ಹೊಸದಿಲ್ಲಿ: ದೇಶೀಯವಾಗಿ ತಯಾರಿಸಲಾದ ಮೊದಲ ಕೋವಿಡ್-19 ಲಸಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ “ಕೊವಾಕ್ಸಿನ್’ (Covaxin) ನ ಮನುಷ್ಯರ ಮೇಲಣ ಪ್ರಯೋಗ ಪರೀಕ್ಷೆ ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆ ಸಹಿತ ದೇಶದ 12 ಸಂಸ್ಥೆಗಳಲ್ಲಿ ಶೀಘ್ರವೇ ಆರಂಭವಾಗಲಿದೆ.
ಲಸಿಕೆಯನ್ನು ಬೇಗನೇ ಬಳಕೆಗೆ ತರುವ ಉದ್ದೇಶದಿಂದ ಎಲ್ಲ ಪರೀಕ್ಷೆ ಗಳನ್ನು ತ್ವರಿತಗತಿಯಲ್ಲಿ ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್) ತಿಳಿಸಿದೆ. ಪ್ರಯೋಗ ಯಶಸ್ವಿಯಾದರೆ ಆ.15ರ ಒಳಗಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುವಂತೆಯೂ ಸೂಚಿಸ ಲಾಗಿದೆ.
ಐಸಿಎಂಆರ್, ಹೈದರಾಬಾದ್‌ನ ಭಾರತ್ ಬಯೋಟೆಕ್ ಇಂಟರ್ ನ್ಯಾಶನಲ್ ಲಿ. (ಬಿಬಿಐಎಲ್) ಪರಸ್ಪರ ಕೈ ಜೋಡಿಸಿ ತಯಾರಿಸಿರುವ ಹೊಸ ಲಸಿಕೆಯು ಕೇಂದ್ರ ಸರಕಾರದ ಮಹತ್ವದ ಗುರಿಗಳಲ್ಲೊಂದು. ಹಾಗಾಗಿ ಲಸಿಕೆಯ ಗುಣಮಟ್ಟ ಮತ್ತು ಪರಿಣಾಮಕಾರಿತ್ವಗಳನ್ನು ಗರಿಷ್ಠ ಮಟ್ಟದಲ್ಲಿ ಪರೀಕ್ಷಿಸಲಾಗುತ್ತಿದೆ ಎಂದು ಐಸಿಎಂಆರ್ ತಿಳಿಸಿದೆ.
ಪುಣೆಯ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಸಂರಕ್ಷಿಸಿಡಲಾಗಿದ್ದ ಸಾರ್ಸ್ ಕೋವ್-2 ವೈರಾಣು ಅಂಶದಿಂದ ಲಸಿಕೆ ತಯಾರಿಸಿ ಅನಂತರ ಅಭಿವೃದ್ಧಿ ಪಡಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಇದೇವೇಳೆ ಅಹ್ಮದಾಬಾದ್‌ನ ಝೈಡಸ್ ಕ್ಯಾಡಿಲಾ ಹೆಲ್ತ್‌ಕೇರ್ ಸಂಸ್ಥೆ ತಯಾರಿಸಿರುವ ಲಸಿಕೆಯ 2 ಹಂತಗಳ ಪ್ರಯೋಗಕ್ಕೆ ಕೂಡ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಜಿಸಿಐ) ಒಪ್ಪಿಗೆ ನೀಡಿದೆ.
ಸುಮಾರು 100 ರಿಂದ 200 ಜನರ ಮೇಲೆ ಮಾಡುವ ಪ್ರಯೋಗದ ಪರಿಣಾಮ ಗುರುತಿಸಿದ ಬಳಿಕ ಈ ಔಷಧವನ್ನು ಸಾರ್ವಜನಿಕರಿಗೆ ಲಭ್ಯ ವಾಗುವಂತೆ ಮಾಡಲಾಗುತ್ತದೆ. ಮುಂದಿನ ವಾರದಿಂದ ಇದರ ಪ್ರಯೋಗ ನಡೆಯಲಿದೆ.
– ಡಾ| ಅಮಿತ್ ಭಾತೆ,
ಜೀವನ ರೇಖಾ ಆಸ್ಪತ್ರೆ ನಿರ್ದೇಶಕ