Advertisement
ಬಿಟ್ ಕಾಯಿನ್, ಶೇ.40 ಪರ್ಸಂಟೇಜ್ ಆರೋಪ ವಿಚಾರ ಪ್ರಸ್ತಾಪಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಚಿಂತನೆ ನಡೆಸಿತ್ತಾದರೂ ಮೊದಲ ದಿನವೇ ಆ ವಿಚಾರ ಪ್ರಸ್ತಾಪಿಸಿದರೆ ಕಲಾಪದಲ್ಲಿ ಗದ್ದಲ ಉಂಟಾದರೆ ಬೇರೆ ರೀತಿಯ ಸಂದೇಶ ರವಾನೆಯಾಗಬಹುದು ಎಂಬ ಕಾರಣಕ್ಕೆ ಮಳೆಯಿಂದ ಪ್ರವಾಹ, ಬೆಳೆ ನಷ್ಟ, ಪರಿಹಾರ ವಿಚಾರ ನಿಲುವಳಿ ಮಂಡಿಸುವ ಮೂಲಕ ಜಾಣ್ಮೆ ನಡೆ ಅನುಸರಿಸಿತು.ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಚಾರ ಪ್ರಸ್ತಾಪಕ್ಕೆ ಅವಕಾಶವನ್ನೂ ಕೊಟ್ಟರು.
ಭಾರತೀಯ ಸೇನೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್, ನಟ ಪುನೀತ್ ರಾಜ್‌ಕುಮಾರ್ ಸಹಿತವಾಗಿ ಅಗಲಿದ ಗಣ್ಯರಿಗೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Related Articles
Advertisement
ಇದನ್ನೂ ಓದಿ:ಕೇಂದ್ರದ ಒಪ್ಪಿಗೆ ದೊರೆತ ತಕ್ಷಣ ಪಶ್ಚಿಮ ಘಟ್ಟದ ಘಾಟ್‌ಗಳ ದುರಸ್ತಿ: ಸಿಸಿ ಪಾಟೀಲ್
ವಿಧಾನಸಭೆಯಲ್ಲಿ ನಿಲುವಳಿ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪುನೀತ್ ರಾಜ್ ಕುಮಾರ್ ಅವರಿಗೆ ಈಗಾಗಲೇ ಕರ್ನಾಟಕ ರತ್ನ ಘೋಷಣೆ ಮಾಡಿದ್ದೇವೆ. ಈ ಸಂಬಂಧ ಶೀಘ್ರ ಆದೇಶ ಹೊರಡಿಸಲಿದ್ದೇವೆ. ಹಾಗೆಯೇ ಪುನೀತ್ ರಾಜ್‌ಕುಮಾರ್ ಅವರಿಗೆ ಪದ್ಮಶ್ರೀ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಿದ್ದೇವೆ ಎಂದರು.
ಭಾರತೀಯ ಸೇನೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್ ಅವರಿದ್ದ ಹೆಲಿಕಾಪ್ಟರ್ ಪತನವಾಗಿರುವುದು ದಿಗ್ಭ್ರಮೆ ಉಂಟುಮಾಡಿದೆ. ಸಿಡಿಎಸ್ ಇರುವ ಹೆಲಿಕಾಪ್ಟರ್ ಪತನದಿಂದ ಇಡೀ ದೇಶವೇ ಅವರ ಸಾವಿಗೆ ಮರುಗುತ್ತಿದೆ. ವೀರ ಸೇನಾನಿಯನ್ನು ದೇಶ ಕಳೆದುಕೊಂಡಿದೆ ಎಂದು ಕಂಬನಿ ಮಿಡಿದರು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ವೀರ ಸೇನಾನಿಗಳು ವೀರ ಮರಣ ಹೊಂದಿದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಸಾವನ್ನು ಸಂಭ್ರಮಿಸಿದವರ ವಿರುದ್ಧವೂ ಕ್ರಮ ಆಗಬೇಕು. ಈ ಬಗ್ಗೆಯೂ ವಿಶೇಷ ತನಿಖೆ ನಡೆಸಬೇಕು. ವಿಕೃತ ಹೇಳಿಕೆ ನೀಡುವವರ ವಿರುದ್ಧ ಕ್ರಮ ಆಗಲೇ ಬೇಕು ಎಂದರು.
ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಜೆ.ಸಿ.ಮಾಧುಸ್ವಾಮಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಶಶಿಕಲಾ ಜೊಲ್ಲೆ, ಹಾಲಪ್ಪ ಆಚಾರ್, ಶಾಸಕರಾದ ಬಂಡೆಪ್ಪ ಕಾಶಂಪುರ್, ರಾಜೇಗೌಡ, ಎನ್.ಮಹೇಶ್, ಕುಮಾರ್ ಬಂಗಾರಪ್ಪ ಸಂತಾಪ ಸೂಚಕ ನಿಲುವಳಿ ಬೆಂಬಲಿಸಿ ಮಾತನಾಡಿದರು. ನಂತರ ಒಂದು ನಿಮಿಷ ಮೌನಾಚರಣೆ ಮೂಲಕ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ಮೇಲ್ಮನೆಯಲ್ಲೂ ಸಂತಾಪಪರಿಷತ್ನಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂತಾಪ ಸೂಚಕ ನಿರ್ಣಯವನ್ನು ಮಂಡಿಸಿ, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್, ಹಿರಿಯ ನಟ ಕೆ.ಶಿವರಾಂ,ಹಿರಿಯ ರಾಜಕಾರಣಿ ರೋಸಯ್ಯ, ಮಾಜಿ ಸಚಿವ ಎಸ್.ಆರ್.ಮೋರೆ, ಸ್ವಾತಂತ್ರ್ಯ ಹೋರಾಟಗಾರ ಬೋಜರಾಜ್ ಹೆಗಡೆ, ಸೇನಾ ಮುಖ್ಯಸ್ಥ ಜ. ಬಿಪಿನ್ ರಾವತ್, ನಾಡೋಜ ಪದ್ಮಮ್ಮ ಸೇರಿ ಅಗಲಿದ ಎಲ್ಲ ಗಣ್ಯರಿಗೆ ಸಂತಾಪ ಸೂಚಿಸಿದರು. ಪೂರ್ಣ ತನಿಖೆ ಆಗಬೇಕು:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಭಾರತೀಯ ಸೇನೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರು ಸಂಚರಿಸುತ್ತಿದ್ದ ಹೆಲಿಕಾಪ್ಟರ್ ದುರಂತಕ್ಕೀಡಾಗಿ ಬಿಪಿನ್ ರಾವತ್, ಅವರಪತ್ನಿ ಸಹಿತವಾಗಿ 13 ಸೇನಾನಿಗಳು ವೀರ ಮರಣ ಅಪ್ಪಿದ್ದಾರೆ. ಆಧುನಿಕ ತಂತ್ರಜ್ಞಾನ ಹೊಂದಿರುವ ಸೇನಾ ಹೆಲಿಕಾಪ್ಟರ್ ದುರಂತ ಸಂಭವಿಸಿರುವುದರ ಪೂರ್ಣ ತನಿಖೆ ಆಗಬೇಕು. ಇದರಲ್ಲಿ ಯಾರದೋ ಕೈವಾಡ ಇದೆ ಎಂದು ಹೇಳುತ್ತಿಲ್ಲ. ಬದಲಾಗಿ ಸಮಗ್ರ ತನಿಖೆ ನಡೆಸುವ ಮೂಲಕ ಸತ್ಯಾಸತ್ಯತೆ ತಿಳಿಯಲು ಸಾಧ್ಯವಿದೆ ಎಂದರು. ನಟಿ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ಪದ್ಮಶ್ರೀ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಹಾಗೆಯೇ ಹಿರಿಯ ನಟ ಶಿವರಾಮ್ ಅವರ ಗ್ರಂಥಾಲಯವೊಂದಿದೆ. ಅದನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಂತರ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪರಿಷತ್ತಿನ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ ಮಾತನಾಡಿ, ಅಗಲಿದ ಚೇತನಗಳ ಸಾಧನೆಯನ್ನು ಸ್ಮರಿಸಿದರಲ್ಲದೇ ಅವರು ನಾಡಿಗೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. ನಂತರ ಸಭೆಯಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆ ಆಚರಿಸಿ ಸಂತಾಪ ಸೂಚಿಸಲಾಯಿತು