ನವದೆಹಲಿ: ಭಾರತೀಯ ನಾಗರಿಕ ವಿಮಾನಯಾನ ರಂಗದಲ್ಲಿನ್ನು ಸ್ವದೇಶಿ ನಿರ್ಮಿತ ವಿಮಾನಗಳು ಹಾರಾಡುವ ಕಾಲ ಬಂದಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೊನಾಟಿಕಲ್ಸ್ ಲಿಮಿಟೆಡ್ (ಎಚ್‌ಎಎಲ್) ತಯಾರಿಸಿರುವ ಡೋರ್ನಿಯರ್ ಡೂ 228 ಮಾದರಿಯ ವಾಯುಪಡೆಯ ವಿಮಾನಗಳನ್ನು ದೇಶೀಯ ವಿಮಾನ ಯಾನ ಸೇವೆಗೆ ಬಳಸುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಒಪ್ಪಿಗೆ ಸೂಚಿಸಿದೆ. ಪರಿಣಾಮ, ಇನ್ನೊಂದು ವರ್ಷದಲ್ಲಿ ಈ ವಿಮಾನಗಳು ಭಾರತೀಯ ಬಾನಂಗಳಕ್ಕೆ ಹಾರಲಿವೆ.
ವಾಯು ಸೇನೆಯಲ್ಲಿ ಬಳಕೆ: ಅಸಲಿಗೆ, ಈ ಡೋರ್ನಿಯರ್ ವಿಮಾನಗಳು ವಾಯು ಸೇನೆಯಲ್ಲಿ ಬಳಕೆಯಲ್ಲಿವೆ. ಇದೇ ಮಾದರಿಯಲ್ಲಿ ಅಲ್ಪಸ್ವಲ್ಪ ಮಾರ್ಪಾಟುಗಳೊಂದಿಗೆ ಈ ವಿಮಾನ ನಾಗರಿಕ ವಿಮಾನಗಳಾಗಿ ಬದಲಾಗುತ್ತವೆ.
ಕಾನ್ಪುರದಲ್ಲಿರುವ ಎಚ್‌ಎಎಲ್ ಕೇಂದ್ರದಲ್ಲಿ ಈ ಬದಲಾವಣೆ ಆಗಲಿವೆ. ಹಾಗೆ, ಬದಲಾದ ವಿಮಾನಗಳು ಭಾರತದ ಮೊಟ್ಟಮೊದಲ ಸ್ವದೇಶಿ ನಾಗರಿಕ ವಿಮಾನಗಳೆಂಬ ಹೆಗ್ಗಳಿಕೆ ಪಡೆಯಲಿವೆ. ಈ ವಿಮಾನಗಳನ್ನು ಕೇಂದ್ರ ಸರ್ಕಾರದ ಮಹದುದ್ದೇಶದ “ಉಡಾನ್’ ಯೋಜನೆಯಲ್ಲಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಭಾರತದಲ್ಲಿ ಈ ವಿಮಾನಗಳು ಯಶಸ್ವಿಯಾದರೆ, ಮುಂದೆ ನೇಪಾಳ, ಶ್ರೀಲಂಕಾಗಳಿಗೂ ಈ ವಿಮಾನಗಳನ್ನು ತಯಾರಿಸಿ ರಫ್ತು ಮಾಡುವ ಆಲೋಚನೆ ಸರ್ಕಾರಕ್ಕಿದೆ.
ಗ್ಯಾರೆಟ್ ಟಿಪಿಇ 331-5-25ಡಿ ಇಂಜಿನ್ ಅನ್ನು ಒಳಗೊಂಡಿದ್ದು, ಪ್ರತಿ ಗಂಟೆಗೆ ಗರಿಷ್ಠ 428 ಕಿ.ಮೀ. ವೇಗದಲ್ಲಿ ಹಾರಬಲ್ಲದು. ಒಂದು ಗಂಟೆಯ ಪ್ರಯಾಣಕ್ಕೆ 213 ಕೆ.ಜಿ. ಇಂಧನ ಕುಡಿಯುತ್ತದೆ ಈ ವಿಮಾನ. 1981ರಲ್ಲಿ ಜರ್ಮನಿಯ ಡೋರ್ನಿಯರ್ ಜಿಎಂಪಿಎಚ್ ಕಂಪನಿಯಿಂದ ಈ ವಿಮಾನ ತಯಾರಿಕೆಯ ಲೈಸನ್ಸ್ ಅನ್ನು ಎಚ್‌ಎಎಲ್ ಪಡೆದಿದೆ.