Advertisement

ಸಾಳಗುಂದಿಗೆ ಮೊದಲ ಬಾರಿ ಬಂತು ಬಸ್‌!

09:49 AM Jul 10, 2019 | Suhan S |

ಬಾಗಲಕೋಟೆ: ನೀವು ನಂಬಲೇಬೇಕು. ಈ ಊರಿಗೆ ಸ್ವಾತಂತ್ರ್ಯ ಬಳಿಕ ಇದೇ ಮೊದಲ ಬಾರಿ ಸಾರಿಗೆ ಸಂಸ್ಥೆಯ ಬಸ್‌ ಬಂದಿದೆ.

Advertisement

ತಾಲೂಕಿನ ಸಾಳಗುಂದಿ ಗ್ರಾಮಕ್ಕೆ ಮಂಗಳವಾರ ಬಸ್‌ ಬಂದಿದ್ದು, ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ತೀವ್ರ ಹರ್ಷಗೊಂಡಿದ್ದಾರೆ.

ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಸಮಯದಲ್ಲಿ ಮಾತ್ರ ಚುನಾವಣೆ ಸಿಬ್ಬಂದಿಯನ್ನು ಹೊತ್ತು ಬರುವ ಬಸ್‌ ನೋಡಿದ್ದು ಬಿಟ್ಟರೆ ಈ ಊರಿಗೆ ಬಸ್‌ ಬರುತ್ತಿರಲಿಲ್ಲ. ಬಾಗಲಕೋಟೆಯಿಂದ ಅನಗವಾಡಿ ಕ್ರಾಸ್‌, ಹೊನ್ನರಳ್ಳಿ, ಸೋರಕೊಪ್ಪ, ನೆಕ್ಕರಗುಂದಿ, ಸಿಂದಗಿ, ಕಂದಾಪುರ, ಯಳ್ಳಗುತ್ತಿ, ಯಂಕಂಚಿ ಗ್ರಾಮಗಳಿಗೆ ಬಸ್‌ ಸೌಲಭ್ಯವಿದ್ದರೂ, ಸಾಳಗುಂದಿ ಗ್ರಾಮಕ್ಕೆ ಮಾತ್ರ ಬಸ್‌ ಸೌಲಭ್ಯ ಇರಲಿಲ್ಲ.

ನಗರದಿಂದ ರಸ್ತೆ ಮಾರ್ಗವಾಗಿ ಈ ಗ್ರಾಮಕ್ಕೆ ಬರಲು 25 ಕಿ.ಮೀ. ಕ್ರಮಿಸಬೇಕು. ರಸ್ತೆ ಮಾರ್ಗ ಬಿಟ್ಟರೆ, ಮುಖ್ಯ ಮಾರ್ಗವೇ ಜಲಮಾರ್ಗ. ಸಾಳಗುಂದಿ ಗ್ರಾಮಸ್ಥರು ಬಾಗಲಕೋಟೆ ನಗರಕ್ಕೆ ಬರಬೇಕಾದರೆ ಘಟಪ್ರಭಾ ನದಿ ದಾಟಿಕೊಂಡು ಬರಬೇಕಿತ್ತು. ಈ ಗ್ರಾಮದ ಜನರು ಇಲ್ಲಿಯವರಿಗೆ ಜಲಮಾರ್ಗ ಮೂಲಕವೇ ನಗರಕ್ಕೆ ಬರುತ್ತಿದ್ದರು. ಒಂದು ವೇಳೆ ಗಾಳಿ, ಮಳೆ ಬಂದು ಬೋಟ್, ಬಂದಾದರೆ ನಗರಕ್ಕೆ ಬಂದ ಜನರಿಗೆ ಮರಳಿ ಗ್ರಾಮಕ್ಕೆ ಹೋಗಲು ವಾಹನ ಸೇರಿದಂತೆ ಇತರೆ ಸೌಕರ್ಯ ಇರಲಿಲ್ಲ.

ಇಲ್ಲಿನ ಗ್ರಾಮಸ್ಥರು ಪ್ರತಿದಿನ ದುಡಿಯಲು, ತರಕಾರಿ ಮಾರಲು, ಹಾಲು ಮೊಸರು ಮಾರಾಟ ಮಾಡಲು ನಗರಕ್ಕೆ ಬರಲು ಬೋಟ್ ಆಸರೆಯಾಗಿತ್ತು. ಮಕ್ಕಳು ಜಲಮಾರ್ಗ ಮುಖಾಂತರವೇ ಬರಬೇಕಿತ್ತು. ಬೋಟ್ ಸೌಕರ್ಯ ಸ್ಥಗಿತಗೊಂಡಾಗ ಅವರೆಲ್ಲ ನಗರಕ್ಕೆ ಬರಲು ಪ್ರಯಾಸ ಪಡಬೇಕಿತ್ತು.

Advertisement

ಇದೀಗ ಗ್ರಾಮಕ್ಕೆ ಬಸ್‌ ಬಂದಿರುವುದರಿಂದ ಹಿನ್ನೀರಿನಲ್ಲಿ ಬೋಟ್‌ನಲ್ಲಿ ಕುಳಿತು, ಜೀವ ಕೈಯಲ್ಲಿ ಹಿಡಿದು ಸಾಗುವ ತಾಪತ್ರಯ ತಪ್ಪಿದಂತಾಗಿದೆ.

ಮನವಿಗೆ ಸ್ಪಂದನೆ: ಸಾಳಗುಂದಿ ಗ್ರಾಮಸ್ಥರು ನವನಗರದಲ್ಲಿರುವ ವಿಭಾಗೀಯ ನಿಯಂತ್ರಣಾಧಿಕಾರಿ ನಿತಿನ್‌ ಹೆಗಡೆ, ವಿಭಾಗೀಯ ಸಾರಿಗೆ ಅಧಿಕಾರಿ ಪಿ.ವಿ.ಮೇತ್ರಿ, ಡಿಪೋ ವ್ಯವಸ್ಥಾಪಕ ಎಸ್‌.ಬಿ. ಗಸ್ತಿ ಅವರಿಗೆ ಸಲ್ಲಿಸಿದ ಮನವಿಗೆ ಸ್ಪಂದಿಸಿ ಭವಿಷ್ಯತ್ತಿನ ದೃಷ್ಟಿಯಿಂದ ಬಸ್‌ ಸೌಲಭ್ಯ ಒದಗಿಸಿದ್ದಾರೆ.

 

•ವಿಠ್ಠಲ ಮೂಲಿಮನಿ

Advertisement

Udayavani is now on Telegram. Click here to join our channel and stay updated with the latest news.

Next