Advertisement

ಮೊದಲು ರಾಷ್ಟ್ರಧರ್ಮ, ಆಮೇಲೆ ಜಾತಿ-ಧರ್ಮ: ನಿಜಗುಣಾನಂದ

05:12 PM Dec 18, 2023 | Team Udayavani |

ಹುಬ್ಬಳ್ಳಿ: ದೇವರು ನೀಡಿರುವ ಈ ಮನುಷ್ಯ ಜನ್ಮಕ್ಕೆ ಇಂದು ಔಷಧವೇ ಆಹಾರವಾಗಿದ್ದು ಇದೆಲ್ಲವೂ ಹೋಗಬೇಕಾಗಿದೆ ಎಂದು ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಹೇಳಿದರು.

Advertisement

ನವನಗರ ಎಪಿಎಂಸಿ ಎದುರಿನ ಈಶ್ವರನಗರದಲ್ಲಿ ರವಿವಾರ ಶ್ರೀ ಗಂಗಾ ಆರೋಗ್ಯ ಮಹಾಮನೆ ಮತ್ತು ಭಾರತೀಯ ಪಾರಂಪರಿಕ ವೈದ್ಯ ಪರಿಷತ್‌ ಸಂಸ್ಥಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಲೋಪಥಿಕ್‌ ಬರುವ ಮುನ್ನ ಯೋಗ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಎಲ್ಲವೂ ಸಹ ಕಲುಷಿತವಾಗಿದೆ. ಇದರಿಂದ ಮನುಷ್ಯ ಆಹಾರವನ್ನು ಆಹಾರವಾಗಿ ತಿನ್ನದೇ, ಔಷಧವನ್ನು ಆಹಾರವನ್ನಾಗಿ ತಿನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಭಾರತವನ್ನು ಉಳಿಸಿಕೊಂಡರೆ ಜಗತ್ತಿಗೆ ಎಲ್ಲವೂ ಸಿಗುತ್ತದೆ. ಭಾರತ ಹಾಳಾದರೆ ಎಲ್ಲವೂ ಪರಿತಪಿಸಬೇಕಾಗುತ್ತದೆ. ಮೊದಲು ರಾಷ್ಟ್ರ ಧರ್ಮ. ನಿಮ್ಮ ಜಾತಿ, ಧರ್ಮ ಆಮೇಲೆ. ಅನ್ನ, ನೀರು, ಶಿಕ್ಷಣ ಇದನ್ನು ಹಾಳು ಮಾಡಿಕೊಂಡರೆ ಈ ಜಗತ್ತೇ ಹಾಳಾಗಲಿದೆ. ಬದುಕಿಗಾಗಿ ಹೋರಾಟ ಮಾಡುವ ಏಕೈಕ ಪ್ರಾಣಿ ಎಂದರೆ ಅದು ಈ ಮನುಷ್ಯ. ಮನುಷ್ಯ ಶರೀರ ಬೆಳೆಸುತ್ತಿದ್ದಾನೆ, ಮನಸ್ಸು-ಆತ್ಮವನ್ನು ಸಾಯಿಸುತ್ತಿದ್ದಾನೆ ಎಂದು ಹೇಳಿದರು.

ಶಾಸಕ ಮಹೇಶ ಟೆಂಗಿನಕಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾರಂಪರಿಕ ವೈದ್ಯಕಿಯ ಎನ್ನುವುದು ಅತ್ಯಂತ ಹಳೆಯ ಪದ್ಧತಿಯಾಗಿದೆ. ದೇಶದ ಜನಸಾಮಾನ್ಯರಿಗೆ ಅತ್ಯಂತ ಉಪಯುಕ್ತವಾಗಿದೆ. ಈ ಪದ್ಧತಿ ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ತಲುಪುವಂತೆ ಮಾಡಬೇಕು ಎಂದರು.

ಶ್ರೀಗಂಗಾ ಆರೋಗ್ಯ ಮಹಾಮನೆ ಸಂಸ್ಥಾಪಕ ವೈದ್ಯಶ್ರೀ ಚನ್ನಬಸವಣ್ಣ ಪ್ರಾಸ್ತಾವಿಕ ಮಾತನಾಡಿ, ಭಾರತವು ಪಾರಂಪರಿಕ ವೈದ್ಯ ಪದ್ಧತಿಯನ್ನು ಕೇವಲ ವ್ಯಾಸಂಗ ಮಾಡಿ ಗುರುತಿಸಿಕೊಂಡಿಲ್ಲ. ಯುದ್ಧದಂತಹ ಸನ್ನಿವೇಶದಲ್ಲೂ ಕ್ಷಣಾರ್ಧದಲ್ಲಿ ವ್ಯಕ್ತಿಯನ್ನು ಆರಾಮ ಮಾಡುವ ಶಕ್ತಿ ಈ ಪದ್ಧತಿಗಿತ್ತು. ಇಂದು ಪಾರಂಪರಿಕ ವೈದ್ಯರು ತಮ್ಮ ಹಕ್ಕಿಗಾಗಿ ಹೋರಾಟ ಮಾಡಬೇಕಾದ ದಯನೀಯ ಸ್ಥಿತಿ ಬಂದಿದೆ. ಚೀನಾದಂತಹ ಜಗತ್ತಿನ ಅನೇಕ ಮುಂದುವರಿದ ದೇಶಗಳಲ್ಲಿ ಅಲ್ಲಿನ ಪಾರಂಪರಿಕ ವೈದ್ಯ ಪದ್ಧತಿ ಬಳಸಲಾಗುತ್ತದೆ. ಪಾರಂಪರಿಕ ವೈದ್ಯರ ಸಮಸ್ಯೆಗಳ ಬಗ್ಗೆ ವಿಧಾನಸಭೆ, ಲೋಕಸಭೆಯಲ್ಲಿ ಚರ್ಚೆಗಳಾಗಬೇಕು ಎಂದು
ಆಗ್ರಹಿಸಿದರು.

Advertisement

ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಶ್ರೀ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಪಾರಂಪರಿಕ ವೈದ್ಯರಿಗೆ ಇರುವ ಜ್ಞಾನ ಅಪಾರವಾದುದು. ಕ್ಯಾನ್ಸರ್‌ ಕೂಡ ಗುಣಪಡಿಸುವ ಶಕ್ತಿ ಅವರಲ್ಲಿದೆ. ಭಾರತೀಯ ಯೋಗ, ಔಷಧ ಪದ್ಧತಿ ವಿಶಿಷ್ಟವಾದದ್ದು. ಇದನ್ನು ಉಳಿಸಿಕೊಂಡು ಹೋಗಬೇಕು ಎಂದರು. ಬಸವ ಕಲ್ಯಾಣದ ನೀಲಾಂಬಿಕ ಬಸವ ಯೋಗ
ಕೇಂದ್ರದ ಶ್ರೀ ಸಿದ್ದರಾಮೇಶ್ವರ ಶರಣರು, ರೋಣದ ಜಮಾತೆ ಇಸ್ಲಾಮಿ ಹಿಂದ್‌ನ ಮೌಲಾನ ರಿಯಾಜ್‌ ಅಹ್ಮದ್‌, ಧಾರವಾಡ ಸೇಂಟ್‌ ಜೋಸ್‌ ಹೈಸ್ಕೂಲ್‌ ಪ್ರಾಂಶುಪಾಲ ಫಾದರ್‌ ಡಾ| ಮೈಕಲ್‌ ಡಿಸೋಜಾ ಇನ್ನಿತರರು ಮಾತನಾಡಿದರು.

ಭಾರತ ಸೇವಾ ಟ್ರಸ್ಟ್‌ ನ ಶ್ರೀಕಾಂತ ದುಂಡಿಗೌಡ್ರ, ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ಪಂಚಾಕ್ಷರಿ ಪಂಚಯ್ಯನವರ ಮಠ, ಡಾ| ಚಂದ್ರಮೌಳಿ ನಾಯ್ಕರ, ಭಾರತೀಯ ಪಾರಂಪರಿಕ ವೈದ್ಯ ಪರಿಷತ್‌ ಸಂಸ್ಥಾಪಕಿ ವೈದ್ಯಶ್ರೀ ಜ್ಯೋತಿ ಚನ್ನಬಸವಣ್ಣ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next