ಬೆಂಗಳೂರು: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಡಿರುವ ಆರೋಪ ಬೇಜವಾಬ್ದಾರಿತನದ್ದು ಎಂಬ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಕೋರ್ಟ್ ಆದೇಶಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇಲ್ಲವೇ ಎಂದು ಪ್ರಶ್ನಿಸಿದೆ.
ಇಂಧನ ಸಚಿವರ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪಿ.ಸಿ.ಮೋಹನ್, ವಿಧಾನ ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಮತ್ತು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಒದಗಿಸಿದ್ದಾರೆ. ಇಷ್ಟಿದ್ದರೂ ಬೇಜವಾಬ್ದಾರಿ ಹೇಳಿಕೆ ಎನ್ನುವ ಡಿ.ಕೆ.ಶಿವಕುಮಾರ್ ಅವರು ನಮ್ಮ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ.
ದಂಡ ಪ್ರಶ್ನಿಸಿ ಇಎಂಟಿಎ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಕೋರ್ಟ್, ಕಂಪೆನಿಗೆ 10 ಲಕ್ಷ ರೂ. ದಂಡ ವಿಧಿಸಿದ್ದಲ್ಲದೆ, ಅದನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ಕಳುಹಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿರಲಿಲ್ಲವೇ? ಈ ಅಕ್ರಮದ ಕುರಿತು ತಾವು ಅಥವಾ ಅಪರ ಕಾರ್ಯದರ್ಶಿ ಮಟ್ಟದ ಅಧಿಕಾರಿಯಿಂದ ತನಿಖೆ ಮಾಡಿ ತನಿಖೆಯ ಮಾಹಿತಿಯನ್ನು ಕೋರ್ಟ್‌ಗೆ ಸಲ್ಲಿಸಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ಆದೇಶಿಸಿರಲಿಲ್ಲವೇ? ವಿಚಾರಣೆ ಮುಗಿದ ಮೇಲೆ ಇದಕ್ಕೆ ಕಾರಣವಾಗಿರುವ ಕೆಪಿಸಿಎಲ್ ನಾಮಾಂಕಿತ ಅಧಿಕಾರಿಗಳ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಬೇಕು ಎಂದು ಹೇಳಿರಲಿಲ್ಲವೇ? ಈ ತೀರ್ಪು ಸಚಿವರಿಗೆ ಏಕೆ ಅರ್ಥವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ಯಾವುದೇ ಬೇಜವಾಬ್ದಾರಿ ಹೇಳಿಕೆ ನೀಡಿಲ್ಲ. ಕೋರ್ಟ್ ಆದೇಶಗಳು ಮತ್ತು ಸರ್ಕಾರದ ನಡವಳಿಕೆಗಳ ದಾಖಲೆಗಳನ್ನು ಮುಂದಿಟ್ಟು ಆರೋಪ ಮಾಡಿದ್ದಾರೆ. ಆದ್ದರಿಂದ ಯಡಿಯೂರಪ್ಪ ಆರೋಪವನ್ನು ತಳ್ಳಿಹಾಕುವ ಮುನ್ನ ಅವರು ದಾಖಲೆಗಳನ್ನು ಪರಿಶೀಲಿಸಲಿ ಎಂದು ಸಲಹೆ ಮಾಡಿದ್ದಾರೆ.