Advertisement

ಕಾಲೇಜಿನಲ್ಲಿ ಮೊದಲ ದಿನ 

12:30 AM Feb 01, 2019 | Team Udayavani |

ಅದು ಬಿಎಸ್ಸಿಯ ಮೊದಲ ದಿನ. ಏಳು ವರ್ಷಗಳ ನಂತರ ನಾನು ನನ್ನ ಊರಿನಲ್ಲಿ ವಿದ್ಯಾಭ್ಯಾಸ ಮುಂದುವರೆಸುತ್ತಿದ್ದೆ. ನನ್ನಲ್ಲಿ ಅಳುಕಿತ್ತು. ಏಕೆಂದರೆ, ನನ್ನ ಏಳು ವರ್ಷದ ಸ್ನೇಹಿತರೆಲ್ಲರೂ ಬೆಂಗಳೂರು, ಮೈಸೂರು, ಹಾಸನ ಹೀಗೆ ಬೇರೆ ಬೇರೆ ಊರುಗಳಿಗೆ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದರು. ಹಾಗಾಗಿ, ಆ ಸ್ನೇಹಿತರಾರೂ ಇಲ್ಲಿ ಸಿಗಲಾರರು ಎಂಬುದು ಖಚಿತವಾಗಿತ್ತು. ಪ್ರಾಥಮಿಕ ಶಾಲೆಯ ಸ್ನೇಹಿತರು ಸಿಗಬಹುದೆಂಬ ಆಶಾಭಾವ ನನ್ನಲ್ಲಿತ್ತು. ಆದರೆ, ಅವರನ್ನು ಗುರುತು ಹಿಡಿಯಲು ವಿಫ‌ಲವಾದರೆ… ಎಂಬ ಭಯವೂ ಇತ್ತು. ಹೀಗೆ, ಇದನ್ನೆಲ್ಲ ಯೋಚಿಸುತ್ತ  ಕಾರಿಡಾರ್‌ನಲ್ಲಿ ನಡೆಯುತ್ತಿದ್ದೆ. 

Advertisement

ಕ್ಲಾಸ್‌ರೂಮ್‌ ಬಾಗಿಲಿಗೆ ಇನ್ನೂ ಬೀಗ ಜಡಿದಿತ್ತು. ಹಾಗಾಗಿ, ಒಮ್ಮೆ ಕಾಲೇಜು ನೋಡೋಣ ಎಂದೆನಿಸಿ ಮುಂದೆ ಮುಂದೆ ಸಾಗಿದೆ. ಅಲ್ಲಲ್ಲಿ ವಿದ್ಯಾರ್ಥಿಗಳ ತಂಡ ಕಾಣತೊಡಗಿತು. ನನಗೂ ಆ ತಂಡಗಳನ್ನು ಸೇರಬೇಕೆಂದೆನಿಸಿತು. ಆದರೆ, ಒಬ್ಬರದ್ದೂ ಪರಿಚಯ ಇರಲಿಲ್ಲ. ನನ್ನ ಹಾಗೆ ಬೇರೆ ಯಾರಾದರೂ ಇದ್ದಾರೆಯೇ ಎಂಬುದನ್ನು ಹುಡುಕಿ ಅವರೊಂದಿಗೆ ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಬೇಕೆಂದು ನಿರ್ಧರಿಸಿದೆ. ಆಗಲೇ ನನಗೆ ಚಿರಪರಿಚಿತ ಎಂದೆನಿಸುವ ಒಂದು ನಗು ಕೇಳಿಸಿತು. ಹಿಂದೆ ತಿರುಗಿದರೆ ಗೆಳತಿ ರಮ್ಯಾ ತನ್ನ ಸ್ನೇಹಿತರೊಂದಿಗೆ ಮಾತಿನಲ್ಲಿ ತಲ್ಲೀನಳಾಗಿದ್ದಳು. 

ರಮ್ಯಾ ನನ್ನ ಐದನೇ ತರಗತಿಯ ಸ್ನೇಹಿತೆ. ಹೇಗೆ ಬದಲಾಗಿ ಬಿಟ್ಟಿದ್ದಾಳೆ ಈಕೆ ಎಂದು ಅಂದುಕೊಳ್ಳುತ್ತ ಅವಳೆಡೆಗೆ ನಡೆದೆ. ಏನೂ ಹೇಳದೆ ಅವಳೆದುರು ನಿಂತರೆ ಆಕೆ ನನ್ನನ್ನು ನೋಡಿ ಗುರುತು ಹಿಡಿದೇ ಬಿಟ್ಟಳು. ಏಳು ವರ್ಷಗಳ ನಂತರದ ಭೇಟಿ ಇಬ್ಬರನ್ನೂ ಖುಷಿಯಲ್ಲಿ ತೇಲಾಡಿಸಿಬಿಟ್ಟಿತು. ಅವಳ ಬಳಿ ಇತರ ಸಹಪಾಠಿಗಳ ಬಗ್ಗೆ ವಿಚಾರಿಸಿದೆ. ಕೆಲವರು ಅದೇ ಕಾಲೇಜು ಎಂದು ತಿಳಿದು ಖುಷಿ ಪಟ್ಟೆ. ಅವರೆಲ್ಲರೂ ಬಿ.ಕಾಂ. ಆಯ್ಕೆ ಮಾಡಿಕೊಂಡಿದ್ದರು. ನನ್ನ ತರಗತಿಯಲ್ಲಿ ಅವರು ಸಿಗದಿದರೂ ಕಾಲೇಜಿನಲ್ಲಿ, ಬಸ್ಸಿನಲ್ಲಿ ಸಿಗುವವರು ಎಂದೆನಿಸಿ ನಿರಾಳವಾದೆ. ಭಯ ತುಂಬಿದ್ದ ನನ್ನ ಮನಸ್ಸು ಹಗುರಾಗಿ ಉತ್ಸಾಹದಿಂದ ತುಂಬಿತ್ತು. ಅವಳಲ್ಲಿ ಮಾತನಾಡಿ ನಂತರ ನನ್ನ ತರಗತಿಯ ಕಡೆಗೆ ನಡೆದೆ. ತರಗತಿಯಲ್ಲಿ ಅದಾಗಲೇ ಮೂವರು ಕುಳಿತುಕೊಂಡು ಒಬ್ಬೊಬ್ಬರನ್ನು ಪರಿಚಯಿಸಿಕೊಳ್ಳುತ್ತಿದ್ದರು. ನನ್ನನ್ನು ಕಂಡವರೇ “ಹಾಯ್‌’ ಎಂದರು. ನಾನೂ “ಹಾಯ್‌’ ಎಂದು ಅವರನ್ನು ಪರಿಚಯಿಸಿಕೊಂಡೆನು. ಮೊದಲ ದಿನವೇ ಅವರು ನನಗೆ ಸ್ನೇಹಿತರಾಗಿಬಿಟ್ಟರು. ಈಗ ಬಿಎಸ್ಸಿ ಸೇರಿ ಒಂದೂವರೆ ವರ್ಷಗಳು ಕಳೆದು ಹೋಗಿದೆ. ಈಗ ನನಗೂ ಸ್ನೇಹಿತರ ದೊಡ್ಡ ಗುಂಪು ಇದೆ. ಈಗ ಬಿಎಸ್ಸಿ ಮುಗಿಯುವುದೇ ಬೇಡ ಎಂದು ಅನಿಸುತ್ತದೆ. ಕಾಲೇಜಿನಲ್ಲಿ ಕಳೆಯುವ ಪ್ರತಿಯೊಂದು ದಿನವೂ ವಿಶೇಷವಾಗಿರುತ್ತದೆ. ಅದು ಬರೀ ಕಲಿಕೆಯಲ್ಲಿ ಕೂಡಿರದೆ ವಿವಿಧ ಮನರಂಜನೆ, ಚಟುವಟಿಕೆಗಳಲ್ಲಿ ತುಂಬಿರುತ್ತದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಕಾಲೇಜು ದಿನಗಳು ಬಹಳ ಮಹತ್ವದ್ದಾಗಿರುತ್ತವೆ. 

ಸಹನಾ ರೈ  
ದ್ವಿತೀಯ ಬಿ. ಎಸ್ಸಿ., 
ವಿವೇಕಾನಂದ ಕಾಲೇಜು, ಪುತ್ತೂರು 

Advertisement

Udayavani is now on Telegram. Click here to join our channel and stay updated with the latest news.

Next