ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನ ಕಾರಣದಿಂದ ಮೊದಲ ಸಾವು ಸಂಭವಿಸಿದೆ. ಕೊಳ್ಳೇಗಾಲ ತಾಲೂಕಿನ ಕೊಂಗರಹಳ್ಳಿ ಗ್ರಾಮದ 58 ವರ್ಷದ ವ್ಯಕ್ತಿ ಶ್ವಾಸಕೋಶದ ಸೋಂಕಿನ ಕಾರಣ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲಾಗಿದ್ದು ಶನಿವಾರ ಮೃತಪಟ್ಟಿದ್ದಾರೆ. ನಿಧನಾನಂತರ ಕೋವಿಡ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಫಲಿತಾಂಶ ಬಂದಿದೆ.
ಉಸಿರಾಟದ ತೊಂದರೆ ಕಾರಣದಿಂದ ಈ ವ್ಯಕ್ತಿ ಜು.8ರಂದು ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ತೊಂದರೆಯಿದ್ದ ಕಾರಣ ಅಂದೇ ಅವರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಆರ್‌ಟಿ-ಪಿಸಿಆರ್ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ ಪರೀಕ್ಷೆಯ ಫಲಿತಾಂಶ ಬರುವ ಮುನ್ನವೇ ಶನಿವಾರ ಬೆಳಿಗ್ಗೆ 9.30ರಲ್ಲಿ ಮೃತಪಟ್ಟರು.
ಹೀಗಾಗಿ ಮರಣೋತ್ತರವಾಗಿ ಮತ್ತೊಮ್ಮೆ ಗಂಟಲು ದ್ರವ ಮಾದರಿಯನ್ನು ಟ್ರೂನಾಟ್ (ಶೀಘ್ರ ವರದಿ ದೊರಕುವ ವಿಧಾನದ) ಪರೀಕ್ಷೆಗೆ ಒಳಪಡಿಸಲಾಯಿತು. ಇದರಲ್ಲಿ ಆ ವ್ಯಕ್ತಿಗೆ ಕೋವಿಡ್-19 ದೃಢಪಟ್ಟಿತು. ಆದರೂ ಶನಿವಾರ ರಾತ್ರಿಯವರೆಗೂ ಆರ್‌ಟಿ-ಪಿಸಿಆರ್ ವರದಿ ನಿರೀಕ್ಷಿಸಲಾಗಿತ್ತು. ಶನಿವಾರ ರಾತ್ರಿ 10.30ರಲ್ಲಿ ಆ ವರದಿ ಲಭ್ಯವಾಗಿ, ಅದರಲ್ಲೂ ಕೋವಿಡ್ 19 ದೃಢಪಟ್ಟಿತು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ತಿಳಿಸಿದ್ದಾರೆ.
ಈ ವ್ಯಕ್ತಿಯ ಶವ ಸಂಸ್ಕಾರವನ್ನು ಕೋವಿಡ್ ಮೃತದೇಹ ವಿಲೇವಾರಿ ಮಾರ್ಗಸೂಚಿಯ ಅನುಸಾರ ನಗರದ ಎಡಬೆಟ್ಟದ ಸಮೀಪ ಶನಿವಾರ ರಾತ್ರಿ ನಡೆಸಲಾಯಿತು. ಈ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯ ವಾರ್ಡ್ ಅನ್ನು ಸ್ಯಾನಿಟೈಸ್ ಮಾಡಿ, ಸೀಲ್‌ಡೌನ್ ಮಾಡಲಾಗಿದೆ. ಈ ವ್ಯಕ್ತಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯರು, ವೈದ್ಯೇತರ ಸಿಬ್ಬಂದಿ, ಸಂಬಂಧಿಕರು ಹಾಗೂ ಆತನನ್ನು ಸಂಪರ್ಕಿಸಿದ್ದ ಎಲ್ಲರನ್ನೂ ಕಡ್ಡಾಯ ಗೃಹ ಕ್ವಾರಂಟೀನ್‌ನಲ್ಲಿ ಇರಿಸಲಾಗಿದ್ದು, ಅವರೆಲ್ಲರ ಕೋವಿಡ್ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ವ್ಯಕ್ತಿಗೆ ಕೋವಿಡ್ ಸೋಂಕು ಹೇಗೆ ತಗುಲಿರಬಹುದೆಂಬ ಬಗ್ಗೆ ಇನ್ನೂ ಖಚಿತವಾಗಿಲ್ಲ.