ಹುಬ್ಬಳ್ಳಿ: ಕ್ಯಾನ್ಸರ್ ರೋಗಿಗಳಿಗೆ ನೆಮ್ಮದಿ ವಾತಾವರಣ ಕಲ್ಪಿಸುವ, ವಸತಿ-ಊಟೋಪಚಾರ ಸೌಲಭ್ಯ ಒದಗಿಸುವ ಮಜೇಥಿಯಾ ಫೌಂಡೇಶನ್‌ನ ಉತ್ತರ ಕರ್ನಾಟಕದ ಮೊದಲ ರಮೀಲಾ ಪ್ರಶಾಂತಿ ಮಂದಿರ ಹಾಸ್ಪೈಸ್ ಲೋಕಾರ್ಪಣೆ ಸೋಮವಾರ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೌಂಡೇಶನ್ ಟ್ರಸ್ಟಿ ಡಾ| ಕೆ.ರಮೇಶಬಾಬು, 1967ರ ಸುಮಾರಿಗೆ ಇಂಗ್ಲೆಂಡ್‌ನಲ್ಲಿ ಹಾಸ್ಪೈಸ್ ವ್ಯವಸ್ಥೆ ಜಾರಿಗೊಂಡಿತ್ತು. ಕ್ಯಾನ್ಸರ್ ರೋಗಿಗಳು ನೆಮ್ಮದಿಯಿಂದ ಕಾಲ ಕಳೆಯುವಂತಾಗಲು ಇಂತಹ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಬೆಂಗಳೂರಿನಲ್ಲಿ ಕರುಣಾಶ್ರಮ ಮಾದರಿಯ ಹಾಸ್ಪೈಸ್ ವ್ಯವಸ್ಥೆ ಕೈಗೊಂಡಿದೆ. ಮೈಸೂರು, ಉಡುಪಿಯಲ್ಲಿಯೂ ಹಾಸ್ಪೈಸ್‌ಗಳು ಇವೆ. ಉತ್ತರ ಕರ್ನಾಟಕದಲ್ಲಿ ಮೊದಲ ಹಾಸ್ಪೈಸ್ ಹುಬ್ಬಳ್ಳಿಯಲ್ಲಿ ಆರಂಭವಾಗುತ್ತಿದೆ ಎಂದರು.
ಮಜೇಥಿಯಾ ಫೌಂಡೇಶನ್ ಇಂತಹ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದು, ನವನಗರದ ಕ್ಯಾನ್ಸರ್ ಆಸ್ಪತ್ರೆ ಆವರಣದಲ್ಲಿ ಹಾಸ್ಪೈಸ್ ಕಟ್ಟಡ ನಿರ್ಮಿಸಲಾಗಿದೆ. ಹಾಸ್ಪೈಸ್‌ನಲ್ಲಿ ಒಟ್ಟು 30 ರೋಗಿಗಳಿಗೆ ಅವಕಾಶ ನೀಡಲಾಗುತ್ತಿದೆ. ಜನರಲ್ ವಾರ್ಡ್‌ನಲ್ಲಿ ಪುರುಷ ಹಾಗೂ ಮಹಿಳೆಯರಿಗೆ ತಲಾ 10 ಜನರಿಗೆ ಅವಕಾಶ ನೀಡಲಾಗುತ್ತಿದ್ದು, ಜನರಲ್ ವಾರ್ಡ್‌ನ ರೋಗಿಗಳಿಗೆ ಚಿಕಿತ್ಸೆ, ಉಪಹಾರ-ಊಟ, ವಸತಿ ಎಲ್ಲವೂ ಉಚಿತವಾಗಿರಲಿದೆ. ಉಳಿದ 10 ಜನ ರೋಗಿಗಳಿಗೆ ಪ್ರತ್ಯೇಕ ಕೋಣೆ ವ್ಯವಸ್ಥೆ ಇದ್ದು, ಅವರಿಗೆ ಅತ್ಯಲ್ಪ ರೀತಿ ಶುಲ್ಕ ನಿಗದಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಹಾಸ್ಪೈಸ್‌ನಲ್ಲಿ ವೈದ್ಯರು, ನರ್ಸ್‌ಗಳನ್ನು ನೇಮಕ ಮಾಡಲಾಗಿದ್ದು, ಕೌನ್ಸೆಲಿಂಗ್ ವ್ಯವಸ್ಥೆಯೂ ಇರಲಿದೆ. ರೋಗಿಗಳಿಗೆ ಧ್ಯಾನ, ಆಧ್ಯಾತ್ಮಿಕ-ಪ್ರೇರಣಾದಾಯಕ ಉಪನ್ಯಾಸ, ಸಂಗೀತ, ಲಘು ಕ್ರೀಡೆ, ಯೋಗ, ಗ್ರಂಥಾಲಯ ಇನ್ನಿತರ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕ್ಯಾನ್ಸರ್ ತಜ್ಞರಿಂದ ಶಿಫಾರಸು ತಂದವರಿಗೆ ಮಾತ್ರ ಹಾಸ್ಪೈಸ್‌ಗೆ ಪ್ರವೇಶ ನೀಡಲಾಗುತ್ತಿದೆ. ಕೋವಿಡ್ ಕಾರಣದಿಂದ ಉದ್ಘಾಟನೆ ಮುಂದೂಡಿಕೆಯಾಗಿತ್ತು.ಇದೀಗ ಮಾ. 28ರಂದು ಸರಳವಾಗಿ ಲೋಕಾರ್ಪಣೆ ಮಾಡಲಾಗುವುದು ಎಂದರು.
ಮಜೇಥಿಯಾ ಫೌಂಡೇಶನ್ ಸಂಸ್ಥಾಪಕ ಚೇರ್ಮನ್ ಜಿತೇಂದ್ರ ಮಜೇಥಿಯಾ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಇದೊಂದು ಹೊಸ ಯೋಜನೆಯಾಗಿದೆ. ಡಾ| ವಿ.ಬಿ. ನಿಟ್ಟಾಲಿ ಅವರ ಸಲಹೆಯಂತೆ ಇದನ್ನು ಕೈಗೊಂಡಿದ್ದು, ಈ ಭಾಗದ ಕ್ಯಾನ್ಸರ್ ರೋಗಿಗಳಿಗೆ ನೆಮ್ಮದಿ ವಾತಾವರಣ ಸೃಷ್ಟಿಸುವ ಕಾರ್ಯವನ್ನು ಹಾಸ್ಪೈಸ್ ಮಾಡಲಿದೆ ಎಂದು ಹೇಳಿದರು.
ಬೆಂಗಳೂರಿನ ಕರುಣಾಶ್ರಮ ಸುಮಾರು 8.5 ಕೋಟಿ ರೂ. ವೆಚ್ಚದಲ್ಲಿ ಹಾಸ್ಪೈಸ್ ನಿರ್ಮಾಣ ಮಾಡಿದ್ದು, 72 ಜನರಿಗೆ ಅವಕಾಶ ನೀಡಲಾಗಿದೆ. ನಮ್ಮ ಹಾಸ್ಪೈಸ್ ಸಿಬ್ಬಂದಿಗೆ ಕರುಣಾಶ್ರಮದಲ್ಲಿ ತರಬೇತಿ ಕೊಡಿಸಲಾಗಿದೆ. ನಾವು ಸದ್ಯಕ್ಕೆ 30 ರೋಗಿಗಳಿಗೆ ಅವಕಾಶ ಕಲ್ಪಿಸಿದ್ದು, ಬೇಡಿಕೆ ಹೆಚ್ಚಾದರೆ ಇನ್ನೊಂದು ಹಂತದ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.
ಹಾಸ್ಪೈಸ್ ಕಟ್ಟಡಕ್ಕೆ ನವನಗರ ಕ್ಯಾನ್ಸರ್ ಆಸ್ಪತ್ರೆ ಜಾಗದ ವ್ಯವಸ್ಥೆ ಕಲ್ಪಿಸಿದ್ದು, ಕಟ್ಟಡದ ಮುಂದಿನ ಜಾಗವನ್ನು ಬಳಸಿಕೊಳ್ಳಲು ತಿಳಿಸಿದ್ದು, ಉತ್ತಮ ಉದ್ಯಾನವನ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ| ವಿ.ಬಿ. ನಿಟ್ಟಾಲಿ, ಎಚ್. ಆರ್. ಪ್ರಹ್ಲಾದರಾವ್, ಫೌಂಡೇಶನ್ ಸಿಇಒ ಅಜಿತ ಕುಲಕರ್ಣಿ, ಅಮೃತಭಾಯಿ ಪಟೇಲ್, ಅಮರೇಶ ಹಿಪ್ಪರಗಿ, ಸುಶಾಂತರಾಜೆ ಮಟಣಿಕರ ಇದ್ದರು.