಇನ್ನೊಂದೆಡೆ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ಕಲಾºವಿ ಅವರ ಮಾರ್ಗದರ್ಶನದಲ್ಲಿ ಅದೆಷ್ಟೋ ಮನೆಗಳಲ್ಲಿ ಮಳೆಕೊಯ್ಲು ಅಳವಡಿಕೆಯಾಗಿದೆ. ಸಂಘ-ಸಂಸ್ಥೆಗಳು ತಾವೇ ಮುಂದೆ ನಿಂತು ಹಲವರ ಮನೆಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಟ್ಟಿರುವುದು ಅಭಿಯಾನಕ್ಕೆ ಸಂದ ಮತ್ತೂಂದು ಯಶಸ್ಸು. ಮಹಿಳಾ ಮಂಡಲಗಳು, ಚರ್ಚ್, ಸ್ವಯಂ ಸೇವಾಸಂಸ್ಥೆಗಳು, ಶಾಲಾ ಕಾಲೇಜುಗಳಲ್ಲಿ ಮಳೆಕೊಯ್ಲು ಕಾರ್ಯಾಗಾರಗಳನ್ನು ನಡೆಸಿ ಮಳೆಕೊಯ್ಲು ಅಳವಡಿಸಲು ಪ್ರೇರಣೆ ನೀಡಿರುವುದು ಶ್ಲಾಘನೀಯ ವಾಗಿದೆ. ಅಭಿಯಾನ ಆರಂಭವಾದಾಗಿನಿಂದ ಎಲ್ಲ ಕಡೆಯಿಂದಲೂ ಉತ್ತಮ ಸ್ಪಂದನೆ, ಬೆಂಬಲ ದೊರಕಿರುವುದ ಕಾರಣಕ್ಕೆ ಈ ಅಭಿಯಾನವನ್ನು ನೂರು ದಿನಗಳ ಕಾಲ ಮುಂದುವರಿಸುವುದಕ್ಕೆ ಸಾಧ್ಯವಾಗಿದೆ. ಮಂಗಳೂರು, ದ.ಕ. ಜಿಲ್ಲೆ ಮಾತ್ರವಲ್ಲದೆ, ಉಡುಪಿ, ಕಾರ್ಕಳ, ಕಾಸರಗೋಡು ಭಾಗದ ಜನರೂ ಮಳೆಕೊಯ್ಲು ಅಭಿಯಾನವನ್ನು ಇ-ಪತ್ರಿಕೆಯಲ್ಲಿ ಓದಿ ತಮ್ಮ ಮನೆಗಳಲ್ಲಿ ಅಳವಡಿಸಿಕೊಂಡಿರುವುದು ಗಮನಾರ್ಹ.
ಮಾತುಗಳೇ ಸ್ಫೂರ್ತಿ
ನಗರದಲ್ಲಿ ಮೂರ್‍ನಾಲ್ಕು ವರ್ಷಗಳಲ್ಲಿ ಎಪ್ರಿಲ್-ಮೇ ತಿಂಗಳಿನಲ್ಲಿ ಕಾಡಿದ ಅತಿಯಾದ ನೀರಿನ ಸಮಸ್ಯೆ ಈ ಬಾರಿ ಮಳೆಕೊಯ್ಲು ಅಳವಡಿಸಿದ ಅಷ್ಟೂ ಮನೆಗಳಲ್ಲಿ ಕಾಣಿಸದು ಎಂಬ ವಿಶ್ವಾಸವು ಈಗಾಗಲೇ ಮಳೆಕೊಯ್ಲು ಅಳವಡಿಸಿಕೊಂಡಿರುವ ಬಹುತೇಕ ಮಂದಿಯಲ್ಲಿ ಮೂಡಿದೆ. ಮಳೆಕೊಯ್ಲು ಅಳವಡಿಸಿ ಯಶಸ್ಸು ಕಂಡ ಜನರಾಡಿದ ಮಾತುಗಳೇ ಇದಕ್ಕೆ ಸ್ಫೂರ್ತಿಯಾಗಿದೆ. ಇನ್ನಷ್ಟು ಮನೆಗಳಲ್ಲಿ ಜನ ಮಳೆಕೊಯ್ಲು ಅಳವಡಿಸಿ ಮುಂದಿನ ದಿನಗಳಲ್ಲಿ ನೀರಿನ ಅಭಾವ ಮುಕ್ತ ಪರಿಸರವನ್ನು ನಮ್ಮದಾಗಿಸಿಕೊಳ್ಳಬೇಕೆಂಬುದೇ ಪತ್ರಿಕೆಯ ಆಶಯವಾಗಿದೆ.
ನಮ್ಮ ಕಳಕಳಿ
ಭವಿಷ್ಯದಲ್ಲಿಯೂ ಪ್ರತಿಯೊಬ್ಬರೂ ತಮ್ಮ ಮನೆ-ಕಚೇರಿ, ಸಮುದಾಯಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಳ್ಳಲು ಮುಂದಾಗಬೇಕು. ಆ ಮೂಲಕ ಬೇಸಗೆಯಲ್ಲಿ ಕಾಡುವ ಜಲಕ್ಷಾಮವನ್ನು ಹೋಗಲಾಡಿಸುವ ಜತೆಗೆ, ಅಂತರ್ಜಲ ವೃದ್ಧಿಗೂ ಕೈಜೋಡಿಸಬೇಕು ಎನ್ನುವುದು ಪತ್ರಿಕೆಯ ಕಳಕಳಿಯಾಗಿದೆ.