ಬೆಂಗಳೂರು: ನಾವು ಯಾವಾಗಲೂ ಪ್ರತಿಭೆ ಮತ್ತು ತಂತ್ರಜ್ಞಾನದ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ನಮ್ಮ ಮನಸ್ಸಿನಲ್ಲಿ ಮೊತ್ತ ಮೊದಲು ಹೊಳೆಯುವ ಹೆಸರೇ “ಬ್ರ್ಯಾಂಡ್ ಬೆಂಗಳೂರು” ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇದನ್ನೂ ಓದಿ:ಪುಲ್ವಾಮಾ ದಾಳಿ ಸಂಭ್ರಮಿಸಿದ್ದ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗೆ 5 ವರ್ಷ ಜೈಲು
ಅವರು ಬುಧವಾರ (ನವೆಂಬರ್ 02) ಬೆಂಗಳೂರು ಅರಮನೆ ಮೈದಾನದಲ್ಲಿ ಆರಂಭಗೊಂಡ 3 ದಿನಗಳ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿ ಮಾತನಾಡಿದರು.
ಸಿಲಿಕಾನ್ ಸಿಟಿಯಲ್ಲಿ ಬಿಲ್ಡ್ ಫಾರ್ ದಿ ವರ್ಲ್ಡ್ ಎಂಬ ಪರಿಕಲ್ಪನೆಯಡಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಲಾಗಿದೆ. ಆಸಕ್ತ ಹೂಡಿಕೆದಾರರನ್ನು ಸೆಳೆಯಲು ಮತ್ತು ಮುಂದಿನ ದಶಕದಲ್ಲಿ ಅಭಿವೃದ್ಧಿಯ ನೀಲಿನಕ್ಷೆಗೆ ಸಹಕಾರಿಯಾಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಕಳೆದ ವರ್ಷ ದೇಶದಲ್ಲಿ 84 ಬಿಲಿಯನ್ ಡಾಲರ್ ನೇರ ವಿದೇಶಿ ಹೂಡಿಕೆ ಆಗಿದೆ. ಕೋವಿಡ್, ಆರ್ಥಿಕ ಹೊಡೆತದಿಂದ ಇಡೀ ಜಗತ್ತೇ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರೂ ಕೂಡಾ ಭಾರತ ಎಲ್ಲಾ ರೀತಿಯಿಂದಲೂ ಭದ್ರವಾಗಿದೆ ಎಂದು ಪ್ರಧಾನಿ ಹೇಳಿದರು.
ಉದ್ಯಾನನಗರಿಯಲ್ಲಿ ನಡೆಯುತ್ತಿರುವ ಹೂಡಿಕೆದಾರರ ಸಮಾವೇಶದಲ್ಲಿ ಪ್ರತಿಷ್ಠಿತ ಕೈಗಾರಿಕೋದ್ಯಮಿಗಳಾದ ಕುಮಾರ್ ಮಂಗಲಂ ಬಿರ್ಲಾ, ಸಜ್ಜನ್ ಜಿಂದಾಲ್, ವಿಕ್ರಮ್ ಕಿರ್ಲೋಸ್ಕರ್ ಸೇರಿದಂತೆ ಹಲವು ಉದ್ಯಮಿಗಳು ಅತಿಥಿಗಳಾಗಿ ಪಾಲ್ಗೊಂಡಿದ್ದಾರೆ.