ಕೊಪ್ಪಳ : ಮದುವೆಯಾದ ಹದಿನೈದು ದಿನಗಳ ಬಳಿಕ ಗೊತ್ತುಪಡಿಸಲಾಗಿದ್ದ ಫಸ್ಟ್ ನೈಟ್ ನಲ್ಲೇ ನಡೆಯಿತೆನ್ನಲಾಗಿದ್ದ ವಧುವಿನ ಕುತೂಹಲಕರ ಅಪಹರಣ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ.
“ನನ್ನನ್ನು ಯಾರೂ ಕಿಡ್ ನ್ಯಾಪ್ ಮಾಡಿಲ್ಲ; ನಾನೇ ಖುದ್ದಾಗಿ, ಸ್ವ ಇಚ್ಛೆಯಿಂದಲೇ ಹೋಗಿದ್ದೆ’ ಎಂದು ನವ ವಿವಾಹಿತೆ ಗಾಯತ್ರಿ ಸ್ಪಷ್ಟಪಡಿಸಿದ್ದಾರೆ.
“ನಾನು ಈ ಮೊದಲೇ ಅಂಜು ಕುಮಾರ್ ಎಂಬವರನ್ನು ಮದುವೆಯಾಗಿದ್ದೆ; ಆದರೆ ಅವರು ಕಟ್ಟಿದ್ದ ತಾಳಿಯನ್ನು ಕಿತ್ತು ಹಾಕಿ ನನಗೆ ಸೋದರ ಮಾವನ ಜತೆಗೆ ಬಲವಂತದಿಂದ ಮದುವೆ ಮಾಡಿಸಿದ್ದರು. ಇದು ನನಗೆ ಇಷ್ಟವಿಲ್ಲದ ಮದುವೆಯಾಗಿತ್ತು; ಹಾಗಾಗಿ ಫಸ್ಟ್ ನೈಟ್ ಗೊತ್ತುಪಡಿಸಲಾಗಿದ್ದ ರಾತ್ರಿಯೇ ನಾನು ನನ್ನ ಮೊದಲ ಪತಿ, ಅಂಜು ಕುಮಾರ್ ಗೆ ಫೋನ್ ಮಾಡಿ ನನ್ನನ್ನು ಕರೆದೊಯ್ಯುವಂತೆ ಕೇಳಿಕೊಂಡೆ. ಆದುದರಿಂದ ಯಾರೂ ನನ್ನನ್ನು ಅಪಹರಿಸಿಲ್ಲ; ನಾನೇ ಸ್ವಂತ ಇಚ್ಛೆಯಿಂದ ಹೋಗಿದ್ದೆ; ನನಗೆ ನನ್ನ ಮೊದಲ ಪತಿ ಅಂಜುಕುಮಾರ್ ಜತೆಗೆ ಬದುಕಲು ಬಿಡಿ’ ಎಂದು ನವವಿವಾಹಿತೆ ಗಾಯತ್ರಿ ಬೇಡಿಕೊಂಡಿರುವುದಾಗಿ ವರದಿಯಾಗಿದೆ.
ಕಳೆದ ಸೆ.24ರಂದು ಗುಡೂರು ಗ್ರಾಮದ ಗಾಯತ್ರಿ ಮತ್ತು ಮಲ್ಲನಗೌಡ ಅವರ ವಿವಾಹವನ್ನು ಕುಟುಂಬದವರ ಸಮಕ್ಷಮ ಕುಷ್ಟಗಿತಾಲೂಕಿನ ಪುರದ ಸೋಮನಾಥ ದೇವಸ್ಥಾನದಲ್ಲಿ ನಡೆಸಲಾಗಿತ್ತು.
ಫಸ್ಟ್ ನೈಟ್ ನಂದು ಶೌಚಾಲಯಕ್ಕೆ ಹೋಗಿದ್ದಾಗ ವಧು ವನ್ನು ಅಪಹರಿಸಲಾಗಿತ್ತು ಎಂದು ಸುದ್ದಿಯಾಗಿರುವುದು ಸುಳ್ಳು ಎಂದು ಗಾಯತ್ರಿ ಹೇಳಿದ್ದಾರೆ.