Advertisement

ಮೊದಲು ಜಾಗೃತಿ, ಬಳಿಕ ದಂಡ: ಮನಪಾ ಎಚ್ಚರಿಕೆ

11:44 PM Jul 02, 2019 | mahesh |

ಮಹಾನಗರ: ಮಂಗಳೂರು ನಗರ ವ್ಯಾಪ್ತಿಯಲ್ಲಿ ದಿನನಿತ್ಯ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಹಸಿ ಕಸ ಹಾಗೂ ಒಣ ಕಸವಾಗಿ ವಿಂಗಡಿಸಿ ಮಹಾನಗರ ಪಾಲಿಕೆ ವತಿಯಿಂದ ಮಾಡಲಾಗಿರುವ ಸಂಗ್ರಹಣಾ ವ್ಯವಸ್ಥೆಗೆ ನೀಡುವ ವ್ಯವಸ್ಥೆಗೆ ಸೋಮವಾರ ಚಾಲನೆ ನೀಡಲಾಗಿದೆ.

Advertisement

ಮೊದಲ ಹಂತದಲ್ಲಿ ಹಸಿಕಸ, ಒಣ ಕಸ ಪ್ರತ್ಯೇಕಿಸಿ ನೀಡುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಆರೋಗ್ಯ ಅಧೀಕ್ಷಕರು ಮನೆ ಮನೆಗೆ ತೆರಳಿ ಮಾಹಿತಿ ನೀಡುತ್ತಿದ್ದಾರೆ. ಇದಾದ ಬಳಿಕವೂ ಕಸ ಪ್ರತ್ಯೇಕಿಸದೆ ಇದ್ದಲ್ಲಿ ದಂಡ ವಿಧಿಸಲಾಗುತ್ತದೆ.

ಕಸ ಪ್ರತ್ಯೇಕಿಸದೆ ನೀಡುವ ಪರಿಣಾಮ ಡ್ಯಾಪಿಂಗ್‌ ಯಾರ್ಡ್‌ಗಳಲ್ಲಿ ತ್ಯಾಜ್ಯಗಳ ವಿಂಗಡನೆ ಕಷ್ಟವಾಗುತ್ತಿದೆ. ಸಂಸ್ಕರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಸದ್ಯ ಕಸ ವಿಂಗಡನೆಗಾಗಿ ಯಾವುದೇ ಯಂತ್ರಗಳು ಇರದೇ ಇರುವುದರಿಂದ ದಿನಕ್ಕೆ ಸಂಗ್ರಹಲ್ಲಾಗುತ್ತಿರುವ 350ರಿಂದ 450 ಟನ್‌ ಕಸಗಳನ್ನು ಡಂಪ್‌ ಮಾಡಬೇಕಾಗುತ್ತದೆ. ನಿತ್ಯ ಇಷ್ಟು ಕಸಗಳನ್ನು ಯಾರ್ಡ್‌ನಲ್ಲಿ ಹೂತರೂ ಇನ್ನೂ ನಾಲ್ಕು ವರ್ಷಗಳಲ್ಲಿ ಕಸ ಹಾಕಲು ಜಾಗದ ಕೊರತೆ ಉಂಟಾಗಲಿದೆ. ಈ ಬಗ್ಗೆ ಅನೇಕ ಬಾರಿ ಪಾಲಿಕೆ ಸಾರ್ವಜನಿಕರಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಪಾಲಿಕೆ ಈ ಬಾರಿ ದಂಡ ಹಾಗೂ ಕಸ ಸಂಗ್ರಹಿಸದೆ ಇರುವ ಬಗ್ಗೆ ಚಿಂತನೆ ನಡೆಸಿದೆ.

ಮಂಗಳೂರು ಮಹಾನಗರಪಾಲಿಕೆಯು ಘನತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮ 2016ನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಕ್ರಮ ವಹಿಸಿದೆ. ಘನತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮ 2016ರಂತೆ ಪ್ರತಿ ಮನೆಗಳು ಹಾಗೂ ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಬೇಕು. ಇಲ್ಲವಾದಲ್ಲಿ ದಂಡ ತೆರಬೇಕಾಗುತ್ತದೆ.

ಮನೆ ಮನೆಗೆ ಆರೋಗ್ಯ ಅಧೀಕ್ಷಕರು
ಕಸ ಪ್ರತ್ಯೇಕಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೆಲ್ತ್ ಇನ್ಸ್‌ಪೆಕ್ಟರ್‌ಗಳನ್ನು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಭೇಟಿ ನೀಡಿದ ಬಳಿಕ ಅದರ ದಾಖಲೆಗಳನ್ನು ಪರಿಸರ ಅಭಿಯಂತರಿಗೆ ನೀಡಲು ಸೂಚನೆ ನೀಡಲಾಗಿದೆ. ಒಬ್ಬ ಹೆಲ್ತ್ ಇನ್ಸ್‌ಪೆಕ್ಟರ್‌ ವಾರಕ್ಕೆ 500 ಮನೆಗಳಿಗೆ ಕಡ್ಡಾಯವಾಗಿ ತೆರಳಿ ಜಾಗೃತಿ ಮೂಡಿಸಬೇಕು ಎಂಬುದಾಗಿ ಸೂಚಿಸಲಾಗಿದೆ. ಇದನ್ನು ಹೊರತುಪಡಿಸಿ ಆ್ಯಂಟನಿ ಮ್ಯಾನೇಜ್‌ಮೆಂಟ್ ನೌಕರರು ಕೂಡ ಹಸಿ ಕಸ ಒಣ ಕಸ ಸಂಗ್ರಹಣೆ ಮಾಡುವಾಗ ಗಮನಿಸಬೇಕು ಹಾಗೂ ಜನರಿಗೆ ಈ ಬಗ್ಗೆ ತಿಳಿಸಬೇಕು. ಇಲ್ಲವಾದಲ್ಲಿ ಅವರಿಗೆ ನೀಡುವ ವೇತನದಲ್ಲಿ ಕಡಿತ ಮಾಡಲಾಗುತ್ತದೆ. ಅದಕ್ಕಾಗಿ ಆ್ಯಂಟನಿ ಸಂಸ್ಥೆಯ ಸೂಪರ್‌ವೈಸರ್‌ಗಳು ಈ ಬಗ್ಗೆ ನೌಕರರಿಗೆ ಹೇಳುತ್ತಿದ್ದಾರೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಕಸ ಬಿಸಾಡಿದರೆ ದಂಡ!
ರಸ್ತೆಯ ಬದಿಯಲ್ಲಿ ಕಸ ಬಿಸಾಡುವವರಿಗೆ ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ಹಾಗೂ ಮಹಾನಗರ ಪಾಲಿಕೆಯ ನೈರ್ಮಲಿಕರಣ ಮತ್ತು ಘನತ್ಯಾಜ್ಯ ವಸ್ತುಗಳ ಬೈಲಾ 2018ರ ಪ್ರಕಾರ 100 ರೂ. ನಿಂದ 25,000 ರೂ. ವರೆಗೆ ದಂಡ ವಿಧಿಸಲು ಅಧಿಕಾರವಿದೆ. ಇನ್ನುಳಿದಂತೆ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಅಥವಾ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸುವ ಸಲುವಾಗಿ ಕಠಿನ ಕ್ರಮ ವಹಿಸಿದೆ. ಇದರಂತೆ ಪ್ಲಾಸ್ಟಿಕ್‌ ಮಾರಾಟ ಮಾಡಿದ್ದಲ್ಲಿ ದಂಡ ಸಹಿತ ವಶಪಡಿಸಲಾಗುವುದು ಮತ್ತು ಕೇಸು ದಾಖಲಿಸಲಾಗುವುದು ಎಂದು ಮಂಗಳೂರು ಮಹಾನಗರಪಾಲಿಕೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next