Advertisement

ಡಾ|ಜೋಶಿ ಆಸ್ಪತ್ರೆಯಿಂದ ಫ‌ಸ್ಟ್‌ ಲೈಟ್ ಅಭಿಯಾನ

11:47 AM Jun 29, 2019 | Team Udayavani |

ಹುಬ್ಬಳ್ಳಿ: ಅವಧಿಗೆ ಮುನ್ನ ಜನಿಸಿದ ಶಿಶುಗಳ ಕಣ್ಣಿನ ರಕ್ಷಣೆಗಾಗಿ ಮೈಕ್ರೊಫಿನಿಷ್‌ ಸಂಸ್ಥೆ ಸಹಯೋಗದಲ್ಲಿ ಡಾ| ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ‘ಫಸ್ಟ್‌ ಲೈಟ್’ ಅಭಿಯಾನ ಹಮ್ಮಿಕೊಂಡಿದೆ ಎಂದು ನೇತ್ರ ತಜ್ಞ ಡಾ| ಎ.ಎಸ್‌. ಗುರುಪ್ರಸಾದ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಧಿಗೆ ಮುನ್ನ ಜನಿಸಿದ ಹಾಗೂ ಕಡಿಮೆ ತೂಕದೊಂದಿಗೆ ಜನಿಸಿದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇದರಿಂದಾಗಿ ಶಿಶುಗಳು ಜೀನವಪೂರ್ತಿ ಅಂಧತ್ವದಿಂದ ಬಳಲುವ ಸಾಧ್ಯತೆಯಿಂದಾಗಿ ಇದನ್ನು ಗಂಭೀರವಾಗಿ ಪರಿಗಣಿಸುವುದು ಅವಶ್ಯ ಎಂದರು.

ದಿನ ತುಂಬುವ ಮುನ್ನ ಜನಿಸಿದ ಹಲವು ಶಿಶುಗಳಲ್ಲಿ ಎಲ್ಲ ಅಂಗಾಂಗಗಳು ಸಮರ್ಪಕವಾಗಿ ಬೆಳೆದಿರಲ್ಲ. ಎಲ್ಲ ಅಂಗಾಂಗಗಳ ಪರೀಕ್ಷೆ ಮಾಡಿಸಬೇಕು. ಅದೇ ರೀತಿ ಕಣ್ಣಿನ ತಪಾಸಣೆ ಮಾಡಿಸುವುದು ಅವಶ್ಯ. ಕಣ್ಣು ಕೂಡ ಅಕ್ಷಿಪಟಲವು ರಕ್ತನಾಳಗಳಿಲ್ಲದೆ ನಿರ್ಮಾಣಗೊಂಡಿರುತ್ತದೆ. ಅಕ್ಷಿಪಟಲದ ರಕ್ತನಾಳಗಳ ಅಸಹಜ ಬೆಳವಣಿಗೆ ಅಂಧತ್ವಕ್ಕೆ ಕಾರಣವಾಗುತ್ತದೆ. ರಕ್ತ ಸ್ರವಿಕೆ ಹಾಗೂ ಅಕ್ಷಿಪಟಲದಲ್ಲಿ ದುರ್ಮಾಂಸ ಬೆಳೆಯುವುದರಿಂದ ದೃಷ್ಟಿಗೆ ಹಾನಿಯಾಗುತ್ತದೆ ಎಂದು ತಿಳಿಸಿದರು.

ಗರ್ಭವಾಸದ ಅವಧಿ ಹಾಗೂ ಜನಿಸಿದ ವೇಳೆಯಲ್ಲಿ ಶಿಶುವಿನ ತೂಕ ಇವೆರಡು ಅಂಶಗಳು ರೆಟಿನೋಪಥಿ ಆಫ್‌ ಪ್ರಿಮ್ಯಾಚುರಿಟಿಯ ಗಂಭೀರತೆಯನ್ನು ನಿರ್ಧರಿಸುತ್ತದೆ. 34 ವಾರಗಳಿಗೂ ಮುಂಚೆ ಜನಿಸಿದ ಹಾಗು ಜನಿಸಿದಾಗ 1700 ಗ್ರಾಮ್‌ಗಳಿಗಿಂತ ಕಡಿಮೆ ತೂಕ ಹೊಂದಿದ ಮಕ್ಕಳ ಕಣ್ಣುಗಳನ್ನು ನುರಿತ ನೇತ್ರ ತಜ್ಞರಿಂದ ತಪಾಸಣೆ ಮಾಡಿಸುವುದು ಅವಶ್ಯ ಎಂದರು.

ಅಂಕಿ ಅಂಶಗಳ ಪ್ರಕಾರ 2018ರಲ್ಲಿ 47 ದಶಲಕ್ಷ ಮಕ್ಕಳ ಜನನವಾಗಿದೆ. ಅವುಗಳಲ್ಲಿ ಶೇ.13ಮಕ್ಕಳು ದಿನ ತುಂಬುವ ಮೊದಲೇ ಜನಿಸಿವೆ. 16 ದಶಲಕ್ಷ ಶಿಶುಗಳು 2 ಕೆ.ಜಿಗಿಂತ ಕಡಿಮೆ ತೂಕ ಹೊಂದಿದ್ದವು. ದೇಶದಲ್ಲಿ ಕೇವಲ 24,000 ನೇತ್ರ ತಜ್ಞರಿದ್ದು, ಅವರಲ್ಲಿ ಅಕ್ಷಿಪಟಲ ತಜ್ಞರ ಸಂಖ್ಯೆ ಕೇವಲ 1200. ಅವರಲ್ಲಿ ಪರಿಣಿತರು ಕೇವಲ 150ರಷ್ಟಿದ್ದಾರೆ. ತಜ್ಞ ವೈದ್ಯರ ಕೊರತೆ ಹಾಗೂ ಅರಿವಿನ ಕೊರತೆಯಿಂದ ಶಿಶುಗಳಿಗೆ ಸಮರ್ಪಕವಾಗಿ ಕಣ್ಣಿನ ತಪಾಸಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನುಡಿದರು.

Advertisement

ಡಾ| ಶ್ರೀನಿವಾಸ ಜೋಶಿ ಮಾತನಾಡಿ, ರೆಟಿನೋಪಥಿ ಆಫ್‌ ಪ್ರಿಮ್ಯಾಚುರಿಟಿ ಸಮಸ್ಯೆ ಪತ್ತೆ ಮಾಡಲು ನೂತನ ತಂತ್ರಜ್ಞಾನದ ರೆಟ್ಕ್ಯಾಮ್‌ ಶಟಲ್ ಯಂತ್ರ ಬಳಸಲಾಗುತ್ತದೆ. ಅಮೆರಿಕದಿಂದ ಯಂತ್ರವನ್ನು ಆಮದು ಮಾಡಿಕೊಳ್ಳಲಾಗಿದ್ದು, ಇದನ್ನು ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬೆಳಗಾವಿ ಜಿಲ್ಲೆಗಳಲ್ಲಿ ಶಿಶುಗಳ ಕಣ್ಣುಗಳನ್ನು ತಪಾಸಣೆ ಮಾಡಲಾಗುವುದು. ಅಲ್ಲಿಂದ ಟೆಕ್ನಿಶಿಯನ್‌ ಯಂತ್ರದ ನೆರವಿನಿಂದ ಶಿಶುವಿನ ಕಣ್ಣುಗಳ ಇಮೇಜ್‌ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಗೆ ಕಳಿಸುತ್ತಾರೆ. ಇಲ್ಲಿ ಇಮೇಜ್‌ ಪರೀಕ್ಷಿಸಿ ಚಿಕಿತ್ಸೆ ಕುರಿತು ಶಿಶುವಿನ ಪಾಲಕರಿಗೆ ತಿಳಿಸಲಾಗುತ್ತದೆ. ಯಂತ್ರವನ್ನು ಜೋಡಿಸಲ್ಪಟ್ಟ ವಾಹನ ವಿವಿಧ ಜಿಲ್ಲೆಗಳಲ್ಲಿ ಪ್ರಯಾಣ ಮಾಡುವುದು ಎಂದರು.

ಉಚಿತವಾಗಿ ತಪಾಸಣೆ ಮಾಡಲಾಗುತ್ತಿದ್ದು, ಬಡಜನರಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಲಾಗುವುದು. ಉದ್ಯಮಿಗಳ ಪ್ರೋತ್ಸಾಹ ದೊರೆತರೆ ಹೆಚ್ಚಿನ ಜನರಿಗೆ ಉಚಿತವಾಗಿ ಚಿಕಿತ್ಸೆ ಕಲ್ಪಿಸಲು ಸಾಧ್ಯವಾಗುತ್ತದೆ. ಶಿಶುಗಳ ನೇತ್ರ ರಕ್ಷಣೆ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಎಂದು ಅಭಿಪ್ರಾಯಪಟ್ಟರು.

ಮೈಕ್ರೊಫಿನಿಶ್‌ ಸಂಸ್ಥೆಯ ಮಹೇಂದ್ರ ವಿಕಂಶಿ ಮಾತನಾಡಿ, ನಮ್ಮ ಸಂಸ್ಥೆ ಸಿಎಸ್‌ಆರ್‌ ಅನುದಾನ 90 ಲಕ್ಷ ರೂ.ವೆಚ್ಚದಲ್ಲಿ ಡಾ| ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಗೆ ರೆಟ್ಕ್ಯಾಮ್‌ ಶಟಲ್ ಹಾಗೂ ಅದರ ಸೇವೆಗೆ ವಾಹನವನ್ನು ಉಚಿತವಾಗಿ ನೀಡಿದೆ. ದಿನ ತುಂಬುವ ಮುನ್ನವೇ ಜನಿಸುವ ಮಕ್ಕಳ ಕಣ್ಣಿನ ತಪಾಸಣೆಯ ಅಭಿಯಾನಕ್ಕೆ ಕೈಜೋಡಿಸುತ್ತಿರುವುದು ನಮಗೆ ಹೆಮ್ಮೆ ತಂದಿದೆ ಎಂದರು. ಡಾ|ಎಂ.ಎಂ.ಜೋಶಿ, ಅನುಪಮಾ ವಿಕಂಶಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ಶಿಶುಗಳ ಕಣ್ಣಿನ ಸಮಸ್ಯೆಯನ್ನು ಪತ್ತೆ ಮಾಡುವ ನವೀನ ತಂತ್ರಜ್ಞಾನದ ರೆಟ್ಕಮ್‌ ಶಟಲ್ ಯಂತ್ರವನ್ನು ಸೇವೆಗೆ ಮುಕ್ತಗೊಳಿಸಲಾಯಿತು. ಡಾ| ಎಂ.ಎಂ.ಜೋಶಿ, ಡಾ| ಎ.ಎಸ್‌.ಗುರುಪ್ರಸಾದ, ಡಾ|ಶ್ರೀನಿವಾಸ ಜೋಶಿ, ಮಹೇಂದ್ರ ವಿಕಂಶಿ, ಅನುಪಮಾ ವಿಕಂಶಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next