Advertisement

ಮೊದಲು ತಿಳಿವಳಿಕೆ-ನಂತರ ದಂಡ

10:32 AM May 08, 2019 | Team Udayavani |

ಧಾರವಾಡ: ಸರಕು ಸಾಗಾಣಿಕೆ ವಾಹನದಲ್ಲಿ ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರನ್ನು ಕರೆದೊಯ್ಯುವವರಿಗೆ ದಂಡ ವಿಧಿಸಿ, ವಾಹನ ಜಪ್ತಿ ಮಾಡುವಂತೆ ಡಿಸಿ ದೀಪಾ ಚೋಳನ್‌ ಸೂಚನೆ ಮೇರೆಗೆ ನಗರ ಸಂಚಾರಿ ಠಾಣೆ ಪೊಲೀಸರು ಪ್ರಮುಖ ಸ್ಥಳಗಳಲ್ಲಿ ‘ಮೊದಲು ತಿಳಿವಳಿಕೆ-ನಂತರ ದಂಡ’ ಕಾರ್ಯಕ್ರಮವನ್ನು ಮಂಗಳವಾರದಿಂದ ಆರಂಭಿಸಿದ್ದಾರೆ.

Advertisement

ಮಹಾನಗರ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ ಹಾಗೂ ಸಹಾಯಕ ಪೊಲೀಸ್‌ ಆಯುಕ್ತ ಎಂ.ಎನ್‌. ರುಪ್ರಪ್ಪ ಮಾರ್ಗದರ್ಶನದಲ್ಲಿ ಬೆಳಗ್ಗೆ 9 ಗಂಟೆಯಿಂದ ಸಿಪಿಐ ಮುರಗೇಶ ಚನ್ನಣ್ಣವರ ನೇತೃತ್ವದಲ್ಲಿ 7 ತಂಡಗಳು ಕಾರ್ಯಾಚರಣೆ ಕೈಗೊಂಡಿದ್ದು, ಮೂರುದಿನಗಳ ಕಾಲ ಜಾಗೃತಿ ಅಭಿಯಾನ ನಡೆಯಲಿದೆ.

ಪ್ರತಿ ತಂಡದಲ್ಲಿ ಓರ್ವ ಎಎಸ್‌ಐ ಹಾಗೂ ಇಬ್ಬರು ಸಂಚಾರಿ ಪೊಲೀಸ್‌ ಪೇದೆಗಳಿದ್ದಾರೆ. ಧಾರವಾಡ ನಗರಕ್ಕೆ ಬಂದು ಸೇರುವ ಮುಖ್ಯ ರಸ್ತೆಗಳಾಗಿರುವ ಸವದತ್ತಿ, ಬೆಳಗಾವಿ, ಹಳಿಯಾಳ, ಅಳ್ನಾವರ, ಕಲಘಟಗಿ ಮತ್ತು ನವಲಗುಂದ ರಸ್ತೆಗಳಲ್ಲಿ ಹಾಗೂ ಕೂಲಿಕಾರ್ಮಿಕರು ಹೆಚ್ಚಾಗಿ ಸೇರುವ ಜನಸಂದಣಿ ಪ್ರದೇಶ ಆಗಿರುವ ನಗರ ಬಸ್‌ ನಿಲ್ದಾಣದಲ್ಲಿ ಪ್ರತ್ಯೇಕ ತಂಡಗಳಾಗಿ ಜನಜಾಗೃತಿ ಮೂಡಿಸಲಾಗುತ್ತಿದೆ.

ಮೊದಲ ಸಲ ಯಾವುದೇ ದಂಡ ವಿಧಿಸದೆ ತಿಳಿವಳಿಕೆ ನೀಡಿ ವಾಹನದ ನಂಬರ್‌ ತೆಗೆದುಕೊಂಡು ಕಳಿಸಲಾಗುತ್ತಿದೆ. ನಂತರ ಅದೇ ವಾಹನ, ಚಾಲಕ ಅಂತಹ ತಪ್ಪು ಮಾಡಿದರೆ ಸೂಕ್ತ ದಂಡ ವಿಧಿಸಿ, ವಾಹನ ಜಪ್ತಿ ಮಾಡಲಾಗುತ್ತದೆ ಎಂದು ಸಿಪಿಐ ಮುರಗೇಶ ಚನ್ನಣ್ಣವರ ಎಚ್ಚರಿಕೆ ನೀಡಿ ಚಾಲಕರನ್ನು ಕಳಿಸಿದರು.

208 ಪ್ರಕರಣಗಳಲ್ಲಿ ದಂಡ: ಪ್ರಾದೇಶಿಕ ಸಾರಿಗೆ ವ್ಯಾಪ್ತಿಯ ಪೂರ್ವ ಮತ್ತು ಪಶ್ಚಿಮ ವಿಭಾಗದ ಪ್ರದೇಶಗಳಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಏ.1ರಿಂದ ಮೇ 5ರ ವರೆಗೆ ಸರಕು ಸಾಗಾಣಿಕೆ ವಾಹನ, ಕಟ್ಟಡ ಸಾಮಗ್ರಿ ಸಾಗಾಣಿಕೆ ವಾಹನಗಳಲ್ಲಿ ಜನರನ್ನು ಕೊಂಡೊಯ್ಯುತ್ತಿರುವುದನ್ನು ತಪಾಸಣೆ ಕೈಗೊಂಡು 208 ಪ್ರಕರಣಗಳಲ್ಲಿ ದಂಡ ವಿಧಿಸಿದ್ದಾರೆ.

Advertisement

ಧಾರವಾಡ ಪಶ್ಚಿಮ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಿಂದ 1,105 ವಾಹನಗಳನ್ನು ತಪಾಸಣೆ ಮಾಡಿದ್ದು, ನಿಯಮಬಾಹಿರವಾಗಿ ಜನರನ್ನು ಕೊಂಡೊಯ್ಯುತ್ತಿರುವ 89 ಪ್ರಕರಣಗಳು ಹಾಗೂ ಶುಲ್ಕ ಪಡೆದು ಪ್ರಯಾಣಿಕರನ್ನು ಕೊಂಡೊಯ್ಯುತಿರುವ 5 ಪ್ರಕರಣಗಳು ಸೇರಿ ಒಟ್ಟು 94 ಪ್ರಕರಣಗಳನ್ನು ದಾಖಲಿಸಿ, 3 ವಾಹನಗಳನ್ನು ಜಪ್ತಿ ಮಾಡುವುದರ ಜೊತೆಗೆ ಒಟ್ಟು 74,600 ರೂ. ದಂಡ ವಸೂಲಿ ಮಾಡಿದ್ದಾರೆ.

ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಿಂದ 1,155 ವಾಹನಗಳನ್ನು ತಪಾಸಿಸಿ ನಿಯಮಬಾಹಿರವಾಗಿ ಜನರನ್ನು ಕೊಂಡೊಯ್ಯುತ್ತಿರುವ 114 ಪ್ರಕರಣಗಳು ದಾಖಲಿಸಿ, 10 ವಾಹನಗಳನ್ನು ಜಪ್ತಿ ಮಾಡಿ, ಒಟ್ಟು 1,02,600 ರೂ. ದಂಡ ವಸೂಲಿ ಮಾಡಿದ್ದಾರೆ.

ಒಟ್ಟಾರೆ ಧಾರವಾಡ ಪಶ್ಚಿಮ-ಪೂರ್ವ (ಹುಬ್ಬಳ್ಳಿ) ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಿಂದ ಒಟ್ಟು 2,260 ವಾಹನಗಳನ್ನು ತಪಾಸಣೆ ಕೈಗೊಂಡು, 13 ವಾಹನಗಳನ್ನು ಜಪ್ತಿ ಮಾಡುವುದರ ಜೊತೆಗೆ 1,77,200 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಂದ್ರ ಕವಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next