Advertisement

ಲಾತೂರ್‌ ರೈಲು ಕೋಚ್‌ ಫ್ಯಾಕ್ಟರಿಯಲ್ಲಿ ಮೊದಲ ಬೋಗಿ ಉತ್ಪಾದನೆ

07:25 PM Dec 29, 2020 | Team Udayavani |

ಲಾತೂರ್‌, ಡಿ. 28: ಕೋವಿಡ್‌ – 19 ಸಂಬಂಧಿತ ಸವಾಲುಗಳ ಹೊರತಾಗಿಯೂ ಭಾರತೀಯ ರೈಲ್ವೇಯ ಸಾರ್ವಜನಿಕ ಸಂಸ್ಥೆಯಾದ ರೈಲ್ವೇ ವಿಕಾಸ್‌ ನಿಗಮ್‌ ಲಿ. (ಆರ್‌ವಿಎನ್‌ಎಲ್‌) ಡಿ. 25ರಂದು ಉತ್ತಮ ಆಡಳಿತ ದಿನದಂದು ಲಾತೂರ್‌ನ ಮರಾಠವಾಡ ರೈಲ್‌ ಕೋಚ್‌ ಕಾರ್ಖಾನೆಯಲ್ಲಿ ಮೊದಲ ರೈಲು ಕೋಚ್‌ ಶೆಲ್‌ನ ಉತ್ಪಾದನೆಯನ್ನು ಘೋಷಿಸಿದೆ. ದೇಶದ ನಾಲ್ಕನೇ ಮತ್ತು ರಾಜ್ಯದ ಮೊದಲ ಕೋಚ್‌ ಫ್ಯಾಕ್ಟರಿ ಇದಾಗಿದೆ. ಈ ಕಾರ್ಖಾನೆಯನ್ನು ಎರಡು ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು.

Advertisement

ಕಾರ್ಖಾನೆಯು ಆಧುನಿಕ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ಮೂಲಕ ರಾಜ್ಯದ ಈ ಪ್ರದೇಶದ ಒಟ್ಟಾರೆ ಅಭಿವೃದ್ಧಿಗೆ ಸಹಕರಿಸಲಿದೆ. ವರ್ಷಕ್ಕೆ 250 ಎಂಇಎಂಯು/ಇಎಂಯು / ಎಲ್‌ಎಚ್‌ಬಿ/ ರೈಲು ಸೆಟ್‌ ಪ್ರಕಾರದ ಸುಧಾರಿತ ಬೋಗಿಗಳನ್ನು ತಯಾರಿಸುವ ಆರಂಭಿಕ ಸಾಮರ್ಥ್ಯದೊಂದಿಗೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಆದಾಗ್ಯೂ ಇದರ ಲೇ ಔಟ್‌ ಯೋಜನೆಯಲ್ಲಿ ಸಾಕಷ್ಟು ಖಾಲಿ ಜಾಗವನ್ನು ಗುರುತಿಸಲಾಗಿರುವುದರಿಂದ ಭವಿಷ್ಯದಲ್ಲಿ ಇದರ ಸಾಮರ್ಥ್ಯವನ್ನು ಹೆಚ್ಚಿಸಬಹುದಾಗಿದೆ. ಈ ಯೋಜನೆಯ ವೆಚ್ಚ 500 ಕೋಟಿ ರೂ. ಮತ್ತು ಭೂಮಿಯ ವೆಚ್ಚ 120 ಕೋಟಿ ರೂ. ಆಗಿದೆ ಎಂದು ರೈಲ್ವೇ ಸಚಿವಾಲಯ ತಿಳಿಸಿದೆ.

ಸುಸ್ಥಿರ ಅಭಿವೃದ್ಧಿಗಾಗಿ ಯೋಜನೆಯು 800 ಕಿಲೋ ವ್ಯಾಟ್‌ ಮೇಲ್ಛಾವಣಿಯ ಸೌರ ವಿದ್ಯುತ್‌ ಯೋಜನೆಗಳು, ತ್ಯಾಜ್ಯ ನೀರಿನ ನಿರ್ವಹಣೆ ಮತ್ತು ಮರುಬಳಕೆ ಯೋಜನೆಗಳು, ಮಳೆನೀರು ಕೊಯ್ಲು, 10,000 ವೃಕ್ಷಾರೋಪಣ, ಎಲ…ಇಡಿ ದೀಪ, ನೈಸರ್ಗಿಕ ಬೆಳಕು ಮತ್ತು ವಾತಾವರಣ ಸಹಿತ ವಿವಿಧ ಹಸುರು ಉಪಕ್ರಮಗಳನ್ನು ಜಾರಿಗೆ ತಂದಿದೆ. ಇದರ ಆಡಳಿತಾತ್ಮಕ ಬ್ಲಾಕ್‌ ಅನ್ನು

ಹಸುರು ಕಟ್ಟಡ ಪರಿಕಲ್ಪನೆಯ ಪ್ರಕಾರ ನಿರ್ಮಿಸಲಾಗಿದೆ. ಯೋಜನೆಯ ಯಶಸ್ಸಿನ ಹಿಂದೆ ರೈಲ್ವೇ ಸಚಿವ ಪೀಯೂಷ್‌ ಗೋಯಲ್‌ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ಪ್ರಮುಖ ಪಾತ್ರವಿದೆ. ಈ ಯೋಜನೆಗೆ 2018ರ ಆ. 28ರಂದು ಅನುಮೋದನೆ ದೊರೆತ ಕೂಡಲೇ ಅದರ ತ್ವರಿತ ಅನುಷ್ಠಾನಕ್ಕಾಗಿ ಆ. 30ರಂದು ಆರ್‌ವಿಎನ್‌ಎಲ್‌ಗೆ ಗುತ್ತಿಗೆ ನೀಡಲಾಯಿತು. ಕಾರ್ಖಾನೆಯು ಮುಂದಿನ ದಿನಗಳಲ್ಲಿ ಹೆಚ್ಚಿನ ರೈಲು ಬೋಗಿಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ.

ಉಪಯುಕ್ತ ಸೌಲಭ್ಯಗಳು :

Advertisement

350 ಎಕ್ರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ  ಕಾರ್ಖಾನೆಯಲ್ಲಿ 52,000 ಚ.ಮೀ. ವ್ಯಾಪ್ತಿಯ ಪೂರ್ವ ಎಂಜಿನಿಯರಿಂಗ್‌ ಶೆಡ್‌, ಮೂರು ಲೈನ್‌ ಯಾರ್ಡ್‌ ಗಳು, 33 ಕೆವಿ ವಿದ್ಯುತ್‌ ಸಬ್‌ಸ್ಟೇಶನ್‌, ಕ್ಯಾಂಟೀನ್‌, ಭದ್ರತೆ ಮತ್ತು ಆಡಳಿತ ವಿಭಾಗ ಹಾಗೂ 24 ಎಕ್ರೆ ವಸತಿ ಕಾಲನಿ ಇದೆ. ಕಾರ್ಖಾನೆಯಿಂದ ಹೊಸದಾಗಿ ವಿದ್ಯುತ್‌ ಸಂಪರ್ಕ ಹೊಂದಿದ ಹರಂಗುಲ್‌ ರೈಲು ನಿಲ್ದಾಣಕ್ಕೆ ಬೋಗಿಗಳನ್ನು ಸಾಗಿಸಲು 5 ಕಿ.ಮೀ. ಉದ್ದದ ರೈಲು ಮಾರ್ಗವನ್ನು ಒದಗಿಸಲಾಗಿದೆ. ಕಾರ್ಖಾನೆಯು ಅತ್ಯಾಧುನಿಕ ಯಂತ್ರೋಪಕರಣಗಳು, ಉಪಕರಣಗಳು, ಸರಕು ನಿರ್ವಹಣ ವ್ಯವಸ್ಥೆ ಮತ್ತು ವಿವಿಧ ಉಪಯುಕ್ತ ಸೌಲಭ್ಯಗಳಿಂದ ಸುಸಜ್ಜಿತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next