ಬೆಳಗಾವಿ: ದೇಶ ಮೊದಲು, ನಂತರ ಪಕ್ಷ ಹಾಗೂ ಕೊನೆಯದಾಗಿ ವೈಯಕ್ತಿಕ ವಿಚಾರಗಳು ಬರುತ್ತವೆ. ಹೀಗಾಗಿ ನಾನು ಮೊದಲಿನಿಂದಲೂ ದೇಶ ಮೊದಲು ಎಂಬ ಧೋರಣೆಯಿಂದ ಬೆಳೆದವಳು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ ಹೇಳಿದರು.
ನಗರದ ಟಿಳಕವಾಡಿಯ ಮಿಲೇನಿಯಂ ಗಾರ್ಡನ್‌ದಲ್ಲಿ ಶುಕ್ರವಾರ ನಡೆದ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶ ಮೊದಲು ಎನ್ನುವ ಅರಿವಿದ್ದರೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು ಸಾಧ್ಯವಿದೆ. ಹೀಗಾಗಿ ಪ್ರತಿಯೊಬ್ಬರೂ ದೇಶದತ್ತ ಗಮನಹರಿಸಿದರೆ ಸುಂದರ ಪರಿಸರ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವದ ದೊಡ್ಡ ಹಬ್ಬ(ಚುನಾವಣೆ) ನಮ್ಮ ಮುಂದೆ ಬಂದಿದೆ. ಹಬ್ಬ ಅಂದರೆ ಮಹಿಳೆಯರಿಗೆ ಹೆಚ್ಚಿನ ಕೆಲಸ ಇರುತ್ತದೆ. ಜಗತ್ತಿನಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಪ್ರತಿ ಚುನಾವಣೆಯಲ್ಲಿ ನಮ್ಮ ಅಧಿಕಾರ(ಮತದಾನ)ವನ್ನು ಸರಿಯಾದ ರೀತಿಯಲ್ಲಿ ಕೊಡುತ್ತ ಬಂದಿದ್ದೇವೆ. ಈಗಲೂ ಮತ್ತೂಮ್ಮೆ ಮೋದಿ ಅವರನ್ನು 300 ಪ್ಲಸ್ ಎಂಬ ಘೋಷಣೆಯೊಂದಿಗೆ ಮುಂದೆ ಸಾಗಬೇಕಿದೆ. ರಾಜ್ಯ ಹಾಗೂ ದೇಶಾದ್ಯಂತ ಮೋದಿ ಅಲೆ ಜೋರಾಗಿದೆ. ಹೀಗಾಗಿ ಇಂಥ ಮಹಾನ್ ವ್ಯಕ್ತಿತ್ವದ ಮೋದಿ ಪ್ರಧಾನಿಯನ್ನಾಗಿ ಮಾಡಲು ನಾವೆಲ್ಲರೂ ಮತ ಚಲಾಯಿಸಬೇಕಿದೆ ಎಂದರು.
ನಾಯಕತ್ವ ಗುಣ ಹೊಂದಿದ್ದ ಪತಿ ದಿಣ ಅನಂತಕುಮಾರ ಬಿಜೆಪಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಜನೌಷಧಿ ಕೇಂದ್ರಗಳ ಮೂಲಕ ಎಲ್ಲರಿಗೂ ಕಡಿಮೆ ದರದಲ್ಲಿ ಔಷಧ ನೀಡುವ ಕಾರ್ಯ ಆರಂಭಿಸಿದ ಶ್ರೇಯಸ್ಸು ಮೋದಿ ಹಾಗೂ ಅನಂತಕುಮಾರ ಅವರಿಗೆ ಸಲ್ಲುತ್ತದೆ ಎಂದ ಅವರು, ದೇಶದ ಇತಿಹಾಸದಲ್ಲಿ 70 ವರ್ಷಗಳ ಅವಧಿಯಲ್ಲಿ ಆಗದಿರುವುದನ್ನು ಐದೇ ವರ್ಷದಲ್ಲಿ ಮನೆ, ಮನೆಗೆ ಸಿಲಿಂಡರ್ ತಲುಪಿಸುವ ಕಾರ್ಯ ಮೋದಿ ಸರ್ಕಾರ ಮಾಡಿದೆ ಎಂದರು.
ಶಾಸಕ ಅಭಯ ಪಾಟೀಲ ಮಾತನಾಡಿ, ಕಾರ್ಯಕರ್ತರ ರೂಪದಲ್ಲಿ ಬಂದವರು ನಾವು ಈಗಲೂ ಕಾರ್ಯಕರ್ತರಾಗಿಯೇ ಇದ್ದೇವೆ. ಬೆಳಗಾವಿಯಲ್ಲಿ ಮಹಿಳಾ ಶಕ್ತಿ ಹೆಚ್ಚಾಗಿದೆ ಎಂದ ಅವರು, ಅಂಗಡಿ ಕಳೆದ ಸಲ 72 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಅದರಲ್ಲಿ ದಕ್ಷಿಣ ಕ್ಷೇತ್ರದಲ್ಲಿಯೇ 65 ಸಾವಿರ ಅಂತರ ಆಗಿತ್ತು. ಈಗ ಗೆಲುವು ನಮ್ಮ ಕ್ಷೇತ್ರದಲ್ಲಿ ಅಷ್ಟೇ 75 ಸಾವಿರ ಮತಗಳ ಅಂತರ ಇರಲಿದೆ ಎಂದರು.
ಶಾಸಕ ಅನಿಲ ಬೆನಕೆ ಮಾತನಾಡಿ, ಪ್ರತಿ ಯಶಸ್ವಿ ಪುರುಷರ ಹಿಂದೆ ಮಹಿಳೆ ಇರುತ್ತಾರೆ. ತೇಜಸ್ವಿನಿ ಅನಂತಕುಮಾರ, ಮಂಗಲಾ ಅಂಗಡಿ, ಶಿಲ್ಪಾ ಶೆಟ್ಟರ ಹಾಗೂ ಅಭಯ ಪಾಟೀಲರ ಪತ್ನಿ ಆದರ್ಶರಾಗಿದ್ದಾರೆ ಎಂದು ಬಣ್ಣಿಸಿದರು.
ಮಂಗಲಾ ಅಂಗಡಿ ಮಾತನಾಡಿ, ಮೂರು ಬಾರಿ ಸಂಸದರನ್ನಾಗಿ ಸುರೇಶ ಅಂಗಡಿ ಅವರನ್ನು ಆಯ್ಕೆ ಮಾಡಿರುವ ಜನರಿಗೆ ನಾನು ಚಿರಋಣಿ. ನಾಲ್ಕನೇ ಬಾರಿಗೆ ಗೆಲ್ಲಿಸಿ ಕೊಡುವ ಜವಾಬ್ದಾರಿ ಜಿಲ್ಲೆಯ ಜನರ ಮೇಲಿದೆ ಎಂದು ಪತಿ ಪರ ಮತಯಾಚಿಸಿದರು. ಶಾಸಕ ರಘುಪತಿ ಭಟ್, ಜಗದೀಶ ಶೆಟ್ಟರ ಪತ್ನಿ ಶಿಲ್ಪಾ ಶೆಟ್ಟರ, ಬಿಜೆಪಿ ಮುಖಂಡ ಎಂ.ಬಿ. ಜಿರಲಿ ಸೇರಿದಂತೆ ದಕ್ಷಿಣ ಕ್ಷೇತ್ರದ ಮಹಿಳೆಯರು ಇದ್ದರು