Advertisement
ಸುಳ್ಳು ಹೇಳಿದ ಮಹೇಶ್: ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸರ್ಕಾರದ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಸದನದಲ್ಲಿದ್ದು ಸರ್ಕಾರಕ್ಕೆ ಬೆಂಬಲ ನೀಡುವಂತೆ ಅವರಿಗೆ ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಸೂಚಿಸಿದ್ದರು. ಆದರೆ ಮಹೇಶ್ ಅವರು, ತಟಸ್ಥರಾಗಿರುವಂತೆ ಮಾಯಾವತಿ ಅವರು ಹೇಳಿದ್ದರು ಎಂದು ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಅವರು ಸದನಕ್ಕೆ ಗೈರು ಹಾಜರಾಗಿದ್ದರು ಎಂದು ಆರೋಪಿಸಿದರು.
Related Articles
Advertisement
ಸಮ್ಮಿಶ್ರ ಸರ್ಕಾರದ ಪರ ಮತ ನೀಡಿದರೆ ವೀರಶೈವರು ನನಗೆ ಓಟ್ ಹಾಕಲ್ಲ: ಆಗ ಮೊಬೈಲ್‌ನಲ್ಲಿ ಮಾತನಾಡಿದ ಎನ್. ಮಹೇಶ್ ನಾನೀಗ ಸಮ್ಮಿಶ್ರ ಸರ್ಕಾರದ ಪರ ಮತ ಹಾಕಿದರೆ ಕ್ಷೇತ್ರದಲ್ಲಿರುವ ವೀರಶೈವರು ನನಗೆ ಮುಂದಿನ ಚುನಾವಣೆಯಲ್ಲಿ ಮತ ಹಾಕುವುದಿಲ್ಲ. ಈ ಸರ್ಕಾರ ಹೇಗೂ ಉಳಿಯುವುದಿಲ್ಲ. ಮುಂದೆ ಬಿಜೆಪಿ ಸರ್ಕಾರ ಬರುತ್ತದೆ. ನಾನೇನಾದರೂ ಜೆಡಿಎಸ್ ಪರ ಮತ ಹಾಕಿದರೆ ಬಿಜೆಪಿ ಸರ್ಕಾರ ಅನುದಾನ ನೀಡುವುದಿಲ್ಲ. ಹಾಗಾಗಿ ನಾನು ಸದನಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿದರು ಎಂದು ಕೃಷ್ಣಮೂರ್ತಿ ಹೇಳಿದರು.
ಮಾತು ತಪ್ಪಿದಕ್ಕೆ ಉಚ್ಚಾಟನೆ: ತಾವು ಮತ ಹಾಕಿದರೂ ಸರ್ಕಾರ ಉಳಿಯುವುದಿಲ್ಲ ಎಂದು ಮಹೇಶ್ ಹೇಳಿದ್ದಾರೆ. ಸರ್ಕಾರ ಉಳಿಯುತ್ತಾ ಬೀಳುತ್ತಾ ಎಂಬುದು ಮುಖ್ಯವಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಹೇಳಿದರೂ, ಆ ಪಕ್ಷದ ಶಾಸಕ ಅವರ ಮಾತನ್ನು ಧಿಕ್ಕರಿಸಿದ ಕಾರಣ ಅವರು ಪಕ್ಷದಿಂದ ಉಚ್ಚಾಟನೆ ಮಾಡಿದರು ಎಂದು ತಿಳಿಸಿದರು.
ರಾಜ್ಯದ ಜನತೆಗೆ ಕ್ಷಮೆ ಕೇಳಬೇಕು: ಉಚ್ಚಾಟನೆ ಮಾಡಿದ ನಂತರ, ದೆಹಲಿಗೆ ತೆರಳಿ ಮಾಯಾವತಿಯವರ ಬಳಿ ಕೋರಿಕೆ ಸಲ್ಲಿಸಿ ಉಚ್ಛಾಟನೆ ಹಿಂತೆಗೆದು ಕೊಳ್ಳುವಂತೆ ಅವರು ಮನವಿ ಮಾಡಿ ಕ್ಷಮೆ ಯಾಚಿಸಬಹುದಿತ್ತು. ಆದರೆ ಇದುವರೆಗೂ ಮಾಯಾವತಿಯರನ್ನು ಭೇಟಿಯಾಗಿಲ್ಲ. ತಮ್ಮ ಬಳಿ ತಪ್ಪುಗಳನ್ನಿಟ್ಟುಕೊಂಡು ಪಕ್ಷದ ವಿಷಯದಲ್ಲಿ ಸುಳ್ಳು ಹೇಳಿರುವುದರಿಂದ ಮಹೇಶ್ ಅವರು ರಾಜ್ಯದ ಜನತೆಯ ಹಾಗೂ ಬಿಎಸ್‌ಪಿ ಕಾರ್ಯಕರ್ತರ ಕ್ಷಮೆ ಕೇಳಬೇಕು ಎಂದು ರಾಜ್ಯಾಧ್ಯಕ್ಷರು ಒತ್ತಾಯಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಹೇಶ್ ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕರಾಗಿ ಕೊಳ್ಳೇಗಾಲ ಕ್ಷೇತ್ರದಲ್ಲಿ 71 ಸಾವಿರ ಮತಗಳನ್ನು ಪಡೆದ ಮಹೇಶ್ ಅವರು, ಲೋಕಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ 13600 ಮತಗಳನ್ನು ಗಳಿಸಿಕೊಡುತ್ತಾರೆ. ಇದರ ಅರ್ಥವೇನು? ಎಂದು ಮರು ಪ್ರಶ್ನಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಇ. ಮಂಜುನಾಥ್, ಪ್ರಧಾಯ ಕಾರ್ಯದರ್ಶಿ ದೇವರಾಜು ಕಪ್ಪಸೋಗೆ ಇದ್ದರು.
ಸೂಚ್ಯವಾಗಿ ಬಿಜೆಪಿಗೆ ಮಹೇಶ್ ಬೆಂಬಲ?ಚಾಮರಾಜನಗರ: ಬಿಜೆಪಿ ಪರವಾಗಿ ಶಾಸಕರು ಹೊರ ರಾಜ್ಯಗಳಿಗೆ ಹೋದ ಸಂದರ್ಭದಲ್ಲೇ ಬಿಎಸ್‌ಪಿ ಶಾಸಕರೂ ಕಾಣೆಯಾದರೆ ಅದಕ್ಕೆ ಬಿಜೆಪಿಯೇ ಕಾರಣ ತಾನೇ? 12 ಜನರಿಗೆ ಕಚ್ಚಿರುವ ಮಲೇರಿಯಾ ಸೊಳ್ಳೆಯೇ ಇವರಿಗೂ ಕಚ್ಚಿರುವುದೂ ತಾನೇ? ಎಂದು ಸೂಚ್ಯವಾಗಿ ಬಿಜೆಪಿಗೆ ಮಹೇಶ್ ಬೆಂಬಲ ನೀಡಿದ್ದಾರೆ ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಆರೋಪಿಸಿದರು. ಸದನಕ್ಕೆ ಹೋಗದೇ ತಟಸ್ಥನಾಗಿರುತ್ತೇನೆ ಎಂದು ಎನ್. ಮಹೇಶ್ ಹೇಳುತ್ತಾರೆ. ಒಂದು ಸರ್ಕಾರದ ಅಳಿವು ಉಳಿವಿನ ಸಂದರ್ಭದಲ್ಲಿ ಮಾತನಾಡಲು ಬಾರದಿರುವ ಶಾಸಕರೇ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಇಂತಿರುವಾಗ ಪ್ರಜಾಪ್ರಭುತ್ವ, ಅಂಬೇಡ್ಕರ್ ವಾದದ ಬಗ್ಗೆ ಮಾತನಾಡುವ ಶಾಸಕ ಮಹೇಶ್ ಅವರು ಚರ್ಚೆಯಲ್ಲಿ ಪಾಲ್ಗೊಳ್ಳದೇ, ಧ್ಯಾನ ಮಾಡಲು ಎಲ್ಲೋ ಹೋಗಿದ್ದೆ ಎನ್ನುವುದು ಎಷ್ಟು ಸರಿ? ಎಂದರು. ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದು ತೋರಿಸಲಿ
ಚಾಮರಾಜನಗರ: ಬಿಎಸ್‌ಪಿಗೆ ತಮ್ಮ ಬೆಂಬಲಿಗರ ರಾಜೀನಾಮೆ ಕೊಡಿಸುವ ಮೂಲಕ ಎನ್. ಮಹೇಶ್ ಅವರು ಸಣ್ಣತನ ತೋರಿದ್ದಾರೆ. ಹಾಗಿದ್ದ ಮೇಲೆ ಇವರು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ, ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಸವಾಲು ಹಾಕಿದರು. ಮಾಯಾವತಿಯವರು ಸದನಕ್ಕೆ ಹಾಜರಾಗಲು ನನಗೆ ತಿಳಿಸಿಲ್ಲ. ಅವರ ಟ್ವೀಟ್ ಅನ್ನು ನಾನು ನೋಡಿಲ್ಲ. ನನಗೆ ಫೇಸ್‌ಬುಕ್, ವಾಟ್ಸ್‌ಆ್ಯಪ್ ಬಳಸಲು ಸರಿಯಾಗಿ ಗೊತ್ತಿಲ್ಲ ಎಂದು ಮಹೇಶ್ ಹೇಳಿದ್ದಾರೆ. ಆದರೆ ಸದನದಲ್ಲಿ ಒಮ್ಮೆ ಮೊಬೈಲ್ ನಲ್ಲಿ ಫೋಟೋ ನೋಡುತ್ತಿದ್ದ ದೃಶ್ಯವನ್ನು ಮಾಧ್ಯಮಗಳು ಸೆರೆ ಹಿಡಿದಾಗ, ನನ್ನ ಮಗನಿಗೆ ವಧು ನೋಡಲು ವಾಟ್ಸ್‌ಆ್ಯಪ್‌ನಲ್ಲಿ ಫೋಟೋ ಕಳುಹಿಸಿದ್ದರು ಅದನ್ನು ನೋಡುತ್ತಿದ್ದೆ ಎಂದಿದ್ದರು! ವಾಟ್ಸ್‌ಆ್ಯಪ್ ಗೊತ್ತಿಲ್ಲದವರು ಸದನದಲ್ಲಿ ಹೇಗೆ ಬಳಸುತ್ತಿದ್ದರು? ಎಂದು ಕೃಷ್ಣಮೂರ್ತಿ ವ್ಯಂಗ್ಯವಾಡಿದರು.